ಬೆಂಗಳೂರು: ಜಿಬಿಎ ವ್ಯಾಪ್ತಿಯ ಪಶ್ಚಿಮ ನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಅಧಿಸೂಚನೆಯಲ್ಲಿ ನಮೂದಿಸಿರುವ ವಾರ್ಡ್ ಗಡಿಗಳ ಪಾಲನೆ ಕಡ್ಡಾಯ ಎಂದು ಆಯುಕ್ತರಾದ ಡಾ: ರಾಜೇಂದ್ರ ಕೆ. ವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಕರಡು ಮತದಾರರ ಪಟ್ಟಿಯ ಪರಿಶೀಲನೆಗೆ ಸಂಬಂಧಿಸಿದ ಪ್ರಮಾಣಿತ ಕಾರ್ಯವಿಧಾನ (ಎಸ್ ಒಪಿ) ಕುರಿತು ಆಯೋಜಿಸಲಾದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿಭಜಿತ ವಾರ್ಡ್‌ಗಳ ಪರಿಶೀಲನೆ ಮತ್ತು ದೃಢೀಕರಣ:
ಕರಡು ಮತದಾರರ ಪಟ್ಟಿ ಮಾಹಿತಿಯ ಆಧಾರದ ಮೇಲೆ ಎಲ್ಲಾ ವಾರ್ಡ್‌ಗಳನ್ನು, ವಿಶೇಷವಾಗಿ ವಿಭಜಿತ ವಾರ್ಡ್‌ಗಳನ್ನು, ಭೌಗೋಳಿ ಕವಾಗಿ ಭೇಟಿ ನೀಡಿ ನಿಯಮನುಸಾರ ಕ್ರಮ ವಹಿಸಲು ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಯಾವುದೇ ಲೋಪದೋಷ ಆಗದಂತೆ ಸೂಕ್ಷ್ಮವಾಗಿ ಪರಿಶೀಲಿಸುವಂತೆ ಅವರು ಸೂಚಿಸಿದರು.
ಕಂದಾಯ ಅಪರ ಆಯುಕ್ತರಾದ ಮಂಜುನಾಥ್ ಸ್ವಾಮಿ ರವರು ಸಭೆ ಉದ್ದೇಶಿಸಿ ಮಾತನಾಡಿ, ವಿಧಾನಸಭಾ ಮತದಾರರ ಪಟ್ಟಿಯು ಒಂದಕ್ಕಿಂತ ಹೆಚ್ಚಿನ ವಾರ್ಡಗಳ ಮತದಾರರ ಪಟ್ಟಿಗೆ ಭಾಗಶಃ ವಿಭಜನೆಯಾಗಿದ್ದಲ್ಲಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಲು ಸೂಚಿಸಿದರು.
ಒಂದೇ ಕುಟುಂಬದ ಮತದಾರರು ಬೇರೆ ಬೇರೆ ಮತಗಟ್ಟೆಗಳಿಗೆ ಹಂಚಿಕೆಯಾಗಿರುವುದನ್ನು ಸರಿಪಡಿಸಲು ಸೂಚಿಸಿದರು.
ಸದರಿ ಸಭೆಯಲ್ಲಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಜಂಟಿ ಆಯುಕ್ತರುಗಳಾದ ಆರತಿ ಆನಂದ, ಸಂಗಪ್ಪ, ಉಪ ಆಯುಕ್ತರು, ಸಹಾಯಕ ಆಯುಕ್ತರು, ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಹಾಗೂ ಕಂದಾಯ ವಿಭಾಗದ ಸಿಬ್ಬಂದಿಗಳು ಹಾಜರಿದ್ದರು.
ಮಲೇಶ್ವರಂ ವಿಭಾಗದಲ್ಲಿ ಆಯುಕ್ತರಿಂದ ಖುದ್ದಾಗಿ ಮನೆ ಭೇಟಿ ಕರಡು ಪಟ್ಟಿ ಪರಿಶೀಲನೆ:
ಮಲ್ಲೇಶ್ವರಂ ವಾರ್ಡನಲ್ಲಿ ಆಯುಕ್ತರು, ಕರಡು ಮತದಾರರ ಪಟ್ಟಿಯನ್ನು ವಿಭಾಗದ ಕಂದಾಯ ಅಧಿಕಾರಿಗಳ ಜೊತೆ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನಾ ವೇಳೆ ಕಂದಾಯ ಅಧಿಕಾರಿ ಎಂ ಶ್ರೀನಿವಾಸ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
