ಸಮಗ್ರ ಸುದ್ದಿ

ಇಂದು ವಿಶ್ವ ಮೀನುಗಾರಿಕೆ ದಿನ | ಭಾರತ ಎರಡನೇ ಮೀನು ಉತ್ಪಾದಕ ರಾಷ್ಟ್ರ

Share

ವಿಶ್ವ ಮೀನುಗಾರಿಕೆ ದಿನವನ್ನು ಇಂದು ಜಾಗತಿಕವಾಗಿ ಆಚರಣೆ ಮಾಡಲಾಗುತ್ತಿದೆ. 1997 ರಲ್ಲಿ ದೆಹಲಿಯಲ್ಲಿ ನಡೆದ ವಿಶ್ವ ಮೀನುಗಾರರ ವೇದಿಕೆಯ ಸಭೆಯಲ್ಲಿ ಈ ದಿನವನ್ನು ಸ್ಥಾಪಿಸಲಾಯಿತು.

‘ಸಮುದ್ರಾಹಾರ ರಫ್ತಿನಲ್ಲಿ ಮೌಲ್ಯ ಬಲವರ್ಧನೆ’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಆಚರಣೆ ಮಾಡಲಾಗುತ್ತಿದೆ. ಈ ದಿನಾಚರಣೆಯು ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ, ಜೀವನೋಪಾಯ ಸೃಷ್ಟಿ ಹಾಗೂ ಪರಿಸರ ಸಮತೋಲನದಲ್ಲಿ ಸುಸ್ಥಿರ ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆಯ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಆರೋಗ್ಯಕರ ಸಾಗರಗಳು ಮತ್ತು ಪರಿಸರ ವ್ಯವಸ್ಥೆಗಳ ಮಹತ್ವವನ್ನು ಎತ್ತಿ ತೋರಿಸುವುದು ಹಾಗೂ ಮೀನುಗಾರ ಸಮುದಾಯದ ಕೆಲಸವನ್ನು ಗುರುತಿಸುವ ಉದ್ದೇಶವಾಗಿದೆ.
ಸಾಗರಗಳು ಮತ್ತು ಒಳನಾಡಿನ ಮೀನು ಸಂಪನ್ಮೂಲಗಳ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, ಮೀನುಗಾರಿಕೆ ಸಮುದಾಯದ ಶ್ರಮವನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಭಾರತವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದ್ದು, ವಿಶ್ವದ ಅತಿ ದೊಡ್ಡ ಸಿಗಡಿ ಉತ್ಪಾದಕರಲ್ಲಿ ಒಂದಾಗಿದೆ. ಕಳೆದೊಂದು ದಶಕದಲ್ಲಿ ಮೀನುಗಾರಿಕೆ ಕ್ಷೇತ್ರ ಕಂಡಿರುವ ಬೆಳವಣಿಗೆ ಗಮನಾರ್ಹವಾಗಿದೆ.

ದೇಶದ ಮೀನು ಉತ್ಪಾದನೆಯು 2013-14ರಲ್ಲಿ 96 ಲಕ್ಷ ಟನ್‌ಗಳಷ್ಟಿದ್ದರೆ, 2024-25ರ ವೇಳೆಗೆ ದ್ವಿಗುಣಗೊಂಡು 195 ಲಕ್ಷ ಟನ್‌ಗಳಿಗೆ ತಲುಪಿದೆ. ಈ ಬೆಳವಣಿಗೆಯು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಂತಹ ಸರ್ಕಾರದ ಪ್ರಮುಖ ಉಪಕ್ರಮಗಳಿಂದ ಸಾಧ್ಯವಾಗಿದೆ.

2024ರ ಅಕ್ಟೋಬರ್‌ನಿಂದ 2025ರ ಅಕ್ಟೋಬರ್‌ವರೆಗೆ ಭಾರತದ ಸಮುದ್ರ ಉತ್ಪನ್ನಗಳ ರಫ್ತು ಶೇ.11.08 ರಷ್ಟು ಹೆಚ್ಚಳವಾಗಿ 0.81 ಶತಕೋಟಿ ಅಮೆರಿಕನ್ ಡಾಲರ್‌ಗಳಿಂದ 0.90 ಶತಕೋಟಿ ಅಮೆರಿಕನ್ ಡಾಲರ್‌ಗಳಿಗೆ ಏರಿಕೆಯಾಗಿದೆ.


Share

You cannot copy content of this page