ಸಮಗ್ರ ಸುದ್ದಿ

ಕೆ ಸಿ ಜನರಲ್ ಆಸ್ಪತ್ರೆಯ ಅವರಣದಲ್ಲಿ ಸುಸಜ್ಜಿತ ಟ್ರಾಮಾ ಆಸ್ಪತ್ರೆ ಮಾರ್ಚ್ ನಲ್ಲಿ ಲೋಕಾರ್ಪಣೆ: ದಿನೇಶ್ ಗುಂಡೂರಾವ್

Share

ಬೆಂಗಳೂರು: ಬೆಂಗಳೂರು ಉತ್ತರ ಭಾಗ ಮತ್ತು ಸುತ್ತಮುತ್ತಲ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಾರ್ಚ್ ತಿಂಗಳಲ್ಲಿ ಮಲ್ಲೇಶ್ವರಂ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್ ನೂತನ ಕಟ್ಟಡದಲ್ಲಿ ಪ್ರಾರಂಭವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.

ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ವಿವಿಧ ಕಾಮಗಾರಿ ಹಾಗೂ ಸಮಸ್ಯೆಗಳ ಪರಿಶೀಲನೆ ನಡೆಸಿ ಮಾತನಾಡಿದರು.

50 ಬೆಡ್ ಸೌಲಭ್ಯದ ಟ್ರಾಮಾ ಕೇರ್ ಸೆಂಟರ್ ನಲ್ಲಿ 14 HDU ಹಾಸಿಗೆ, 15 ಐಸಿಯು, 2 ಶಸ್ತ್ರಚಿಕಿತ್ಸೆ ಕೊಠಡಿಯ ಸೌಲಭ್ಯ ಇರಲಿದೆ. ಬ್ಲಡ್ ಬ್ಯಾಂಕ್, ಡಿಎನ್ ಬಿ ಅಧ್ಯಯನಕ್ಕಾಗಿ ನೂತನ ಕಟ್ಟಡ ಸಿದ್ದವಾಗುತ್ತಿದೆ ಎಂದು ಹೇಳಿದರು.

ತಾಯಿ ಮಕ್ಕಳ ಆಸ್ಪತ್ರೆಯೂ ಸಹ ಹೊಸ ಸುಸಜ್ಜಿತ ಕಟ್ಟಡದಲ್ಲಿ ಇದೇ ವರ್ಷದ ಡಿಸೆಂಬರ್ ವೇಳೆಗೆ ಲೋಕಾರ್ಪಣೆ ಆಗಲಿದೆ. ಸಿಬ್ಬಂದಿ ಕೊರತೆ ಸರಿ ಮಾಡುತ್ತಿದ್ದೇವೆ. ಅಗತ್ಯ ಬಿದ್ದರೆ ವೈದ್ಯರನ್ನ ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಿಕೊಳ್ಳುತ್ತೇವೆ. ಇಲ್ಲಿರುವ ಮಕ್ಕಳ ವಿಶೇಷ ಚಿಕಿತ್ಸಾ ಕೇಂದ್ರದ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು.

ಆಸ್ಪತ್ರೆಯ ಆವರಣದಲ್ಲಿರುವ ಜಯದೇವ ಹೃದಯ ಆಸ್ಪತ್ರೆಯ ಕೇಂದ್ರ, ಮಕ್ಕಳ ಐಸಿಯು ಕೇಂದ್ರ, ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ರೋಗಿಗಳಿಂದ ಮಾಹಿತಿ ಪಡೆದರು.

*ರಾಜೀವ್ ಗೌಡ ಬಂಧನದ ವಿಚಾರ:*

ಬಂಧಿಸಿಲ್ಲ ಅಂದ್ರೆ ಅವರೆಲ್ಲೋ ತಪ್ಪಿಸಿಕೊಂಡು ಓಡಾಡುತ್ತಾ ಇದ್ದಾರೆ. ಬಂಧಿಸುವುದಕ್ಕೆ ನಮ್ಮ ಸರ್ಕಾರ ಎಲ್ಲ ಕ್ರಮ ತೆಗೆದುಕೊಳ್ಳುತ್ತದೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ನಮ್ಮ ಪಕ್ಷನೇ ಆಗಲಿ, ಬೇರೆ ಪಕ್ಷದವರೇ ಆಗಲಿ ತಪ್ಪು ಮಾಡಿದ್ರೆ ಕ್ರಮ ಆಗಲೇಬೇಕು, ಆಗುತ್ತದೆ. ಸಾರ್ವಜನಿಕ ಜೀವನದಲ್ಲಿರುವವರ ವರ್ತನೆ ಸಭ್ಯತೆಯಿಂದ ಕೂಡಿರಬೇಕು ಎಂದರು.

*ಸಿಎಂ ಸಿದ್ದರಾಮಯ್ಯ ಬಜೆಟ್ ಸಿದ್ದತೆ ವಿಚಾರ:*

ಅವರು ಮುಖ್ಯಮಂತ್ರಿಗಳು ಜೊತೆಗೆ ವಿತ್ತ ಸಚಿವರು ಹೌದು ಹಾಗಾಗಿ ಸಿದ್ಧತೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ನಮಗೆ ಬಹಳಷ್ಟು ಸವಾಲುಗಳು ಇವೆ. ಜಿಎಸ್ ಟಿಯಿಂದ ನಮಗೆ ಬಹಳಷ್ಟು ಕೊರತೆಯಾಗಿದೆ. ಕೇಂದ್ರ ಸರ್ಕಾರ ಯಾವುದೇ ಹೊಸ ಯೋಜನೆಗಳಿಗೆ ಅನುಮೋದನೆ ಕೊಡುತ್ತಿಲ್ಲ. ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳಿಗೆ ಬಾಕಿ ಇರೋ ದುಡ್ಡನ್ನು ಸಹ ಸರಿಯಾಗಿ ಕೊಟ್ಟಿಲ್ಲ. ಈ ದೇಶದ ಸಂಗ್ರಹವಾಗುವ ಟಾಕ್ಸ್ ನಲ್ಲಿ ದೊಡ್ಡ ಮಟ್ಟದ ಪಾಲು ಕರ್ನಾಟಕ ರಾಜ್ಯದ್ದಿದೆ. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಅದರ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ‌. ಆದರೆ ಕೇಂದ್ರದಿಂದ ಸ್ಪಂದನೆ ಸಿಗುತ್ತಿಲ್ಲ. ಕೇಂದ್ರದ ಸಚಿವರಿಂದಲೂ ಸ್ಪಂದನೆ ಸಿಕ್ತಾ ಇಲ್ಲ ಎಂದರು.

ನರೇಗದಲ್ಲಿಯೂ ಎಲ್ಲ ರಾಜ್ಯಗಳಿಗೂ ಅನ್ಯಾಯ ಆಗುತ್ತದೆ. ಶೇ.40% ರಾಜ್ಯದಿಂದ ಕೊಡಬೇಕು ಅಂತ ಹೊಸ ಕಾನೂನು ಮಾಡಿದ್ದಾರೆ. ಮೊದಲು ಕೇಂದ್ರ ಸರ್ಕಾರದ ಪಾಲು 90% ಇತ್ತು. ಅದನ್ನು ಏಕಾಏಕಿ 60 ಕ್ಕೆ ಇಳಿಸಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ ಜನರಿಗೆ ಅನುಕೂಲವಾಗಲಿ ಎಂದೂ ಈ ಯೊಜನೆ ತಂದಿತ್ತು. ಕಳೆದ 11 ವರ್ಷದಲ್ಲಿ ಒಂದೂ ಸಹ ಇಂತಹ ಜನೋಪಯೋಗಿ ಯೊಜನೆಯನ್ನು ಕೇಂದ್ರ ಸರ್ಕಾರ ತಂದಿಲ್ಲ ಎಂದರು.


Share

You cannot copy content of this page