ಸಮಗ್ರ ಸುದ್ದಿ

ಎಲೆವೇಟ್-2025 ರಲ್ಲಿ 146 ನವೋದ್ಯಮಗಳಿಗೆ ಸನ್ಮಾನ | ರಾಜ್ಯದ ನವೋದ್ಯಮ ನೀತಿ 2025–30 ಅನಾವರಣ | ಸ್ಟಾರ್ಟ್‌ಅಪ್‌ ನೀತಿ ಜಾರಿಗೆ ₹ 570.67 ಕೋಟಿ ಮೊತ್ತ ಮೀಸಲು – ಪ್ರಿಯಾಂಕ್ ಖರ್ಗೆ

Share

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ಉದ್ಯಮಶೀಲತೆಗೆ ಇನ್ನಷ್ಟು ಉತ್ತೇಜನ ನೀಡಿ ಕರ್ನಾಟಕವನ್ನು ಜಾಗತಿಕ ನಾವೀನ್ಯತೆಯ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ‘ನವೋದ್ಯಮ ನೀತಿ 2025–2030’ನ್ನು ರಾಜ್ಯ ಸರ್ಕಾರವು ಅನಾವರಣಗೊಳಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ರಾಷ್ಟ್ರೀಯ ʼನವೋದ್ಯಮ ಮಾಸʼದ ಭಾಗವಾಗಿ, ಕರ್ನಾಟಕ ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಆಶ್ರಯದಲ್ಲಿ ಬೆಂಗಳೂರಿನಲ್ಲಿಂದು ನಡೆದ ನವೋದ್ಯಮಗಳಿಗೆ ನೆರವಾಗುವ ʼಐಡಿಯಾ2ಪಿಒಸಿ ಎಲೆವೇಟ್‌ 2025ʼ ಉಪಕ್ರಮದ 146 ವಿಜೇತರ ಸನ್ಮಾನ ಸಮಾರಂಭದಲ್ಲಿ ಈ ನೀತಿಯನ್ನು ಬಿಡುಗಡೆ ಮಾಡಲಾಯಿತು.

ಮಹಿಳೆ ನೇತೃತ್ವದ ಹಾಗೂ ಗ್ರಾಮೀಣ ನವೋದ್ಯಮಗಳಿಗೆ ಆದ್ಯತೆ ನೀಡಲಾಗಿದೆ.ನವೋದ್ಯಮಗಳ ಎಲ್ಲ ಹಂತಗಳಲ್ಲಿ ಸರ್ಕಾರದ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

ಮುಂದಿನ ಐದು ವರ್ಷಗಳ ಉದ್ಯಮಶೀಲ ಬೆಳವಣಿಗೆಗೆ ಮಾರ್ಗಸೂಚಿ ಹೊಂದಿರುವ ಈ ನೀತಿಯು, 2030ರ ವೇಳೆಗೆ ಬೆಂಗಳೂರು ಆಚೆಗಿನ ಕ್ಲಸ್ಟರ್‌ಗಳಲ್ಲಿ ಕನಿಷ್ಠ 10,000 ನವೋದ್ಯಮಗಳು ಸೇರಿದಂತೆ ರಾಜ್ಯದಾದ್ಯಂತ 25,000 ಸ್ಟಾರ್ಟ್ಅಪ್‌ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ ಎಂದು ಮಾಹಿತಿ ನೀಡಿದರು.

ಸ್ಟಾರ್ಟ್ ಅಪ್ ನೀತಿ ಜಾರಿಗೊಳಿಸಲು ಇಲಾಖೆಯು ₹570.67 ಕೋಟಿ ಮೊತ್ತವನ್ನು ಮೀಸಲು ಇರಿಸಿದೆ, ಹಣಕಾಸು, ಪೋಷಣೆ, ಮಾರ್ಗದರ್ಶನ, ಮಾರುಕಟ್ಟೆ ಲಭ್ಯತೆ, ಅಂತರರಾಷ್ಟ್ರೀಯ ಸಹಯೋಗ, ಸೇರ್ಪಡೆ, ಸುಸ್ಥಿರತೆ ಮತ್ತು ನಿಯಂತ್ರಣ ಕ್ರಮಗಳಿಗೆ ನೆರವು – ಒಳಗೊಂಡಂತೆ ಒಟ್ಟು ಏಳು ಪ್ರಮುಖ ಆಧಾರ ಸ್ತಂಭಗಳನ್ನು ಈ ನೀತಿಯು ಆಧರಿಸಿದೆ ಎಂದು ಹೇಳಿದರು.

ಮಹಿಳಾ ನೇತೃತ್ವದ ಉದ್ಯಮಗಳು, ತಳಮಟ್ಟದ ನಾವೀನ್ಯಕಾರರು, ಗ್ರಾಮೀಣ ಉದ್ಯಮಿಗಳು ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ಉದ್ಯಮಗಳನ್ನು ಬೆಂಬಲಿಸುವ ಮೂಲಕ ಎಲ್ಲರ ಒಳಗೊಳ್ಳುವಿಕೆಗೆ ಆದ್ಯತೆ ನೀಡಲಿದೆ. ಸರ್ಕಾರ ಮೊದಲು- ಯೋಜನೆಯಡಿ, ಉತ್ಪನ್ನ ಮತ್ತು ಪರಿಹಾರ ನೀಡುವ ಸ್ಟಾರ್ಟ್‌ಅಪ್‌ಗಳಿಗೆ ಕರ್ನಾಟಕ ಸರ್ಕಾರವನ್ನು ತಮ್ಮ ಮೊದಲ ಗ್ರಾಹಕರಾಗಿ ಹೊಂದುವ ವಿಶಿಷ್ಟ ಅವಕಾಶವನ್ನು ನೀಡಲಾಗುವುದು ಎಂದರು.

ಆರಂಭಿಕ ಪರಿಕಲ್ಪನೆಯಿಂದ ಆರಂಭಿಸಿ ಜಾಗತಿಕ ವಿಸ್ತರಣೆ ಮತ್ತು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಷೇರುಪೇಟೆ ಪ್ರವೇಶಿಸುವ ಹಂತದವರೆಗೂ ನವೋದ್ಯಮಗಳಿಗೆ ಬೆಂಬಲ ನೀಡುವ ರೀತಿಯಲ್ಲಿ ಈ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ನವೋದ್ಯಮಿಗಳಿಗೆ ಸನ್ಮಾನ:

ಸನ್ಮಾನಕ್ಕೆ ಪಾತ್ರರಾದ ನವೋದ್ಯಮಿಗಳಲ್ಲಿ 103 ಎಲೆವೇಟ್‌ 2025 ವಿಜೇತರು, 33 ಎಲೆವೇಟ್‌ ಉನ್ನತಿ ವಿಜೇತರು ಮತ್ತು 10 ಎಲೆವೇಟ್‌ ಅಲ್ಪಸಂಖ್ಯಾತ ನವೋದ್ಯಮಿಗಳು ಸೇರಿದ್ದಾರೆ. ಅರ್ಹ ನವೋದ್ಯಮಗಳಿಗೆ ಒಟ್ಟು ₹ 38.85 ಕೋಟಿ ಮೊತ್ತದ ಅನುದಾನ ವಿತರಿಸಲಾಗಿದೆ.

ರಾಜ್ಯದಲ್ಲಿನ ಆರಂಭಿಕ ಹಂತದ ನವೋದ್ಯಮಗಳ ಹೊಸ ಚಿಂತನೆಗಳನ್ನು ಪೋಷಿಸುವ ಮತ್ತು ನವೋದ್ಯಮ ವ್ಯವಸ್ಥೆ ಬಲಪಡಿಸುವ ಪಯಣದಲ್ಲಿನ ಮತ್ತೊಂದು ಮಹತ್ವದ ಮೈಲಿಗಲ್ಲಿಗೆ ಈ ಸನ್ಮಾನ ಸಮಾರಂಭವು ಸಾಕ್ಷಿಯಾಯಿತು.

ಎಲೆವೇಟ್‌ ಕಾರ್ಯಕ್ರಮದಡಿಯಲ್ಲಿ ಗುರುತಿಸಲ್ಪಟ್ಟ ನವೋದ್ಯಮಗಳಿಗೆ ₹ 50 ಲಕ್ಷಗಳವರೆಗೆ ಒಂದು ಬಾರಿಯ ಅನುದಾನ ಒದಗಿಸಲಾಗುತ್ತಿದೆ. ಇದರ ಜೊತೆಗೆ, ಉತ್ಪನ್ನ ಅಭಿವೃದ್ಧಿ ಮತ್ತು ದೃಢೀಕರಣಕ್ಕೆ ನೆರವಾಗಲು ನವೋದ್ಯಮಗಳಿಗೆ ಚಿಮ್ಮುಹಲಗೆಯಾಗಿ ಕಾರ್ಯನಿರ್ವಹಿಸುವ ಸರ್ಕಾರಿ ಬೆಂಬಲಿತ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಮಾರ್ಗದರ್ಶನ ಮತ್ತು ಸೂಕ್ತ ನೆರವು ನೀಡಲಾಗುತ್ತಿದೆ.

ಎಲೆವೇಟ್‌ ಮೂಲಕ, ರಾಜ್ಯದಾದ್ಯಂತದ ನವೋದ್ಯಮಿಗಳು ತಮ್ಮ ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಅನುವು ಮಾಡಿಕೊಡಲಾಗುತ್ತಿದೆ. ಎಲೆವೇಟ್‌ ಕಾರ್ಯಕ್ರಮದಡಿ ಉದ್ಯಮಶೀಲತೆಯ ಪಯಣದ ವಿವಿಧ ಹಂತಗಳಲ್ಲಿ ಭರವಸೆ ಮೂಡಿಸಿರುವ ನವೋದ್ಯಮಗಳನ್ನು ಗುರುತಿಸಿ ಅಗತ್ಯ ಬೆಂಬಲ ನೀಡಲಾಗುತ್ತಿದೆ.

ನವೋದ್ಯಮಗಳು ಸುಸ್ಥಿರ ರೀತಿಯಲ್ಲಿ ಬೆಳೆಯಲು ಅನುವು ಮಾಡಿಕೊಡಲಾಗುತ್ತಿದೆ. ನವೋದ್ಯಮಗಳ ಒಡೆತನದಲ್ಲಿ ಯಾವುದೇ ಪಾಲು ತೆಗೆದುಕೊಳ್ಳದೆ ಹಣಕಾಸಿನ ನೆರವು ನೀಡುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು ಭರವಸೆಯದಾಯಕ ನವೋದ್ಯಮಗಳ ಬಗ್ಗೆ ರಾಜ್ಯ ಸರ್ಕಾರ ತಳೆದಿರುವ ಪ್ರಗತಿಪರ ಮತ್ತು ಅನುಕೂಲಕರ ಧೋರಣೆಗೆ ನಿದರ್ಶನವಾಗಿದೆ.

ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಮಾಹಿತಿ – ಜೈವಿಕ ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು, ʼಎಲೆವೇಟ್‌ ಕಾರ್ಯಕ್ರಮದ ನಿರಂತರ ಯಶಸ್ಸು ಅದರ ಕಾಲಮಿತಿಗೆ ಒಳಪಟ್ಟಿರುವ ಸರ್ಕಾರದ ಕಾರ್ಯತಂತ್ರದ ಅನುಷ್ಠಾನದಲ್ಲಿ ಅಡಗಿದೆʼ ಎಂದು ಪುನರುಚ್ಚರಿಸಿದರು.

2017 ರಲ್ಲಿ ಪ್ರಾರಂಭವಾದ ಎಲೆವೇಟ್‌, ಹಣಕಾಸಿನ ನೆರವು, ಮಾರ್ಗದರ್ಶನ ಮತ್ತು ಪೂರಕ ಪರಿಸರ ಒದಗಿಸುವ ಮೂಲಕ ನವೋದ್ಯಮಗಳ ಚಿಂತನೆಗಳನ್ನು ಕಾರ್ಯಗತಗೊಳಿಸುವ ಸಮರ್ಥ ವೇದಿಕೆಯಾಗಿ ಬೆಳೆದಿದೆ. ಈ ಕಾರ್ಯಕ್ರಮವು ರಾಜ್ಯದಾದ್ಯಂತ ತಾಂತ್ರಿಕ ಪ್ರಗತಿ, ಉದ್ಯೋಗ ಸೃಷ್ಟಿ ಮತ್ತು ಸಮಗ್ರ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವುದನ್ನು ಮುಂದುವರೆಸಿದೆ ಎಂದು ಹೇಳಿದರು.

ಸನ್ಮಾನ ಸಮಾರಂಭದಲ್ಲಿ ಶಿವಾಜಿನಗರದ ಶಾಸಕ ರಿಜ್ವಾನ್‌ ಅರ್ಷದ್, ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ಆ್ಯಂಡ್‌ಟಿ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್, ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಮತ್ತು ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್) ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಹುಲ್ ಶರಣಪ್ಪ ಸಂಕನೂರ ಅವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ, ಕೊ-ರೋವರ್‌ಡಾಟ್‌ಎಐ (Co-Rover.ai)-ನ ಸ್ಥಾಪಕ ಮತ್ತು ಸಿಇಒ ಶ್ರೀ ಅಂಕುಶ್ ಸಭರ್ವಾಲ್ ಮತ್ತು ಟ್ರಾಷ್‌ಕಾನ್‌ -ನ ಸ್ಥಾಪಕಿ ಮತ್ತು ಸಿಇಒ ಶ್ರೀಮತಿ ನಿವೇಧಾ ಆರ್‌.ಎಂ ಅವರು ತಮ್ಮ ನವೋದ್ಯಮಗಳ ಯಶೋಗಾಥೆಗಳನ್ನು ಹಂಚಿಕೊಂಡರು. ತಮ್ಮ ನಾವೀನ್ಯತೆಯ ಚಿಂತನೆಗಳನ್ನು ಕಾರ್ಯಗತಗೊಳಿಸಲು ಮತ್ತು ನವೋದ್ಯಮ ಬೆಳೆಸುವಲ್ಲಿ ಎಲೆವೇಟ್‌ ಉಪಕ್ರಮವು ಪ್ರಮುಖ ಪಾತ್ರ ನಿರ್ವಹಿಸಿರುವುದನ್ನು ವಿವರಿಸಿದರು.

ಮೂರು ಹೊಸ ಉಪಕ್ರಮಗಳ ಘೋಷಣೆ:

ಎಲೆವೇಟ್‌ 2025 ಕಾರ್ಯಕ್ರಮದಲ್ಲಿ, ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯು ರಾಜ್ಯದ ಸ್ಟಾರ್ಟ್ ಅಪ್ ವ್ಯವಸ್ಥೆ ಬಲಪಡಿಸುವ, ಡೀಪ್‌ಟೆಕ್ ನಾವೀನ್ಯತೆಗೆ ವೇಗ ನೀಡುವ ಮತ್ತು ಬೆಂಗಳೂರಿನ ಆಚೆಗೆ ಉದ್ಯಮಶೀಲತೆ ವಿಸ್ತರಿಸುವ ಗುರಿ ಹೊಂದಿರುವ ಮೂರು ಹೊಸ ಉಪಕ್ರಮಗಳನ್ನು ಕಾರ್ಯಗತಗೊಳಿಸುವುದಾಗಿ ಘೋಷಿಸಿತು.

ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಕ್ಷೇತ್ರಗಳಲ್ಲಿ ಕೆಲಸ ಮಾಡುವ ನವೋದ್ಯಮಗಳನ್ನು ಪೋಷಿಸಲು ವಿನ್ಯಾಸಗೊಳಿಸಲಾಗಿರುವ ಸ್ಥಳೀಯ ಆರ್ಥಿಕತೆಯ ವೇಗವರ್ಧಕ ಕಾರ್ಯಕ್ರಮದ (ಲೀಪ್‌) ಚೌಕಟ್ಟಿನ ಅಡಿಯಲ್ಲಿ ಡೀಪ್‌ಟೆಕ್-ಕೇಂದ್ರಿತ ಕಾರ್ಯಕ್ರಮವಾದ ಎಲೆವೇಟ್‌ ನೆಕ್ಸ್ಟ್‌ ಪ್ರಕಟಿಸಲಾಯಿತು.

ನಾವೀನ್ಯತೆ ಆಧಾರಿತ ಕೈಗಾರಿಕಾ ಪರಿವರ್ತನೆಯಲ್ಲಿ ಕರ್ನಾಟಕದ ನಾಯಕತ್ವವನ್ನು ಪುನಃ ದೃಢಪಡಿಸಲು ಎಲೆವೇಟ್‌ ನೆಕ್ಸ್ಟ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕಾಗಿ ₹ 150 ಕೋಟಿ ನಿಗದಿಪಡಿಸಲಾಗಿದೆ. ಆಯ್ಕೆಯಾದ ಪ್ರತಿಯೊಂದು ಅರ್ಹ ನವೋದ್ಯಮವು ₹ 1 ಕೋಟಿ ನೆರವು ಪಡೆಯಲಿದೆ.

ಕೃತಕ ಬುದ್ಧಿಮತ್ತೆ, ಮಷಿನ್‌ಲರ್ನಿಂಗ್‌, ಐಒಟಿ, ಬ್ಲಾಕ್‌ಚೇನ್‌,ಎಆರ್‌/ವಿಆರ್‌, ರೋಬೊಟಿಕ್ಸ್, ಡ್ರೋನ್‌ ಮತ್ತಿತರ ಕ್ಷೇತ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಸ್ಟಾರ್ಟ್‌ಅಪ್‌ಗಳಿಗೆ ಎಲೆವೇಟ್‌ ನೆಕ್ಸ್ಟ್‌- ನೆರವಾಗಲಿದೆ.

ಈ ಕಾರ್ಯಕ್ರಮವು ದೇಶದಾದ್ಯಂತದ ಅರ್ಹ ಡೀಪ್‌ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಮುಕ್ತವಾಗಿರಲಿದೆ.

ಈ ಕಾರ್ಯಕ್ರಮದಡಿ ಆಯ್ಕೆಯಾಗುವ ಇತರ ರಾಜ್ಯಗಳಿಗೆ ಸೇರಿದ ನವೋದ್ಯಮಗಳು, ಈ ಹಣಕಾಸು ನೆರವಿಗೆ ಅರ್ಹತೆ ಪಡೆದಿರುವುದನ್ನು ಘೋಷಿಸಿದ ನಾಲ್ಕು ತಿಂಗಳಲ್ಲಿ ತಮ್ಮ ಕಂಪನಿಯ ನೋಂದಣಿಯನ್ನು ಕರ್ನಾಟಕದಲ್ಲಿ ಬದಲಾಯಿಸುವ ಅಗತ್ಯ ಇದೆ.

ಬೆಂಗಳೂರು ಆಚೆಗೆ ನವೋದ್ಯಮ ಸ್ಥಾಪನೆ ಉತ್ತೇಜಿಸಲು ₹ 75 ಕೋಟಿ ಮೊತ್ತದ ನಿಧಿ ಸ್ಥಾಪನೆ ಬೆಂಗಳೂರು ಆಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿ – ಧಾರವಾಡ ಕೈಗಾರಿಕಾ ಸಮೂಹಗಳಲ್ಲಿ ನವೋದ್ಯಮಗಳ ಸ್ಥಾಪನೆ ಉತ್ತೇಜಿಸಲು ಆರಂಭಿಕ ಹಂತದ ಹಣಕಾಸು ನೆರವು ಒದಗಿಸುವ ಉದ್ದೇಶಕ್ಕೆ ₹ 75 ಕೋಟಿ ಮೊತ್ತದ ನಿಧಿ ಸ್ಥಾಪಿಸುವ ನಿರ್ಧಾರ ಪ್ರಕಟಿಸಲಾಗಿದೆ.

ಕರ್ನಾಟಕ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಪ್ರೈವೇಟ್ ಲಿಮಿಟೆಡ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಹಯೋಗದೊಂದಿಗೆ ನಿರ್ವಹಿಸಲ್ಪಡುವ ಈ ನಿಧಿಯು ಉದ್ಯೋಗ ಸೃಷ್ಟಿ, ರಫ್ತು ಬೆಳವಣಿಗೆ ಮತ್ತು ನವೋದ್ಯಮಗಳ ವಿಸ್ತರಣೆ ಹೆಚ್ಚಿಸುವ ಹಾಗೂ ಉದ್ಯಮಶೀಲತೆ ಪ್ರತಿಭೆ ಪೋಷಿಸುವ ಗುರಿ ಹೊಂದಿದೆ.


Share

You cannot copy content of this page