ಸಮಗ್ರ ಸುದ್ದಿ

ಎನ್.ಡಿ.ಪಿ‌.ಎಸ್. ಕಾಯ್ದೆಯಡಿ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು ನಾಶ | ಎನ್‌.ಡಿಪಿಎಸ್ ಕಾಯ್ದೆ ಸಮರ್ಪಕವಾಗಿ ಜಾರಿಗೊಳಿಸಲು ಸಚಿವ ತಿಮ್ಮಾಪೂರ ಸೂಚನೆ

Share

ಬೆಂಗಳೂರು: ಬೆಂಗಳೂರಿನಲ್ಲಿ ಅಬಕಾರಿ‌ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದ ರೂ. 5.71 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಇಂದು ನಾಶಪಡಿಸಲಾಯಿತು.

ದಾಬಸ್‌ಪೇಟೆಯ ಕೆಡಬ್ಲ್ಯೂಡಬ್ಲ್ಯೂಎ ನಲ್ಲಿ ಬೆಂಗಳೂರು ಉತ್ತರ ವಿಭಾಗದ 1,2,3,4 ಅಬಕಾರಿ ಜಿಲ್ಲೆಗಳಲ್ಲಿ ಎನ್‌.ಡಿಪಿಎಸ್ ಕಾಯ್ದೆಯಡಿ 156 ಪ್ರಕರಣಗಳಲ್ಲಿ ಸುಮಾರು 650 ಕೆಜಿಯಷ್ಟು ಗಾಂಜಾ, 2.296 ಕೆಜಿ ಗಾಂಜಾ ಮಿಶ್ರಿತ ಚಾಕೋಲೆಟ್, 70 ಗ್ರಾಂ MDMA, 570 ಗ್ರಾಂ ಹಶೀಶ್ ಆಯಿಲ್, ಗಾಂಜಾ ಗಿಡಗಳು ಸೇರಿದಂತೆ ಹಲವು ರೀತಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಕಾನೂನಿನ ಕಣ್ಣುತಪ್ಪಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾದಕ ವಸ್ತುಗಳನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ನ್ಯಾಯಾಲಯದ ಅನುಮತಿ ಮೇರೆಗೆ ಇಂದು ಮಾದಕ ವಸ್ತಗಳನ್ನು ನಾಶಪಡಿಸಲಾಗಿದೆ‌. ಈ ವೇಳೆ ಬಿಯುಡಿ 1 ಉಪ ಆಯುಕ್ತ ಮೌಸಸ್ ಸ್ಯಾಮುಯೆಲ್, ಬಿಯುಡಿ 2 ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್, ಬಿಯುಡಿ 3 ಉಪ ಆಯುಕ್ತ ಮುರುಳಿ, ಬಿಯುಡಿ 4 ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಇಲಾಖೆಯ‌ ಸಿಬ್ಬಂದಿ ಉಪಸ್ಥಿತರಿದ್ದರು.

ನಾವು ಅಧಿಕಾರಕ್ಕೆ ಬಂದ ನಂತರ ಡ್ರಗ್ಸ್‌ಗೆ ಕಡಿವಾಣ ಹಾಕಬೇಕು ಎಂದು ನಮ್ಮ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿತ್ತು. ಯುವಕರ ಆರೋಗ್ಯ, ಭವಿಷ್ಯದ ದೃಷ್ಟಿಯಿಂದ ಡ್ರಗ್ಸ್‌ಗೆ ಕಡಿವಾಣ ಹಾಕಬೇಕು. ಎನ್‌.ಡಿಪಿಎಸ್ ಕಾಯ್ದೆ ಸಮರ್ಪಕವಾಗಿ, ಮತ್ತಷ್ಟು ಪರಿಣಾಮವಾಗಿ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿದೆ ಎಂದು ಅಬಕಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page