ಹಾಸನ: ಕಳೆದ 15 ದಿನಗಳಿಂದ ದರ್ಶನ ನೀಡಿದ ಹಾಸನದ ಪ್ರಸಿದ್ಧ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಮ್ಮುಖದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ಗರ್ಭಗುಡಿಯ ಬಾಗಿಲಿಗೆ ಬೀಗಮುದ್ರೆ ಹಾಕಲಾಯಿತು.
ಈ ಕ್ಷಣಕ್ಕೆ ಸಾಕ್ಷಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ, ಶಾಸಕರುಗಳಾದ ಕೆ.ಎಂ. ಶಿವಲಿಂಗೇಗೌಡ, ಸಿಮೆಂಟ್ ಮಂಜು, ಸ್ವರೂಪ ಪ್ರಕಾಶ್, ಸಂಸದ ಶ್ರೇಯಸ್ ಪಟೇಲ್, ಮಾಜಿ ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ನಗರ ಸಭೆಯ ಮೇಯರ್ ಗಿರೀಶ್ ಚನ್ನವೀರಪ್ಪ ಸೇರಿದಂತೆ ಹಲವರ ಸಮ್ಮುಖದಲ್ಲಿ ದೇವಾಲಯದ ಶಾಸ್ತ್ರೋಕ್ತಗಳನ್ನ ನೆರವೇರಿಸಿದ ಬಳಿಕ ಅರ್ಚಕರ ವೃಂದವು ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕುವ ಮೂಲಕ ಈ ವರ್ಷದ ದರ್ಶನಕ್ಕೆ ಅಂತಿಮ ತೆರೆ ಎಳೆದರು.
ಈ ಬಾರಿ ವಿಐಪಿ ದರ್ಶನಕ್ಕೆ ಅವಕಾಶ ಸ್ವಲ್ಪ ಕಡಿಮೆ ಮಾಡಿದ್ದರಿಂದ ಸುಮಾರು 25 ಲಕ್ಷಕ್ಕೂ ಹೆಚ್ಚು ಮಂದಿ ದೇವಿಯ ದರ್ಶನ ಪಡೆದರು. ಕಳೆದ ಬಾರಿ 17 ಲಕ್ಷ ಮಂದಿ ದರ್ಶನ ಮಾಡುವ ಮೂಲಕ ಸುಮಾರು 12 ಕೋಟಿ ಲಾಭಗಳಿಸಿದ್ದ, ಹಾಸನಾಂಬೆ ಈ ಬಾರಿ 22.5 ಕೋಟಿ ಆದಾಯ ಬಂದಿದೆ. ಕಳೆದ ವಾರ 5 ದಿನಗಳಲ್ಲಿ ತಿರುಪತಿಗೆ ದರ್ಶನ ನೀಡಿದ ಭಕ್ತರನ್ನು ಮೀರಿಸುವ ಮೂಲಕ ಹೊಸ ಇತಿಹಾಸವನ್ನು ಹಾಸನಂಬ ಬರೆದಿತ್ತು.
ಈ ಬಾರಿ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ನಡೆದ ಹಾಸನಾಂಬ ಉತ್ಸವ ಬಹಳ ವಿಜೃಂಭಣೆಯಿಂದ ನಡೆದಿದೆ. ಒಬ್ಬ ಸಾಮಾನ್ಯ ಅಧಿಕಾರಿ ಮಾಡುವಂತಹ ಕೆಲಸವನ್ನು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ನಿಂತು ನಿರ್ವಹಣೆ ಮಾಡಿದ್ದು ಬಂದಂತಹ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
ಮಧ್ಯಾಹ್ನ 1.06 ನಿಮಿಷಕ್ಕೆ ಬಾಗಿಲು ಹಾಕುವ ಮೂಲಕ ದೇವಿಯ ಅಂತಿಮ ದರ್ಶನಕ್ಕೆ ತೆರೆ ಬಿದ್ದಿದೆ. ಮುಂದಿನ ವರ್ಷ 11 ದಿನಗಳ ಕಾಲ ಸಾರ್ವಜನಿಕರಿಗೆ ದರ್ಶನ ಕೊಡುವ ಹಾಸನಂಬೆ ಅಕ್ಟೋಬರ್ 29 ರಿಂದ ವಿದ್ಯುಕ್ತವಾಗಿ ಬಾಗಿಲನ್ನು ತೆರೆಯಲಿದ್ದಾಳೆ.
