ಬೆಂಗಳೂರು: ಲಿಂಗರಾಜಪುರಂನಲ್ಲಿ ಕಂಡುಬಂದ ಕಲುಷಿತ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ‘ವಾರ್ ಮೋಡ್’ ನಲ್ಲಿ ಕಾರ್ಯನಿರ್ವಹಿಸಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ 100 ಮೀಟರ್ ಉದ್ದದ ಹೊಸ ಪೈಪ್‌ಲೈನ್ ಅಳವಡಿಸುವ ಮೂಲಕ ದಾಖಲೆ ನಿರ್ಮಿಸಿದೆ.
ರೋಬೋಟಿಕ್ ತಂತ್ರಜ್ಞಾನದ ಮೂಲಕ 40 ವರ್ಷ ಹಳೆಯ ಪೈಪ್‌ನಲ್ಲಿ ದೋಷ ಕಂಡುಬಂದ ತಕ್ಷಣ, ಸಮಯ ವ್ಯರ್ಥ ಮಾಡದೆ ಇಂಜಿನಿಯರಿಂಗ್ ತಂಡ ಹಗಲಿರುಳು ಶ್ರಮಿಸಿ ಹಳೆಯ ಪೈಪ್‌ಗಳನ್ನು ತೆರವುಗೊಳಿಸಿ ಹೊಸ ಪೈಪ್‌ಗಳನ್ನು ಅಳವಡಿಸಿದೆ.
ಕಾಮಗಾರಿಯ ಪ್ರಗತಿ ವಿವರ:
ಒಟ್ಟು ಪೈಪ್ ಲೈನ್: ಕಳೆದ 24 ಗಂಟೆಯಲ್ಲಿ ಒಟ್ಟು 100 ಮೀಟರ್ ಉದ್ದದ ಹೊಸ ನೀರಿನ ಕೊಳವೆ ಮಾರ್ಗವನ್ನು ಅಳವಡಿಸಲಾಗಿದೆ.
ಮನೆಗಳ ಸಂಪರ್ಕ (HSC): ಈ ವ್ಯಾಪ್ತಿಯಲ್ಲಿ ಒಟ್ಟು 19 ಮನೆಗಳಿಗೆ ಹೊಸ ಸಂಪರ್ಕ ಕಲ್ಪಿಸಬೇಕಿದ್ದು, ಅದರಲ್ಲಿ 14 ಮನೆಗಳ ಸಂಪರ್ಕ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.
ಅಂತಿಮ ಹಂತ: ಬಾಕಿ ಉಳಿದಿರುವ 5 ಮನೆಗಳ ಸಂಪರ್ಕ ಕಾರ್ಯ ಪ್ರಗತಿಯಲ್ಲಿದ್ದು, ಕೆಲವೇ ಗಂಟೆಗಳಲ್ಲಿ ಪೂರ್ಣಗೊಳ್ಳಲಿದೆ.
ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ ಜಲಮಂಡಳಿ ಅಧ್ಯಕ್ಷರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮರೋಪಾದಿಯಲ್ಲಿ ಕೆಲಸ ಮಾಡಿ, ಒಂದೇ ದಿನದಲ್ಲಿ 100 ಮೀಟರ್ ಲೈನ್ ಬದಲಾಯಿಸಿರುವುದು ನಮ್ಮ ತಂಡದ ಕಾರ್ಯಕ್ಷಮತೆಗೆ ಸಾಕ್ಷಿ. ಉಳಿದ ಕೆಲಸವನ್ನು ತ್ವರಿತವಾಗಿ ಮುಗಿಸಿ ಇಂದೇ ಶುದ್ಧ ನೀರು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
