ಸಮಗ್ರ ಸುದ್ದಿ

ರೈಲ್‌ ಒನ್ ಅಪ್ಲಿಕೇಶನ್‌ನಲ್ಲಿ ಯಾವುದೇ ಡಿಜಿಟಲ್ ಪಾವತಿ ವಿಧಾನದ ಮೂಲಕ ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸಿದರೆ 3% ರಿಯಾಯಿತಿ

Share

ಬೆಂಗಳೂರು : ಭಾರತೀಯ ರೈಲ್ವೆಯು ರೈಲ್ಒನ್ ಮೊಬೈಲ್ ಅಪ್ಲಿಕೇಷನ್ ಮೂಲಕ ಕಾಯ್ದಿರಿಸದ ಟಿಕೆಟ್ ಗಳನ್ನು ಯುಪಿಐ, ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು ಮತ್ತು ಆರ್-ವ್ಯಾಲೆಟ್ ಸೇರಿದಂತೆ ಯಾವುದೇ ಡಿಜಿಟಲ್ ಪಾವತಿ ವಿಧಾನದಲ್ಲಿ ಖರೀದಿಸಿದರೂ ಕೂಡಾ 3% ರಿಯಾಯಿತಿಯನ್ನು ನೀಡಲಿದೆ.

ಈ ಮೊದಲು, ಈ ರಿಯಾಯಿತಿ ಆರ್-ವ್ಯಾಲೆಟ್ ಮೂಲಕ ಮಾಡಿದ ಪಾವತಿಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಈಗ, ಪ್ರಯಾಣಿಕರು ಯಾವುದೇ ಡಿಜಿಟಲ್ ಪಾವತಿ ಆಯ್ಕೆಯ ಮೂಲಕ ಪಾವತಿಸಿದರೂ ಈ ಪ್ರಯೋಜನ ದೊರೆಯಲಿದೆ. ಎಲ್ಲ ಡಿಜಿಟಲ್ ಪಾವತಿಗಳ ಮೇಲೆ 3% ರಿಯಾಯಿತಿಯ ಕೊಡುಗೆಯು ಜನವರಿ 14 ರಿಂದ 2026 ರ ಜುಲೈ 14 ರವರೆಗೆ ಲಭ್ಯವಿರಲಿದೆ.

ರೈಲ್‌ ಒನ್ ಮೊಬೈಲ್‌ ಅಪ್ಲಿಕೇಶನ್, ಪ್ರಯಾಣಿಕರಿಗೆ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಟಿಕೆಟ್‌ಗಳ ಖರೀದಿ ಮಾತ್ರವಲ್ಲದೆ, ರೈಲುಗಳ ನೈಜಕಾಲದ ಸಂಚಾರದ ಸ್ಥಿತಿಗತಿ (Live Train Running Status) ಹಾಗೂ ಪಿ.ಎನ್.ಆರ್ ಸ್ಥಿತಿಗತಿ ತಿಳಿಯಲು, ದೂರುಗಳ ನೋಂದಣಿ, ರೈಲ್ ಮದದ್ ಮೂಲಕ ಸಹಾಯ, ಆಹಾರವನ್ನು ಆರ್ಡರ್ ಮಾಡುವುದು ಮುಂತಾದ ಸೇವೆಗಳನ್ನು ಒದಗಿಸುತ್ತದೆ.

ಈ ಮೊಬೈಲ್‌ ಅಪ್ಲಿಕೇಶನ್ ಎಂ-ಪಿನ್ ಮತ್ತು ಬಯೋಮೆಟ್ರಿಕ್ ದೃಢೀಕರಣದ ಮೂಲಕ ಸುರಕ್ಷಿತ ಲಾಗಿನ್ ಅನ್ನು ಖಾತ್ರಿಪಡಿಸುತ್ತದೆ. ತ್ವರಿತ ಮತ್ತು ಅನುಕೂಲಕರ ಪಾವತಿಗಾಗಿ ಆರ್-ವ್ಯಾಲೆಟ್ ಸೌಲಭ್ಯವನ್ನು ಒಳಗೊಂಡಿದೆ. ಈಗಾಗಲೇ ಇರುವ ಐ.ಆರ್.ಸಿ.ಟಿ.ಸಿ. ರೈಲ್ ಕನೆಕ್ಟ್ ಮತ್ತು ಯುಟಿಎಸ್ ಖಾತೆದಾರರು, ಅದೇ ರುಜುವಾತುಗಳನ್ನು ಬಳಸಿಕೊಂಡು ರೈಲ್ ಒನ್ ಅಪ್ಲಿಕೇಶನ್‌ಗೆ ಲಾಗಿನ್ ಆಗಬಹುದಾಗಿದೆ. ಸುಲಭ ಮತ್ತು ನಗದು ರಹಿತ ಟಿಕೆಟ್ ಬುಕಿಂಗ್‌ಗಾಗಿ ರೈಲ್ ಒನ್ ಮೊಬೈಲ್ ಅಪ್ಲಿಕೇಶನ್‌ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ರೈಲ್ವೇ ಇಲಾಖೆ ಪ್ರಕಟಣೆ ತಿಳಿಸಿದೆ.


Share

You cannot copy content of this page