ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದ 2025 ರ ವಿಶ್ವ ಬಾಕ್ಸಿಂಗ್ ಕಪ್ ಫೈನಲ್ಸ್‌ನಲ್ಲಿ ಒಂಬತ್ತು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತವು ತನ್ನ ಚೊಚ್ಚಲ ಅಭಿಯಾನವನ್ನು ಕೊನೆಗೊಳಿಸಿದೆ.
ಭಾರತೀಯ ಮಹಿಳಾ ಬಾಕ್ಸರ್‌ಗಳಾದ – ಜೈಸ್ಮಿನ್ ಲಂಬೋರಿಯಾ, ನಿಖತ್ ಜರೀನ್, ಪರ್ವೀನ್ ಹೂಡಾ, ಅರುಂಧತಿ ಚೌಧರಿ, ಪ್ರೀತಿ ಪವಾರ್, ಮಿನಾಕ್ಷಿ ಹೂಡಾ ಮತ್ತು ನೂಪುರ್ ಶಿಯೋರನ್ ಪಂದ್ಯಾವಳಿಯಲ್ಲಿ 7 ಚಿನ್ನದ ಪದಕಗಳೊಂದಿಗೆ ಐತಿಹಾಸಿಕ ಸಾಧನೆ ಮಾಡಿದರು.
ಜೈಸ್ಮಿನ್ ಲಂಬೋರಿಯಾ ಮಹಿಳೆಯರ 57 ಕೆಜಿ ವಿಭಾಗದಲ್ಲಿ ತೈಪೆಯ ವು ಶಿಹ್ ಯಿ ಅವರನ್ನು ಫೈನಲ್‌ನಲ್ಲಿ 4-1 ಅಂತರದಿಂದ ಸೋಲಿಸಿ ಚಿನ್ನದ ಪದಕಕ್ಕೆ ಮುನ್ನಡೆದರು. 51 ಕೆಜಿ ವಿಭಾಗದಲ್ಲಿ ನಿಖತ್ ಜರೀನ್ ಚೈನೀಸ್ ತೈಪೆಯ ಕ್ಸುವಾನ್ ಯಿ ಗುವೊ ಅವರನ್ನು 5-0 ಅಂತರದಿಂದ ಸೋಲಿಸಿ ಚಿನ್ನ ಗೆದ್ದರು. ಪರ್ವೀನ್ ಹೂಡಾ ಅವರು 60 ಕೆಜಿ ವಿಭಾಗದಲ್ಲಿ ಜಪಾನ್‌ನ ಅಯಾಕಾ ಟಗುಚಿ ಅವರನ್ನು 3-2 ಅಂತರದಿಂದ ಸೋಲಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು.
ಪುರುಷರ ವಿಭಾಗದಲ್ಲಿ, ಸಚಿನ್ ಸಿವಾಚ್ ಮತ್ತು ಹಿತೇಶ್ ಗುಲಿಯಾ ತಮ್ಮ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಸಚಿನ್ ಪುರುಷರ 60 ಕೆಜಿ ಫೈನಲ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಕಿರ್ಗಿಸ್ತಾನ್‌ನ – ಮುನಾರ್ಬೆಕ್ ಸೀಟ್ಬೆಕ್ ಉಲು ಅವರನ್ನು ಸೋಲಿಸಿ ಚಿನ್ನ ಗೆದ್ದರು. ಪುರುಷರ 70 ಕೆಜಿ ಫೈನಲ್‌ನಲ್ಲಿ ಕಝಾಕಿಸ್ತಾನದ ಮುರ್ಸಲ್ ನುರ್ಬೆಕ್ ವಿರುದ್ಧ ಹಿತೇಶ್ ಚಿನ್ನದ ಪದಕ ಪಡೆದುಕೊಂಡರು.
ಭಾರತೀಯ ಪುರುಷರ ಬಾಕ್ಸರ್‌ಗಳು ನಾಲ್ಕು ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 80 ಕಿಲೋಗ್ರಾಂಗಳ ಫೈನಲ್‌ನಲ್ಲಿ ಅಂಕುಶ್ ಪಂಘಲ್ ಅವರನ್ನು ಇಂಗ್ಲೆಂಡ್‌ನ ಓಲಾಡಿಮೆಜಿ ಶಿಟ್ಟು ಸೋಲಿಸಿದರು.
