ಬೆಂಗಳೂರು: “ಸಿಎಂ ಬದಲಾವಣೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರವೇ ಅಂತಿಮ. ಸಂದರ್ಭ ಬಂದಾಗ ಅವರು ಸಿಎಲ್ಪಿ ಸಭೆ ಕರೆಯುತ್ತಾರೆ” ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಸದಾಶಿವನಗರದಲ್ಲಿ ಇಂದು ಮಾತನಾಡಿದ ಅವರು, “ಹೈಕಮಾಂಡ್ ಸಂದರ್ಭ ಬಂದಾಗ ಸಿಎಲ್ಪಿ ಕರೆಯುತ್ತಾರೆ. ಆಗ ಶಾಸಕರ ಅಭಿಪ್ರಾಯ ಪಡೆಯುತ್ತಾರೆ. ವೀಕ್ಷಕರು ಹೈಕಮಾಂಡ್ಗೆ ವರದಿ ಕೊಡುತ್ತಾರೆ. ಆ ನಂತರ ಯಾರು?, ಏನು? ಎಂಬ ಘೋಷಣೆ ಆಗುತ್ತದೆ. ಇದು ನಮ್ಮಲ್ಲಿರುವ ಪದ್ಧತಿ. ಇದನ್ನು ಶಾರ್ಟ್ ಕಟ್ ಆಗಿ ಹೇಗೆ ಮಾಡುತ್ತಾರೆ ಹೇಳಿ?. ನಾನು, ಸತೀಶ್, ಮಹದೇವಪ್ಪ ಕಾಫಿ ಕುಡಿಯುಲು ಸೇರಿದ್ವಿ. ಇದರ ಹಿಂದೆ ಬೇರೆ ಏನೂ ಇಲ್ಲ” ಎಂದರು.
ಸತೀಶ್ ಜಾರಕಿಹೊಳಿ ಬಗ್ಗೆ ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, “ಯತೀಂದ್ರ ಅವರು ಸೈದ್ಧಾಂತಿಕವಾಗಿ ಹೇಳಿದ್ದಾರೆ. ಸತೀಶ್ ಹೆಸರು ಹೇಳಿದ್ದಾರೆ, ತಪ್ಪೇನಿದೆ?. ಹಿಂದೆ ಅವರು ಅಹಿಂದ ಚಳುವಳಿಯಲ್ಲಿದ್ದರು. ಅವರಿಗೆ ಬದ್ಧತೆ ಇದೆ ಅಂತ ಹೇಳಿರಬಹುದು. ಸಿಎಂ ಹುದ್ದೆ ಇಟ್ಕೊಂಡು ಆ ಹೇಳಿಕೆ ನೀಡಿಲ್ಲ” ಎಂದು ತಿಳಿಸಿದರು.
ನಗರದ ಹೊರವಲಯದಲ್ಲಿ ಮಹಿಳೆಯ ಗ್ಯಾಂಗ್ ರೇಪ್ ಪ್ರಕರಣದ ಕುರಿತ ಪ್ರಶ್ನೆಗೆ, “ತಕ್ಷಣ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರ ಹುಡುಕಾಟ ನಡೆಯುತ್ತಿದೆ. ಕಾನೂನು ಪ್ರಕಾರ ಕ್ರಮ ಆಗಲಿದೆ” ಎಂದು ಹೇಳಿದರು.
ಕಬಡ್ಡಿ ಪಂದ್ಯದಲ್ಲಿ ಬೆಟ್ಟಿಂಗ್ ವಿಚಾರಕ್ಕೆ, “ಜೂನಿಯರ್ ಕಾಲೇಜು ಹಂತದ ಪಂದ್ಯ ಇತ್ತು. ಬಹುಮಾನ ಕೊಡುವುದಿತ್ತು. ನನಗೂ ಕರೆದಿದ್ದರು. ಹೋಗಿದ್ದೆ. ಅಲ್ಲಿ ಡಿಸಿ, ಎಸ್‌ಪಿ, ಸಿಇಒ ಎಲ್ಲರೂ ಇದ್ದರು. ಯಾರು ಗೆಲ್ಲುತ್ತಾರೆ ಅಂತ ಸಹಜವಾಗಿ ಎಲ್ಲರೂ ಮಾತಾನಾಡುತ್ತಿದ್ದರು. ಸೋಲು, ಗೆಲುವಿನ ಕುರಿತು ತಮಾಷೆಗೆ ಚರ್ಚೆ ಆಗುತ್ತಿತ್ತು. ನನಗೆ ಅಷ್ಟೂ ಬುದ್ಧಿ ಇಲ್ವಾ?. ಗೃಹ ಸಚಿವನಾಗಿ ಬೆಟ್ಟಿಂಗ್ ಕಟ್ಟುವ ಮಟ್ಟಕ್ಕೆ ಹೋಗುತ್ತೀನಾ?. ಅಷ್ಟೂ ಕನಿಷ್ಠ ಜ್ಞಾನ ಇಲ್ವಾ?. ಸುಮ್ಮನೆ ಅನಾವಶ್ಯಕ ವಿವಾದ ಮಾಡಲಾಗುತ್ತಿದೆ. ಅದು ಬೆಟ್ಟಿಂಗ್ ಅಲ್ಲ. ನಾನೂ ಒಬ್ಬ ಸ್ಪೋರ್ಟ್ಸ್‌ಮನ್” ಎಂದರು.
ಚಿತ್ತಾಪುರ ಆರ್‌ಎಸ್‌ಎಸ್ ಪಥ ಸಂಚಲನ ವಿಚಾರವಾಗಿ ಮಾತನಾಡಿ, “ಸಂಘ ಸಂಸ್ಥೆಗಳ ಅನುಮತಿ ವಿಚಾರ ಆದೇಶವಾಗಿದೆ. ಅದರಂತೆ ಅನುಮತಿ ಪಡೆಯಬೇಕು. ಸಂಘರ್ಷ ನಡೆದಿರುವ ಬಗ್ಗೆ ಗೊತ್ತಿಲ್ಲ. ಸಂಘದವರು ಅನುಮತಿ ಕೇಳಿದ್ದಾರೆ, ಬೇರೆ ಸಂಘಟನೆಗಳೂ ಕೇಳಿದ್ದಾರೆ. ಸ್ಥಳೀಯ ಆಡಳಿತ ತೀರ್ಮಾನ ಮಾಡಲಿದೆ. ನಮ್ಮ ಸುತ್ತೋಲೆಯಲ್ಲಿ ಆರ್‌ಎಸ್‌ಎಸ್ ಪದ ಬಂದಿಲ್ಲ. ಆರ್‌ಎಸ್‌ಎಸ್ ಅನ್ನು ಇಟ್ಕೊಂಡು ಆದೇಶ ಮಾಡಿಲ್ಲ. ಇದು ಎಲ್ಲರಿಗೂ ಅನ್ವಯವಾಗುತ್ತದೆ. ಸಂಘರ್ಷ ಆಗಬಾರದು ಅಂತ ನಿಯಮ ಹಾಕಿದ್ದೇವೆ. ಶಾಲಾ, ಕಾಲೇಜಿಗೆ ತೊಂದರೆ ಆಗಬಾರದು. 2013ರಲ್ಲಿ ಶೆಟ್ಟರ್ ಆದೇಶ ಮಾಡಿದ್ದರು. ಅದನ್ನೇ ಪುನರ್ ಪರಿಶೀಲನೆ ಮಾಡಿದ್ದೇವೆ. ಸಮಸ್ಯೆ ಬಂದಾಗ ಪರಿಹಾರ ಕಂಡುಕೊಳ್ಳಬೇಕು. ಸಂಘದ ಪಥ ಸಂಚಲನದಿಂದ ಗೊಂದಲ ಆಗಿದೆ. ತೊಂದರೆ ಆಗಬಾರದೆಂದು ಆದೇಶ ಕೊಟ್ಟಿದ್ದೇವೆ” ಎಂದು ತಿಳಿಸಿದರು.
