ಸಮಗ್ರ ಸುದ್ದಿ

ಹೆಬ್ಬಾಳ: ಕುಡಿಯುವ ನೀರು ಸಮಸ್ಯೆ ಎದುರಿಸಲು ಸನ್ನದ್ಧ |ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಬೈರತಿ ಸುರೇಶ್

Share

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಬೇಸಿಗೆಯಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಈಗಿನಿಂದಲೇ ಕ್ರಮ ವಹಿಸಲಾಗುತ್ತಿದೆ ಎಂದು ಕ್ಷೇತ್ರದ ಶಾಸಕರೂ ಆಗಿರುವ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಹೆಬ್ಬಾಳ ಕ್ಷೇತ್ರದ ನಾಗಶೆಟ್ಟಿಹಳ್ಳಿಯ ಪುನೀತ್ ರಾಜ್ ಕುಮಾರ್ ವೃತ್ತ, ಗೋವಿಂದಪ್ಪ ಬಡಾವಣೆಯ ಸರ್ಕಾರಿ ಶಾಲೆ ಸಮೀಪ, ಲೊಟ್ಟೆಗೊಲ್ಲಹಳ್ಳಿಯ ಅಂಜನಮೂರ್ತಿ ವೃತ್ತ, ಕಬಡ್ಡಿ ಮೈದಾನದ ಬಳಿಯ ದೇವಸಂದ್ರ ವೃತ್ತ, ಇಸ್ರೋ ಸಮೀಪದ ಕೃಷ್ಣಪ್ಪ ಬಡಾವಣೆ, ಸಿಐಎಲ್ ಬಡಾವಣೆಯ ರಾಧಾಕೃಷ್ಣ ದೇವಸ್ಥಾನ, ಗೆದ್ದಲಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯದ ಬಳಿಯ ರಸ್ತೆ ಸೇರಿದಂತೆ ವಿವಿಧ ರಸ್ತೆಗಳ ಅಭಿವೃದ್ಧಿ, ಕಾಂಕ್ರಿಟ್ ರಸ್ತೆ ನಿರ್ಮಾಣ ಹಾಗೂ ಒಳಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬೇಸಿಗೆ ಆರಂಭಕ್ಕೂ ಮುನ್ನವೇ ಈಗಾಗಲೇ 25 ಕ್ಕೂ ಹೆಚ್ಚು ಹೊಸದಾದ ಬೋರ್ ವೆಲ್ ಗಳನ್ನು ಕೊರೆಸಲಾಗಿದೆ. ಅಲ್ಲದೇ, ಹಳೆಯ ಬೋರ್ ವೆಲ್ ಗಳನ್ನು ದುರಸ್ತಿ ಮಾಡಲಾಗಿದೆ ಎಂದು ಹೇಳಿದರು.

ಇನ್ನೂ ಕೆಲವೆಡೆ ಹಳೆಯ ಬೋರ್ ವೆಲ್ ಗಳನ್ನು ದುರಸ್ತಿಗೊಳಿಸುವ ಕಾರ್ಯವನ್ನು ಕೈಗೊಳ್ಳಬೇಕು ಮತ್ತು ಅಗತ್ಯವಿರುವ ಕಡೆಗಳಲ್ಲಿ ಹೊಸದಾಗಿ ಬೋರ್ ವೆಲ್ ಗಳನ್ನು ಕೊರೆಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಈ ಬಾರಿ ಬೇಸಿಗೆಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂಬ ವಿಶ್ವಾಸವಿದೆ. ಆದಾಗ್ಯೂ, ನೀರಿನ ಸಮಸ್ಯೆ ಎದುರಾಗುವ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಸಿದ್ಧರಾಗಿರಬೇಕೆಂದೂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಹೆಬ್ಬಾಳ ಕ್ಷೇತ್ರದಲ್ಲಿ ಕೆಲವೆಡೆ ರಸ್ತೆಗಳು ಹಾನಿಗೊಂಡಿದ್ದವು. ಇಂತಹ ರಸ್ತೆಗಳು ಸೇರಿದಂತೆ ಸುಮಾರು 300 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲವೆಡೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಏಕಕಾಲಕ್ಕೆ ಕೈಗೊಂಡಿರುವ ಈ ಕಾಮಗಾರಿಗಳಿಗೆ ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದರು.


Share

You cannot copy content of this page