ಸಮಗ್ರ ಸುದ್ದಿ

ಸೆಲ್ಫ್ ಎಕ್ಸಿಕ್ಯೂಷನ್ ಯೋಜನೆಗಳಲ್ಲಿ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ: ಸಚಿವ ಕೆ.ಜೆ. ಜಾರ್ಜ್

Share

ಬೆಂಗಳೂರು: ಸೆಲ್ಫ್ ಎಕ್ಸಿಕ್ಯೂಷನ್ (Self Execution) ಯೋಜನೆಗಳಡಿ ಕಡ್ಡಾಯವಾಗಿ ನಿರ್ಮಿಸಬೇಕಾದ ವಿದ್ಯುತ್ ಮೂಲಸೌಕರ್ಯವನ್ನು ಸಕಾಲದಲ್ಲಿ ಪೂರ್ಣಗೊಳಿಸದ ಹಾಗೂ ಕೆಇಆರ್‌ಸಿ (KERC) ನಿಯಮಗಳನ್ನು ಉಲ್ಲಂಘಿಸಿರುವ ಯೋಜನೆಗಳ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ನಿಯಮಗಳ (KERC regulations date 12.01.2006 , section 3.2.4, substation to be established on self execution basis) ಪ್ರಕಾರ 7.5 MVA ಗಿಂತ ಹೆಚ್ಚಿನ ಮಂಜೂರಾತಿ ವಿದ್ಯುತ್ ಭಾರ (Sanctioned Load) ಹೊಂದಿರುವ ವಸತಿ ಸಮುಚ್ಚಯಗಳು, ಟೌನ್‌ಶಿಪ್‌ಗಳು, ಬೃಹತ್ ಲೇಔಟ್‌ಗಳು ಹಾಗೂ ಇತರ ಅಭಿವೃದ್ಧಿ ಯೋಜನೆಗಳು ತಮ್ಮ ವೆಚ್ಚದಲ್ಲಿಯೇ ವಿದ್ಯುತ್ ಉಪಕೇಂದ್ರ ಹಾಗೂ ಸಂಬಂಧಿತ ವಿದ್ಯುತ್ ಮೂಲಸೌಕರ್ಯವನ್ನು ನಿರ್ಮಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ಈ ವ್ಯವಸ್ಥೆಯ ಉದ್ದೇಶ ವೇಗವಾಗಿ ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಅಗತ್ಯ ವಿದ್ಯುತ್ ಮೂಲಸೌಕರ್ಯವನ್ನು ಯೋಜನೆಗಳ ಜೊತೆಯಲ್ಲೇ ಅಭಿವೃದ್ಧಿಪಡಿಸುವುದು. ಇದರಿಂದ ಸಾರ್ವಜನಿಕ ವಿದ್ಯುತ್ ಜಾಲದ ಮೇಲಿನ ಹೆಚ್ಚುವರಿ ಒತ್ತಡ ಕಡಿಮೆಯಾಗುವುದರ ಜೊತೆಗೆ, ಖಾಸಗಿ ಯೋಜನೆಗಳಿಗೆ ಅಗತ್ಯವಾಗುವ ಮೂಲಸೌಕರ್ಯಕ್ಕಾಗಿ ಸರ್ಕಾರ ಸಾರ್ವಜನಿಕ ಹಣ ವೆಚ್ಚ ಮಾಡುವ ಅಗತ್ಯವೂ ತಪ್ಪುತ್ತದೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಇಂತಹ 45 ಪ್ರಕರಣಗಳನ್ನು ಗುರುತಿಸಲಾಗಿದ್ದು, ಸಂಬಂಧಿಸಿದ ಯೋಜನಾ ಅನುಷ್ಠಾನ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಇಂತಹ ಪ್ರಕರಣಗಳಲ್ಲಿ ಕೆಇಆರ್‌ಸಿ ನಿಯಮಗಳಂತೆ ಶೇಕಡಾ 10ರಷ್ಟು ದಂಡ ವಿಧಿಸಲಾಗುವುದು. ನಿಗದಿತ ಅವಧಿಯೊಳಗೆ ಕಡ್ಡಾಯ ವಿದ್ಯುತ್ ಮೂಲಸೌಕರ್ಯವನ್ನು ಪೂರ್ಣಗೊಳಿಸದಿದ್ದಲ್ಲಿ ಹಾಗೂ ಕೆಪಿಟಿಸಿಎಲ್ ಉಪಕೇಂದ್ರಗಳಲ್ಲಿ ವಿದ್ಯುತ್ ಪ್ರಸರಣ ಸಾಮರ್ಥ್ಯದ (Transmission Constraint) ಮೇಲೆ ಒತ್ತಡ ಉಂಟಾಗಿದ್ದಲ್ಲಿ, ಸಾರ್ವಜನಿಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಕಾಪಾಡುವ ಹಿತದೃಷ್ಟಿಯಿಂದ, ಜಾರಿಯಲ್ಲಿರುವ ಕಾನೂನು ಹಾಗೂ ನಿಯಮಗಳ ಅನ್ವಯ ಸಂಬಂಧಿತ ಯೋಜನೆಗಳ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.

ಇದರ ಜೊತೆಗೆ, 7.5 MVA ಗಿಂತ ಕಡಿಮೆ ಮಂಜೂರಾತಿ ವಿದ್ಯುತ್ ಲೋಡ್‌ ಅನುಮತಿ ಪಡೆದು ನಂತರ ಅನುಮೋದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡುತ್ತಿರುವ ಕೆಲವು ಯೋಜನೆಗಳೂ ಪತ್ತೆಯಾಗಿವೆ. ಅಗತ್ಯ ವಿದ್ಯುತ್ ಮೂಲಸೌಕರ್ಯವನ್ನು ವಿಸ್ತರಿಸದೆ ಹೆಚ್ಚುವರಿ ವಿದ್ಯುತ್ ಬಳಕೆ ಮಾಡುತ್ತಿರುವುದರಿಂದ ಸಾರ್ವಜನಿಕ ವಿದ್ಯುತ್ ಜಾಲದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ, ಅಕ್ಕಪಕ್ಕದ ನಿವಾಸಿಗಳು ಹಾಗೂ ಇತರ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಈ ವಿಷಯವನ್ನು ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಲಾಗಿದ್ದು, ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಪ್ರಕರಣಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದ್ದಾರೆ. ಅದರಂತೆ, ರಾಜ್ಯಾದ್ಯಂತ ಅನುಮೋದಿತ ವಿದ್ಯುತ್ ಭಾರವನ್ನು ಮೀರಿದರೂ ಅಗತ್ಯ ಮೂಲಸೌಕರ್ಯವನ್ನು ನಿರ್ಮಿಸದ ಯೋಜನೆಗಳನ್ನು ಗುರುತಿಸಿ ಸಮಗ್ರ ವರದಿ ಸಲ್ಲಿಸುವಂತೆ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರಿಗೆ ಸೂಚನೆ ನೀಡಲಾಗಿದೆ.

ಸಾರ್ವಜನಿಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ದೊರೆಯಬೇಕು, ಸಾರ್ವಜನಿಕ ವಿದ್ಯುತ್ ಮೂಲಸೌಕರ್ಯದ ಮೇಲೆ ಅನಗತ್ಯ ಒತ್ತಡ ಉಂಟಾಗಬಾರದು ಹಾಗೂ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ಆದರೂ ನಿಯಮ ಪಾಲನೆ ಆಗದಿದ್ದಲ್ಲಿ, ಮಾನ್ಯ ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು.
ಕೆ.ಜೆ. ಜಾರ್ಜ್ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು.


Share

You cannot copy content of this page