ಬೆಂಗಳೂರು: ನಾವೀನ್ಯತೆ, ಡೀಪ್‌ಟೆಕ್ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಜಾಗತಿಕ ಕೇಂದ್ರವಾಗಿ ಬೆಳೆಯುವ ನಿಟ್ಟಿನಲ್ಲಿ ಕರ್ನಾಟಕವು ದಾಪುಗಾಲು ಹಾಕುತ್ತಿದೆ.
ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೂಲಕ, ಈ ಕ್ಷೇತ್ರಗಳಲ್ಲಿನ ರಾಜ್ಯದ ಮುನ್ನಡೆಗೆ ವೇಗ ನೀಡುವುದನ್ನು ರಾಜ್ಯ ಸರ್ಕಾರವು ಮುಂದುವರೆಸಿದೆ.
2025 ರಲ್ಲಿ ನವೋದ್ಯಮಗಳಿಗೆ ಹಣಕಾಸು ನೆರವು ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್‌ನಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ. ಉದ್ಯಮದ ಇತ್ತೀಚಿನ ದತ್ತಾಂಶಗಳು ಮತ್ತು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ ಒಕ್ಕೂಟದ (ಫಿಕ್ಕಿ – ಅನರಾಕ್ ) ವರದಿಯು ಇದನ್ನು ದೃಢಪಡಿಸಿದೆ.
ಕರ್ನಾಟಕದ ತಂತ್ರಜ್ಞಾನ ವಲಯವು 2025 ರಲ್ಲಿ 3.8 ಶತಕೋಟಿ ಡಾಲರ್ ಬಂಡವಾಳ ಸಂಗ್ರಹಿಸಿದೆ. ಆರಂಭಿಕ ಹಂತದ ಹಣಕಾಸು ನೆರವಿನ ಚಟುವಟಿಕೆಗಳೇ ಇದರ ಪ್ರಮುಖ ಚಾಲಕ ಶಕ್ತಿಯಾಗಿದ್ದು, ರಾಜ್ಯದ ನವೋದ್ಯಮ ಹಾಗೂ ನಾವೀನ್ಯತಾ ವಲಯದ ಮೇಲೆ ಹೂಡಿಕೆದಾರರು ಇರಿಸಿರುವ ನಿರಂತರ ವಿಶ್ವಾಸವನ್ನು ಮತ್ತೊಮ್ಮೆ ಪುನರುಚ್ಚರಿಸಿದೆ.
ಒಟ್ಟಾರೆ ಹೂಡಿಕೆ / ಹಣಕಾಸು ನೆರವಿನ ಚಟುವಟಿಕೆಗಳಲ್ಲಿ ಆರಂಭಿಕ ಹಂತದ ಒಪ್ಪಂದಗಳು ಮುಂಚೂಣಿಯಲ್ಲಿವೆ. ಫಿನ್‌ಟೆಕ್ ಪ್ರಮುಖ ಕ್ಷೇತ್ರವಾಗಿ ಹೊರಹೊಮ್ಮಿದ್ದು, ಕರ್ನಾಟಕದ ನಾವೀನ್ಯತಾ ಕ್ಷೇತ್ರದ ಮಹತ್ವ ಮತ್ತು ವೈವಿಧ್ಯತೆಗೆ ಹಿಡಿದ ಕನ್ನಡಿಯಾಗಿದೆ. ʼಫಿಕ್ಕಿ-ಅನರಾಕ್ʼ (FICCI–ANAROCK) ವರದಿಯಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ವಿಷಯದಲ್ಲಿಯೂ ಬೆಂಗಳೂರಿನ ಮುಂಚೂಣಿ ಸ್ಥಾನವು ಬಲವಾಗಿ ಸಾಬೀತಾಗಿದೆ. 2025 ರಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಕಚೇರಿ ಸ್ಥಳದ ಗುತ್ತಿಗೆಯಲ್ಲಿ ʼಜಿಸಿಸಿʼಗಳ ಕೊಡುಗೆ ಶೇಕಡ 40ರಷ್ಟಿದೆ. ದೇಶದ ಒಟ್ಟಾರೆ ʼಜಿಸಿಸಿʼ ಗುತ್ತಿಗೆಯ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನದು ಬೆಂಗಳೂರು ಪಾಲಾಗಿದೆ.
ಬೆಂಗಳೂರು ನಗರವು 12 ದಶಲಕ್ಷ ಚದರ ಅಡಿಗಳಿಗೂ ಹೆಚ್ಚಿನ ಸ್ಥಳಾವಕಾಶವು ʼಜಿಸಿಸಿ ಗುತ್ತಿಗೆʼ ಪಾಲಾಗಿದೆ. ಇದು ಪುಣೆಗಿಂತ ಎರಡು ಪಟ್ಟು ಹೆಚ್ಚು ಮತ್ತು ಹೈದರಾಬಾದ್ ಮತ್ತು ದೆಹಲಿ ಎನ್‌ಸಿಆರ್ ಗಿಂತ ಸುಮಾರು ಮೂರು ಪಟ್ಟು ಹೆಚ್ಚು. ಸದ್ಯಕ್ಕೆ ಬೆಂಗಳೂರಿನಲ್ಲಿ ಸುಮಾರು 215 ದಶಲಕ್ಷ ಚದರ ಅಡಿಗಳಷ್ಟು ಗ್ರೇಡ್ ಎ ಕಚೇರಿ ಸ್ಥಳಾವಕಾಶ ಇದೆ. ಕೇವಲ ಒಂದು ವರ್ಷದಲ್ಲೇ 13.5 ದಶಲಕ್ಷ ಚದರ ಅಡಿಗಳಷ್ಟು ಹೊಸ ಸ್ಥಳಾವಕಾಶ ಸೇರ್ಪಡೆಯಾಗಿದೆ. ಕಚೇರಿ ಸ್ಥಳಾವಕಾಶದ ಬಳಕೆ ಹಾಗೂ ಬೇಡಿಕೆಯು ಸುಮಾರು 15 ದಶಲಕ್ಷ ಚದರ ಅಡಿಗಳಿಗೆ ತಲುಪಿದೆ, ಇದು ರಾಷ್ಟ್ರೀಯ ಒಟ್ಟು ಪ್ರದೇಶದ ನಾಲ್ಕನೇ ಒಂದು ಭಾಗಕ್ಕೆ ಹತ್ತಿರದಲ್ಲಿದೆ. ಜಾಗತಿಕ ಉದ್ಯಮಗಳಿಂದ ನಗರದಲ್ಲಿ ಕಚೇರಿ ಸ್ಥಳಾವಕಾಶಕ್ಕೆ ಇರುವ ಬಲವಾದ, ನಿರಂತರ ಬೇಡಿಕೆಯನ್ನು ಇದು ಸೂಚಿಸುತ್ತದೆ.
ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ ಆ್ಯಂಡ್ ಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದು, ʼದೇಶದ ಪ್ರಮುಖ ನಾವೀನ್ಯತೆ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಅಚ್ಚುಮೆಚ್ಚಿನ ತಾಣವಾಗಿ ಕರ್ನಾಟಕವು ಪ್ರಗತಿ ಪಥದಲ್ಲಿ ಮುನ್ನಡೆದಿರುವುದಕ್ಕೆ ಸುಸ್ಥಿರ ನೀತಿ, ಪೂರಕ ಪರಿಸರ ನಿರ್ಮಾಣ ಮತ್ತು ಯೋಜನೆಗಳು ವಾಸ್ತವರೂಪದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಕಾರ್ಯಗತಗೊಂಡಿರುವುದರ ಒಟ್ಟಾರೆ ಫಲಿತಾಂಶವಾಗಿದೆ.
ನವೋದ್ಯಮಗಳ ಸ್ಥಾಪನೆ ಬಲಪಡಿಸಲು, ಜಾಗತಿಕ ತಂತ್ರಜ್ಞಾನ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ವಿಶ್ವ ದರ್ಜೆಯ, ಸುಸ್ಥಿರ ಮೂಲಸೌಕರ್ಯಗಳನ್ನು ನಿರ್ಮಿಸುವುದಕ್ಕೆ ನಮ್ಮ ಸರ್ಕಾರ ಒತ್ತು ನೀಡಿದೆ. ನವೋದ್ಯಮ ನಿಧಿಯ ಗರಿಷ್ಠ ಸದ್ಬಳಕೆ ಮತ್ತು ʼಜಿಸಿಸಿʼಗಳ ಸ್ಥಾಪನೆಗೆ ಕಚೇರಿ ಸ್ಥಳಾವಕಾಶದ ಗಮನಾರ್ಹ ಬಳಕೆ ಹಾಗೂ ಬೇಡಿಕೆಯು ಬೆಂಗಳೂರಿನ ನಿರಂತರ ಪ್ರಾಬಲ್ಯಕ್ಕೆ ನಿದರ್ಶನವಾಗಿದೆ. ಜಾಗತಿಕ ಕಂಪನಿಗಳು ಮತ್ತು ಹೂಡಿಕೆದಾರರು ಕರ್ನಾಟಕದ ಭವಿಷ್ಯಕ್ಕೆ ಸಿದ್ಧವಾದ, ನಾವೀನ್ಯತೆ-ನೇತೃತ್ವದ ಆರ್ಥಿಕತೆಯ ದೂರದೃಷ್ಟಿಯಲ್ಲಿ ಹೊಂದಿರುವ ವಿಶ್ವಾಸವನ್ನೂ ಇದು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳು, ಡಿಜಿಟಲ್ ನಾವೀನ್ಯತೆ ಮತ್ತು ಗರಿಷ್ಠ ಮೌಲ್ಯದ ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಕರ್ನಾಟಕದ ನಾಯಕತ್ವವನ್ನು ಇನ್ನಷ್ಟು ಬಲಪಡಿಸಲು ಉದ್ಯಮ, ನವೋದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಜಾಗತಿಕ ಪಾಲುದಾರರ ಜೊತೆ ನಿಕಟವಾಗಿ ಕೆಲಸ ಮಾಡುವುದನ್ನು ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ ಆ್ಯಂಡ್ ಟಿ ಇಲಾಖೆಯು ಮುಂದುವರೆಸಿದೆ. ಈ ಕ್ಷೇತ್ರಗಳಲ್ಲಿನ ಪ್ರಗತಿಯು ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಸ್ವರೂಪದ, ಸುಸ್ಥಿರ ಮತ್ತು ಭವಿಷ್ಯ ಆಧರಿಸಿರುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.
