ಸಿನಿಮಾ

ಅಂತಾರಾಷ್ಟ್ರೀಯ ಚಿತ್ರೋತ್ಸವಗಳು ನಿರ್ದೇಶಕರಿಗೆ ಹಬ್ಬವಿದ್ದಂತೆ; 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಂಸೋರೆ ಅಭಿಮತ

Share

ಬೆಂಗಳೂರು: ಸಿನಿಮಾ ಎನ್ನುವುದು ನಿರ್ದೇಶಕರ ಮಾಧ್ಯಮ. ಚಿತ್ರೋತ್ಸವಗಳು ಎನ್ನುವುದು ನಿರ್ದೇಶಕರಿಗೆ ಹಬ್ಬವಿದ್ದಂತೆ. ಒಂದು ವಾರ ಸಿನಿಮಾ ನೋಡುವುದರ ಜೊತೆಗೆ, ಅದರ ಚರ್ಚೆಗಳಿಂದ ಸಾಕಷ್ಟು ಕಲಿಯಬಹುದು ಎಂದು ನಿರ್ದೇಶಕ ಮಂಸೋರೆ ಅಭಿಪ್ರಾಯಪಟ್ಟಿದ್ದಾರೆ.

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಂಸೋರೆ ನಿರ್ದೇಶನದ ʼದೂರ ತೀರ ಯಾನʼ ಚಿತ್ರವು ಪ್ರದರ್ಶನವಾಯಿತು. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರೋತ್ಸವಗಳಲ್ಲಿ ಸಿನಿಮಾ ವಿದ್ಯಾರ್ಥಿಯಾಗಿ ದಿನಕ್ಕೆ ನಾಲ್ಕೈದು ಚಿತ್ರಗಳಂತೆ, ಒಂದು ವಾರದಲ್ಲಿ 35 ಚಿತ್ರಗಳನ್ನು ನೋಡಬಹುದು. ಅಷ್ಟು ಚಿತ್ರಗಳನ್ನು ನೋಡುವುದೆಂದರೆ, 35 ಪಠ್ಯಪುಸ್ತಕಗಳನ್ನು ಓದಿದಂಗೆ. ಚಿತ್ರಗಳನ್ನು ಜೊತೆಗೆ ಒಂದೊಂದು ಚಿತ್ರವನ್ನು ಸಾಮಾಜಿಕ ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಅರ್ಥೈಸುವುದರಿಂದ ಸಿನಿಮಾ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು ಎಂದು ಅವರು ಹೇಳಿದರು.

ತಮ್ಮ ಐದು ಚಿತ್ರಗಳು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದ್ದರ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಅವರು, ನನ್ನ ಮೂರು ಚಿತ್ರಗಳು ಜನಪ್ರಿಯ ಚಿತ್ರ ವಿಭಾಗದಲ್ಲಿ ಪ್ರದರ್ಶನಗೊಂಡರೆ, ಎರಡು ಚಿತ್ರಗಳು ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರದರ್ಶನಗೊಂಡಿದೆ. ಬೆಂಗಳೂರು ಚಿತ್ರೋತ್ಸವ ನನಗೆ ವಿಶ್ವವಿದ್ಯಾಲಯವಿದ್ದಂತೆ. ನಾನು ಯಾವ ನಿರ್ದೇಶಕರ ಹತ್ತಿರವೂ ಕೆಲಸ ಕಲಿತಿಲ್ಲ. ನಾನು ನಿರ್ದೇಶನ ಕಲಿತಿದ್ದು, ಚಿತ್ರೋತ್ಸವಗಳಲ್ಲಿ ಚಿತ್ರಗಳನ್ನು ನೋಡಿ. ಸಾಮಾನ್ಯವಾಗಿ ನಮ್ಮ ಚಿತ್ರಗಳಲ್ಲಿ ಹಾಡು, ಹೊಡೆದಾಟ ಎಲ್ಲವನ್ನೂ ನೋಡುತ್ತಾ ಬೆಳೆದವರು ನಾವು. ಅದರಾಚೆಗೂ ಏನೋ ಇದೆ ಎಂದು ಗೊತ್ತಾಗಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಚಿತ್ರಗಳನ್ನು ನೋಡಿಯೇ ಎಂದು ಅವರು ಹೇಳಿದರು.

ತಮ್ಮ ಹಿಂದಿನ ಚಿತ್ರಗಳಲ್ಲಿ ಒಂದಿಷ್ಟು ಸಾಮಾಜಿಕ ಸಮಸ್ಯೆಗಳ ಕುರಿತು ಹೇಳಿದ್ದ ಮಂಸೋರೆ, ಈ ಬಾರಿ ʼದೂರ ತೀರ ಯಾನʼ ಚಿತ್ರದಲ್ಲಿ ಪ್ರೇಮಕಥೆಯೊಂದನ್ನು ಹೇಳಿದ್ದಾರೆ. ತಾವು ಬದಲಾಗುವುದಕ್ಕೆ ಪ್ರಮುಖವಾಗಿ ಚಿತ್ರೋತ್ಸವ ಕಾರಣ ಎಂದ ಅವರು, ಯಾವುದೋ ಒಂದು ಶೈಲಿಗೆ ಸಿಲುಕಬಾರದು, ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿರಬೇಕು ಎಂಬ ವಿಷಯವನ್ನು ನಾನು ಕಲಿತಿದ್ದೇ ಚಿತ್ರೋತ್ಸವದಿಂದ. ಪ್ರತಿ ಚಿತ್ರ ಸಹ ಒಂದು ಹೊಸ ಸವಾಲಾಗಿರಬೇಕು. ಒಂದು ಚೌಕಟ್ಟಿಗೆ ಸಿಲುಕಿದರೆ, ಹೊಸದೇನನ್ನೋ ಕಲಿಯುವುದಕ್ಕೆ ಸಾಧ್ಯವಿಲ್ಲ. ಚೌಕಟ್ಟಿನಿಂದ ಹೊರಬಂದರೆ ಮಾತ್ರ ಬೇರೆ ಏನನ್ನೋ ಮಾಡಲು ಸಾಧ್ಯ. ಅದಕ್ಕೆ ಒಳ್ಳೆಯ ಉದಾಹರಣೆ ಸ್ಟೀವನ್‌ ಸ್ಪೀಲ್‌ಬರ್ಗ್. ಅವರು ತಮ್ಮ ಪ್ರತೀ ಚಿತ್ರದಲ್ಲೂ ಹೊಸದೇನನ್ನೂ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ನಾನು ಸಹ ʼದೂರ ತೀರ ಯಾನʼ ಚಿತ್ರದಲ್ಲಿ ಪ್ರೀತಿ ಮತ್ತು ಕಲಾತ್ಮಕ ಚಿತ್ರದ ನಡುವಿನ ಪಥವನ್ನು ಪ್ರಯೋಗ ಮಾಡಿದ್ದೇನೆ ಎಂದರು.


Share

You cannot copy content of this page