ಸಮಗ್ರ ಸುದ್ದಿ

ಜನವರಿ 25 ರಂದು 16ನೇ ರಾಷ್ಟ್ರೀಯ ಮತದಾರರ ದಿನ – 2026 ಆಚರಣೆ

Share

ಬೆಂಗಳೂರು: ಭಾರತದ ಚುನಾವಣಾ ಆಯೋಗವನ್ನು
25 ಜನವರಿ 1950 ರಂದು ಸ್ಥಾಪಿಸಲಾಯಿತು. 2011 ರಿಂದ ಪ್ರತಿ ವರ್ಷ ಜನವರಿ 25ರಂದು ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನ* ವನ್ನು ಆಚರಿಸಲಾಗುತ್ತಿದೆ.

ಭಾರತದ ಚುನಾವಣಾ ಆಯೋಗವು ಜನವರಿ 25 ರಂದು 16ನೇ ರಾಷ್ಟ್ರೀಯ ಮತದಾರರ ದಿನವನ್ನು (NVD) ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಗರದ ಸರ್ ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್)ದಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಚುನಾವಣಾ ನಿರ್ವಹಣಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು, ವಿದ್ಯಾರ್ಥಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. 2026ರ ರಾಷ್ಟ್ರೀಯ ಮತದಾರರ ದಿನದ ಘೋಷವಾಕ್ಯ “ನನ್ನ ಭಾರತ, ನನ್ನ ಮತ – ಪ್ರಜಾಪ್ರಭುತ್ವದ ಹೃದಯದಲ್ಲಿ ಭಾರತೀಯ ನಾಗರಿಕ” (My India, My Vote – Citizen at the Heart of Indian Democracy) ಆಗಿದೆ.

ದೇಶದ ಮತದಾರರಿಗೆ ಸಮರ್ಪಿತವಾಗಿರುವ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸುವುದರ ಮೂಲಕ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಲು ಪ್ರೋತ್ಸಾಹಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಹೊಸ ಮತದಾರರನ್ನು ಅಭಿನಂದಿಸಿ ಮತದಾರರ ಗುರುತಿನ ಚೀಟಿ (EPIC Card)ಗಳನ್ನು ವಿತರಿಸಲಾಗುವುದು. ಅದರ ಅಂಗವಾಗಿ ಯುವಕರು, ವಿಶೇಷಚೇತನರು, ಮಹಿಳೆಯರು, ತೃತೀಯ ಲಿಂಗಿಗಳು ಹಾಗೂ ವಿಶೇಷವಾಗಿ ನೈಜವಾಗಿ ದುರ್ಬಲ ಬುಡಕಟ್ಟು ಜನಾಂಗದ ಮತದಾರರಿಗೆ ಮತದಾರರ ಗುರುತಿನ ಚೀಟಿಗಳನ್ನು ಸಾಂಕೇತಿಕವಾಗಿ ವಿತರಿಸಲಾಗುವುದು.

ಸಮಾರಂಭದಲ್ಲಿ ಭಾಗವಹಿಸುವ ಎಲ್ಲರಿಗೂ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗುವುದು.

ಈ ಸಂದರ್ಭದಲ್ಲಿ ಗೌರವಾನ್ವಿತ ರಾಜ್ಯಪಾಲರು 2025ನೇ ಸಾಲಿನಲ್ಲಿ ವಿವಿಧ ಚುನಾವಣಾ ಸಂಬಂಧಿತ ಪ್ರಕ್ರಿಯೆಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹಾಗೂ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪೂರ್ವ ತಯಾರಿಯಲ್ಲಿ ಉತ್ತಮ ಸಾಧನೆ ಮಾಡಿದ 5 ಜಿಲ್ಲಾ ಚುನಾವಣಾಧಿಕಾರಿಗಳು (DEOs), 5 ಅಪರ ಜಿಲ್ಲಾ ಚುನಾವಣಾಧಿಕಾರಿಗಳು (ADEOs), 5 ಮತದಾರರ ನೋಂದಣಾಧಿಕಾರಿಗಳು (EROs), 5 ಸಹಾಯಕ ಮತದಾರರ ನೋಂದಣಾಧಿಕಾರಿಗಳು (AEROs), ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಕರ್ನಾಟಕದ 1 ರಿಸರ್ಚ್ ಅಸಿಸ್ಟೆಂಟ್, 10 ಬೂತ್ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರು (BLO Supervisors), 34 ಬೂತ್ ಮಟ್ಟದ ಅಧಿಕಾರಿಗಳು (BLOs) ಹಾಗೂ ರಾಜ್ಯಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 9 ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ರಾಷ್ಟ್ರೀಯ ಮತದಾರರ ದಿನದ ಆಚರಣೆಯ ಮುಖ್ಯ ಉದ್ದೇಶವು ನಾಗರಿಕರಲ್ಲಿ ಚುನಾವಣಾ ಜಾಗೃತಿ ಮೂಡಿಸುವುದು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸುವುದಾಗಿದೆ.


Share

You cannot copy content of this page