ಸಮಗ್ರ ಸುದ್ದಿ

ಬಿ.ಪಿ.ಎಲ್ ಕಾರ್ಡ್ ಪರಿಷ್ಕರಣೆ ವೇಳೆ ಮನೆ ಸಾಲ, ಬೈಕ್ ಸಾಲಕ್ಕಾಗಿ ಆದಾಯ ತೆರಿಗೆ ಪಾವತಿಸುತ್ತಿರುವವರಿಗೆ ವಿನಾಯಿತಿ : ಸಚಿವ ಕೆ.ಎಚ್.ಮುನಿಯಪ್ಪ |ಮಕ್ಕಳು ಬೇರೆ ಕಡೆ ಕೆಲಸ ಮಾಡಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಪರಿಶೀಲಿಸಿ ತಂದೆ-ತಾಯಿಗೆ ಬಿಪಿಎಲ್‌ ಕಾರ್ಡ್‌

Share

ಹಾಸನ: ಬಿ.ಪಿ.ಎಲ್ ಕಾರ್ಡ್ ಪರಿಷ್ಕರಣೆ ವೇಳೆ ಮನೆ ಸಾಲ, ಬೈಕ್ ಸಾಲಕ್ಕಾಗಿ ಆದಾಯ ತೆರಿಗೆ ಪಾವತಿಸುತ್ತಿರುವ ವಿನಾಯಿತಿ ನೀಡಬೇಕು, ದೀರ್ಘ ಕಾಲದಿಂದ ತೆರಿಗೆ ಪಾವತಿ ಮಾಡುತ್ತಿರುವರ ಕಾರ್ಡ್ ಗಳನ್ನು ಎ.ಪಿ.ಎಲ್
ಮಾತ್ರ ಪರಿವರ್ತಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಆಹಾರ ಮತ್ತು ನಾಗರಿಕ ಸರಬರಾಜು, ಕಾನೂನು ಮಾಪನ ಶಾಸ್ತ್ರ ಹಾಗೂ ಆಹಾರ ನಿಗಮದ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಜಿಲ್ಲೆಯಲ್ಲಿ 2396 ಬಿಪಿಎಲ್‌ ಕಾರ್ಡ್‌ಗಳು ಪರಿಷ್ಕರಣೆಯಲ್ಲಿವೆ. ಈಗಾಗಲೇ ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತಿಸಿದ್ದರೆ ಅಗತ್ಯ ದಾಖಲೆಗಳನ್ನು ಪಡೆದು ಬಿಪಿಎಲ್‌ ಕಾರ್ಡ್‌ ನೀಡಲು ಮರು ಪರಿಶೀಲನೆ ನಡೆಸಬೇಕು.

ಕುಟುಂಬದಲ್ಲಿ ಮಕ್ಕಳು ಬೇರೆ ಕಡೆ ಕೆಲಸ ಮಾಡಿಕೊಂಡು ಆದಾಯ ತೆರಿಗೆ ಪಾವತಿಸುತ್ತಿದ್ದರೆ ತಂದೆ-ತಾಯಿಗೆ ಬಿಪಿಎಲ್‌ ಕಾರ್ಡ್‌ ನೀಡಬಹುದು. ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದರು.

75 ವಯಸ್ಸಿನ ಮೇಲ್ಪಟ್ಟ ಒಂಟಿ ಹಿರಿಯ ನಾಗರೀಕರು ಮಾತ್ರ ಇರುವ ಮನೆಗಳಿಗೆ ಅನ್ನಸುವಿಧಾ ಯೋಜನೆ ಮೂಲಕ ಅರ್ಹ ಫಲಾನುಭವಿಗಳ ನ್ಯಾಯಬೆಲೆ ಅಂಗಡಿಯವರು ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡಬೇಕು ಅಧಿಕಾರಿಗಳು ಆದ್ಯತೆ ಮೇಲೆ ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ 75 ವರ್ಷ ಮೀರಿದ 15 ಸಾವಿರ ನಾಗರಿಕರಿದ್ದು, ಅದರಲ್ಲಿ 10 ಸಾವಿರ ಜನರು ಮೊಬೈಲ್‌ ಹೊಂದೆ ಇರುವ ಕಾರಣಕ್ಕೆ ಯೋಜನೆಯಿಂದ ವಂಚಿತರಾಗಿದ್ದಾರೆ. 148 ಜನರು ಮೃತಪಟ್ಟಿದ್ದಾರೆ. 2,750 ಫಲಾನುಭವಿಗಳಿಗೆ ಯೋಜನೆ ಲಾಭ ದೊರೆಯುತ್ತಿದೆ. ಇನ್ನು 2112 ಜನರ ಮನೆಗೆ ಆಹಾರ ಪದಾರ್ಥ ತಲುಪಬೇಕಿದ್ದು ಅಧಿಕಾರಿಗಳು ಮುತುವರ್ಜಿ ವಹಿಸಿ ತಲುಪಿಸಬೇಕು ಎಂದು ತಿಳಿಸಿದರು .

ನ್ಯಾಯಬೆಲೆ ಅಂಗಡಿಯವರು ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡಬೇಕು. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಗೆ ನಿಗದಿಪಡಿಸಿರುವ ರಾಗಿ ಖರೀದಿ ವೇಳೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದರು.

ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮುದಾಯದ ಸಂಘ ಸಂಸ್ಥೆಗಳಿಗೆ/ಸಮುದಾಯದ ಖಾಸಗಿ ವ್ಯಕ್ತಿಗಳಿಗೆ ಮೀಸಲಾತಿಯನ್ನು ಅನುಸರಿಸಿ ಹೊಸ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಜಿಲ್ಲೆಗೆ 210 ನ್ಯಾಯಬೆಲೆ ಅಂಗಡಿಗಳು ಮಂಜೂರಾಗಿದ್ದು, ನ್ಯಾಯಬೆಲೆ ಅಂಗಡಿಗಳನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮುದಾಯದ ಸಂಘ ಸಂಸ್ಥೆಗಳಿಗೆ ನೀಡುವುದರಿಂದ ಉದ್ಯೋಗ ನೀಡಿದಂತಾಗುತ್ತದೆ ಎಂದರು.

ದೇಶದ ವಿವಿಧ ರಾಜ್ಯಗಳಿಗೆ ಹಾಗೂ ವಿದೇಶಗಳಿಗೆ ರಾಗಿಗೆ ಬೇಡಿಕೆ ಬರುತ್ತಿದ್ದು, ಅಧಿಕಾರಿಗಳು ಗುಣಮಟ್ಟದ ಕಾಯ್ದುಕೊಂಡು ರಾಗಿಯನ್ನು ಖರೀದಿ ಮಾಡಬೇಕು. ರೈತರು ಸಹ ಒಳ್ಳೆಯ ರಾಗಿ ಮಾರಾಟ ಮಾಡಬೇಕು ಎಂದರು.

ಸರ್ಕಾರದಿಂದ ಇಂದಿರಾ ಕಿಟ್‌ ನೀಡುವ ಯೋಜನೆ ಜಾರಿಗೊಳಿಸಿದ್ದು, ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ ತಿಂಗಳಲ್ಲಿ ಕಿಟ್‌ ನೀಡಲಾಗುವುದು. ಕಿಟ್‌ನಲ್ಲಿ ಬೆಲೆ, ಸಕ್ಕರೆ, ಅಡುಗೆ ಎಣ್ಣೆ, ಉಪ್ಪು ನೀಡಲಾಗುವುದು. ಅದರಿಂದ ಪೌಷ್ಟಿಕ ಆಹಾರ ಸಿಗುತ್ತದೆ ಎಂದು ಅವರು ತಿಳಿಸಿದರು.

ತೂಕ ಅಳತೆಯ ಪರಿಶೀಲನೆಯನ್ನು ನಡೆಸಬೇಕು. ಗ್ರಾಹಕರಿಗೆ ಉಂಟಾಗುವ ನಷ್ಟವನ್ನು ತಡೆಯಬೇಕು, ಇಲಾಖೆಗೆ ನಿಗದಿಪಡಿಸುವ ಗುರಿಯನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಎಸ್‌‍.ಲತಾಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್‌.ಪೂರ್ಣಿಮಾ, ಜಿಲ್ಲಾ ಪೊಲೀಸ್‌‍ ವರಿಷ್ಟಾಧಿಕಾರಿ ಶುಭನ್ವಿತಾ, ಅಪರ ಜಿಲ್ಲಾಧಿಕಾರಿ ಜಗದೀಶ್‌ ಗಂಗಣ್ಣನವರ್‌, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ದೂದಪೀರ್‌, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಅರುಣ್‌ ಕುಮಾರ್‌ ಸಂಗಾವಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page