ಸಮಗ್ರ ಸುದ್ದಿ

ಹಳೆ ಪದ್ದತಿಯ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ: ಸಚಿವ ಕೆ.ಹೆಚ್. ಮುನಿಯಪ್ಪ

Share

ಬೆಂಗಳೂರು ಗ್ರಾಮಾಂತರ: ಇಂದಿನ ಜೀವನ ಶೈಲಿಯಿಂದ ನಾನಾ ಕಾಯಿಲೆಗಳು ಬರುತ್ತಿವೆ. ನಮ್ಮ ಆರೋಗ್ಯ ಸಮತೋಲನ ಕಾಪಾಡಿಕೊಳ್ಳಲು ಹಳೆ ಪದ್ದತಿಯ ಸಿರಿಧಾನ್ಯಗಳ ಆಹಾರ ಸೇವನೆಗೆ ಮರಳಬೇಕಿದ್ದು, ದಿನಪ್ರತಿ ನವಣೆ, ಸಜ್ಜೆ, ಉದ್ದು, ರಾಗಿ ಮತ್ತು ಜೋಳದಂತ ಸಿರಿಧಾನ್ಯ ಆಹಾರ ಸೇವನೆ ರೂಡಿಸಿಕೊಳ್ಳುವದು ಅಗತ್ಯ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಹೇಳಿದರು.

ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಜಿಲ್ಲಾ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾದ “ಜಿಲ್ಲಾ ಮಟ್ಟದ ಸಿರಿಧಾನ್ಯ ನಡಿಗೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತದಲ್ಲಿ ಹಿಂದಿನ ಕಾಲದ ಪೂರ್ವಜರು 75 ಭಾಗದಷ್ಟು ಕೃಷಿ ಕೆಲಸದಲ್ಲಿ ತೊಡಗಿ, ಸಿರಿಧಾನ್ಯ ಪದಾರ್ಥ ಹಾಗೂ ಹಣ್ಣು-ಹಂಪಲು ಸೇವಿಸುತ್ತಾ, ಗಟ್ಟಿ ಶರೀರದಿಂದ 100 ವರ್ಷ ಬಾಳುತ್ತಿದ್ದರು. ಅವರ ಸರಿಯಾದ ಆಹಾರ ಪದ್ಧತಿಯಿಂದ ಸಮತೋಲನ ಜೀವನ ನಡೆಸಲು ಸಾಧ್ಯವಾಗುತ್ತಿತ್ತು ಎಂದರು.

ಇಂದಿನ ಪೀಳಿಗೆ ಫಾಸ್ಟ್‌ ಫುಡ್‌ ಸೇವನೆಯಿಂದ ಆರೋಗ್ಯ ಕುಗ್ಗುತ್ತಿದೆ. ಅವರಲ್ಲಿ ಸಿರಿಧಾನ್ಯ ಆಹಾರ ಸೇವನೆ ಬಗ್ಗೆ ಜಾಗೃತಿ ಅತ್ಯವಶ್ಯವಾಗಿದೆ. ಜತೆಗೆ ಬರ್ತ್ ಡೇ ಸಮಯದಲ್ಲಿ ಮಕ್ಕಳಿಗೆ ಕೇಕ್ ಬದಲು ಸಿರಿಧಾನ್ಯ, ಹಾಲು, ರಾಗಿ ಮೀಲ್ಟ್ ಸೇವನೆಗೆ ನೀಡಬೇಕು. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ವೃದ್ಧಿಗೂ ಸಹಕಾರಿಯಾಗುತ್ತದೆ. ಇದರ ಅರಿವು ಮೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ಪಾಲಕರ ಮೇಲಿದೆ ಎಂದು ಸಚಿವರು ಕಿವಿ ಮಾತು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಆರೋಗ್ಯ ವೃದ್ಧಿಸುವ ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡಿ, ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹಿಸುತ್ತಿದೆ ಎಂದರು.

ದೇವನಹಳ್ಳಿ ಟೌನ್ ಕ್ರೀಡಾಂಗಣದಿಂದ ನಗರದ ವಿವಿಧ ರಸ್ತೆಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಸಿರಿಧಾನ್ಯ ಜಾಗೃತಿ ನಡಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಬಿ.ರಾಜಣ್ಣ, ತಾಲ್ಲೂಕು ಅಧ್ಯಕ್ಷರಾದ ಸಿ.ಜಗನ್ನಾಥ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕಲಾವತಿ ಮತ್ತಿತರರು ಭಾಗವಹಿಸಿದ್ದರು.


Share

You cannot copy content of this page