ಸಮಗ್ರ ಸುದ್ದಿ

ರಸ್ತೆ ಅಗಲೀಕರಣ, ಅನಧಿಕೃತ ಕಟ್ಟಡಗಳ ಮೇಲ್ವಿಚಾರಣೆಗೆ ಪ್ರತ್ಯೇಕ ಟಾಸ್ಕ್ ಫೋರ್ಸ್ ರಚಿಸಿ : ಮಹೇಶ್ವರ್ ರಾವ್ |ಪೌರಕಾರ್ಮಿಕರಿಗೆ ಮುಖಚಹರೆ ಹಾಜರಾತಿ ವ್ಯವಸ್ಥೆ ಜಾರಿ

Share

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ರಸ್ತೆ ಅಗಲೀಕರಣ ಹಾಗೂ ಅನಧಿಕೃತ ಕಟ್ಟಡಗಳ ಮೇಲ್ವಿಚಾರಣೆಗೆ ಪ್ರತ್ಯೇಕ ಟಾಸ್ಕ್ ಫೋರ್ಸ್‌ಗಳನ್ನು ರಚಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿರುವ ಕಾಮಗಾರಿಗಳ ಅನುಷ್ಠಾನ ಸಂದರ್ಭದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಇಂದು ವಿವಿಧ ಇಲಾಖೆಗಳೊಂದಿಗೆ ನಡೆದ ಸಮನ್ವಯ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ರಸ್ತೆ ಅಗಲೀಕರಣ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಮೇಲ್ವಿಚಾರಣೆಗಾಗಿ ಪ್ರತ್ಯೇಕ ಟಾಸ್ಕ್ ಫೋರ್ಸ್‌ಗಳನ್ನು ರಚಿಸಬೇಕು. ಈ ನಿಟ್ಟಿನಲ್ಲಿ ಆಯಾ ನಗರ ಪಾಲಿಕೆಗಳಲ್ಲಿ ಕೂಡಲೇ ಟಾಸ್ಕ್ ಫೋರ್ಸ್ ರಚಿಸಿ, ರಸ್ತೆ ಅಗಲೀಕರಣ ಹಾಗೂ ಅನಧಿಕೃತ ಕಟ್ಟಡಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪೌರಕಾರ್ಮಿಕರಿಗೆ ಮುಖಚಹರೆ ಹಾಜರಾತಿ ವ್ಯವಸ್ಥೆ:

ಜಿಬಿಎ ವ್ಯಾಪ್ತಿಯ ಪೌರಕಾರ್ಮಿಕರಿಗೆ ಮುಖಚಹರೆ (ಫೇಸ್ ರಿಕಗ್ನಿಷನ್) ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ ಎಲ್ಲಾ ನಗರ ಪಾಲಿಕೆಗಳಲ್ಲಿಯೂ ಈ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದ್ದು, ಮುಂದಿನ ಎರಡು ವಾರಗಳೊಳಗೆ ಎಲ್ಲಾ ನಗರ ಪಾಲಿಕೆಗಳಲ್ಲಿಯೂ ಈ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರೈಲ್ವೆ ಕಾಮಗಾರಿಗಳ ಪಟ್ಟಿ ಸಲ್ಲಿಸಿ:

ನಗರದಲ್ಲಿ ರೈಲ್ವೆ ಇಲಾಖೆ ವತಿಯಿಂದ ಕೈಗೆತ್ತಿಕೊಂಡಿರುವ ಎಲ್ಲಾ ಕಾಮಗಾರಿಗಳ ವಿವರ ಹಾಗೂ ಪ್ರಗತಿ ಪರಿಶೀಲನೆಗಾಗಿ ಸಮಗ್ರ ಪಟ್ಟಿ ಸಿದ್ಧಪಡಿಸಿ ವರದಿ ಸಲ್ಲಿಸಬೇಕು. ನಂತರ ಜಿಬಿಎ ಹಾಗೂ ರೈಲ್ವೆ ಇಲಾಖೆಯೊಂದಿಗೆ ಸಭೆ ನಡೆಸಿ ಕಾಮಗಾರಿಗಳಿಗೆ ವೇಗ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೆ-100 ರಾಜಕಾಲುವೆಗೆ ಕೊಳಚೆ ನೀರು ಬಾರದಂತೆ ಕ್ರಮ:

ಕೆ-100 ರಾಜಕಾಲುವೆಗೆ ಕೊಳಚೆ ನೀರು ಹರಿದು ಬರದಂತೆ ಸಂಪೂರ್ಣ ತಡೆಯಬೇಕು. ಪ್ರಸ್ತುತ ಎಲ್ಲೆಲ್ಲಿ ಕೊಳಚೆ ನೀರು ಸೇರುತ್ತಿದೆ ಎಂಬುದನ್ನು ಪರಿಶೀಲಿಸಿ, ಅದನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಡೈಯಿಂಗ್ ಘಟಕಗಳಿಂದ ಬಣ್ಣದ ನೀರು ಹಾಗೂ ಸ್ಲಾಟರ್ ಹೌಸ್‌ಗಳಿಂದ ರಕ್ತ ಮಿಶ್ರಿತ ನೀರು ರಾಜಕಾಲುವೆಗೆ ಹರಿಯುತ್ತಿರುವ ಕುರಿತು ಸ್ಥಳ ಪರಿಶೀಲನೆ ನಡೆಸಿ, ಸಂಬಂಧಿಸಿದವರಿಗೆ ದುಪ್ಪಟ್ಟು ದಂಡ ವಿಧಿಸಿ, ಮತ್ತೆ ನೀರು ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ನಿರ್ದೇಶನ ನೀಡಿದರು.

ಹೈಡ್ರಂಟ್ ವ್ಯವಸ್ಥೆ ಕಲ್ಪಿಸಲು ಸೂಚನೆ:

ಜಿಬಿಎ ವ್ಯಾಪ್ತಿಯಲ್ಲಿ ಅಗ್ನಿ ಅವಘಡಗಳ ಸಂದರ್ಭದಲ್ಲಿ ತಕ್ಷಣವೇ ಅಗ್ನಿ ಶಮನಕ್ಕೆ ಅಗತ್ಯ ನೀರು ಲಭ್ಯವಾಗುವಂತೆ ಜಲಮಂಡಳಿ ವತಿಯಿಂದ ನಗರಾದ್ಯಂತ ಹೈಡ್ರಂಟ್ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ನಗರದ ಕೆಲ ಭಾಗಗಳಲ್ಲಿ ಐದು ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ಗಳನ್ನು ಸ್ಥಾಪಿಸಲು ಕ್ರಮವಹಿಸಬೇಕು. ಜಿಬಿಎ ಯಲ್ಲಿ ಫೈರ್ ಕಂಟ್ರೋಲ್ ರೂಂ ವ್ಯವಸ್ಥೆ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ರಸ್ತೆ ಅಗಲೀಕರಣಕ್ಕೆ ಯೋಜನೆ ರೂಪಿಸಿ:

ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಪಣತ್ತೂರು ಸಿಬಿಡಿ ರಸ್ತೆ ಭಾಗಶಃ ಪೂರ್ಣಗೊಂಡಿದ್ದು, ರೈಲ್ವೆ ಮಾರ್ಗದ‌ ಮೇಲೆ ಹಾಗೂ ಅರಣ್ಯ ಇಲಾಖೆಯ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಬೇಕಿದ್ದು, ಸದರಿ ಯೋಜನೆಯನ್ನು ಅನುಷ್ಠಾನಗಿಳಿಸಲು ಕ್ರಮವಹಿಸುವುದು.

ನಾಗವಾರ ಮುಖ್ಯ ರಸ್ತೆ, ಹೊಸೂರು ರಸ್ತೆ (ಆನೆಪಾಳ್ಯ ಜಂಕ್ಷನ್) ನಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಪರಿಶೀಲಿಸಿ, ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತರಾಗಲು ಸೂಚನೆ ನೀಡಿದ ಅವರು ಬನಶಂಕರಿ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಮುಂದಿನ ವಾರದೊಳಗೆ ಯೋಜನೆ ಸಿದ್ಧಪಡಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ರಸ್ತೆ ಅಭಿವೃದ್ಧಿ ಮಾಡಲು ಟಾಸ್ಕ್ ಪೋರ್ಸ್ ತಂಡದ ವತಿಯಿಂದ ಇತರೆ ಸಿಡಿಪಿ‌ ರಸ್ತೆಗಳ ಅಗಲೀಕರಣ ಕೈಗೊಳ್ಳಲು ಯೋಜನೆ ರೂಪಿಸಿಸುವಂತೆಯೂ ಸೂಚಿಸಿದರು.

ಸಮನ್ವಯದೊಂದಿಗೆ ವೈಟ್ ಟಾಪಿಂಗ್‌ ಗೆ ವೇಗ:

ನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಜಲಮಂಡಳಿ ಹಾಗೂ ಬೆಸ್ಕಾಂ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ನಂತರ ಸಂಚಾರಿ ಪೊಲೀಸ್ ವಿಭಾಗದಿಂದ ಅನುಮತಿ ಪಡೆದು, ವೈಟ್ ಟಾಪಿಂಗ್ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಈ ಸಂಬಂಧ ಬಿಸ್ಮೈಲ್ ನ ಮುಖ್ಯ ಅಭಿಯಂತರರು, ಆಯಾ ನಗರ ಪಾಲಿಕೆಗಳ ಆಯುಕ್ತರುಗಳು ಇತರೆ ಇಲಾಖೆಗಳ ಜೊತೆ ಸಮನ್ವಯ ನಡೆಸಿ ಕಾಮಗಾರಿಗಳ ವೇಗ ಹೆಚ್ಚಿಸಲು ಕ್ರಮವಹಿಸುವಂತೆ ಸೂಚಿಸಿದರು.

ಪಾದಚಾರಿ ಮೇಲ್ಸೇತುವೆಗಳ (ಸ್ಕೈವಾಕ್) ನಿರ್ಮಾಣ:

ನಾಗರಿಕರು ಸುರಕ್ಷಿತವಾಗಿ ರಸ್ತೆ ದಾಟುವ ಸಲುವಾಗಿ ಸಂಚಾರಿ ಪೊಲೀಸ್ ವಿಭಾಗವು 101 ಸ್ಥಳಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಪಟ್ಟಿ ನೀಡಿದೆ. ಅದರಂತೆ ಆಯಾ ನಗರ ಪಾಲಿಕೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ಸಾಧ್ಯವಿರುವ ಸ್ಥಳಗಳಲ್ಲಿ ತಕ್ಷಣವೇ ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದಲ್ಲದೆ, ನಗರ ಸಂಚಾರ ದಟ್ಟಣೆ ನಿವಾರಣೆಗೆ ಸಂಬಂಧಿಸಿದಂತೆ 103 ಕಡೆ ಬಸ್ ತಂಗುದಾಣ ಸ್ಥಳಾಂತರ, 35 ರಸ್ತೆಗಳ ಅಭಿವೃದ್ಧಿ, 137 ವಾಟರ್ ಲಾಗಿಂಗ್ ಪ್ರದೇಶಗಳ ಸಮಸ್ಯೆ ಪರಿಹಾರ, 63 ಕಡೆ ಬಸ್ ಬೇ ವ್ಯವಸ್ಥೆ, 84 ಕಡೆ ರಸ್ತೆ ಹಂಪ್‌ಗಳ ತೆರವು ಕುರಿತು ಸಂಚಾರಿ ವಿಭಾಗ ನೀಡಿರುವ ಪಟ್ಟಿಯನ್ನು ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತ್ವರಿತ ಕ್ರಮ:

ನಗರದಲ್ಲಿ ಈ ಹಿಂದಿನ ಮಳೆಗಾಲದ ಅವಧಿಯಲ್ಲಿ ಗುರುತಿಸಲಾಗಿದ್ದ 44 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಳೆಗಾಲಕ್ಕೆ ಮುಂಚಿತವಾಗಿ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಲು ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಪ್ರಮುಖವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್, ಹೆಬ್ಬಾಳ ಜಂಕ್ಷನ್ ಹಾಗೂ ಕೋಗಿಲು ಕ್ರಾಸ್ ಪ್ರದೇಶಗಳಲ್ಲಿ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು. ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿಯನ್ನು ಏಪ್ರಿಲ್ ಅಂತ್ಯದೊಳಗಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವಿಶೇಷ ಆಯುಕ್ತರಾದ ಡಾ: ಕೆ. ಹರೀಶ್ ಕುಮಾರ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಬೆಂ.ಘ.ನಿ.ನಿದ ಸಿಇಒ ಕರೀಗೌಡ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶಿವಶಂಕರ್, ಅಪರ ಆಯುಕ್ತ ದಲ್ಜಿತ್ ಕುಮಾರ್, ಪ್ರಧಾನ ಅಭಿಯಂತರರಾದ ಡಾ. ಬಿ.ಎಸ್. ಪ್ರಹ್ಲಾದ್, ಉಪ ಆಯುಕ್ತರಾದ ಗಾಯತ್ರಿ ನಾಯಕ್, ಮುಖ್ಯ ನಗರ ಯೋಜಕರಾದ ಸುನಿಲ್ ಸೇರಿದಂತೆ ಜಲಮಂಡಳಿ, ಅಗ್ನಿಶಾಮಕ ದಳ, ಬೆಸ್ಕಾಂ, ಮೆಟ್ರೋ, ಬಿಡಿಎ, ಸಂಚಾರಿ ಪೊಲೀಸ್ ವಿಭಾಗ, ಗೇಲ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page