ಸಮಗ್ರ ಸುದ್ದಿ

ಸುವರ್ಣ ಮಹೋತ್ಸವ ಮುಂದಿನ 50 ವರ್ಷಕ್ಕೆ ಪೀಠಿಕೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Share

ಬೆಂಗಳೂರು: ನವೆಂಬರ್ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಅಂಗನವಾಡಿ ಸುವರ್ಣ ಮಹೋತ್ಸವ ಕಾರ್ಯಕ್ರಮ ಮುಂದಿನ 50 ವರ್ಷಕ್ಕೆ ಪೀಠಿಕೆ ಹಾಕಿದಂತೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಂಗಳೂರಿನಲ್ಲಿ ನವೆಂಬರ್ 28 ರಂದು ನಡೆಯಲಿರುವ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಗೆ ಚಾಲನೆ ಕುರಿತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೀರಸಂದ್ರದ ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ಅಂದಿನ ಐತಿಹಾಸಿಕ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ನಮ್ಮ ಸರ್ಕಾರ ಮಹಿಳೆಯರ ಪರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರಿಂದ ಹಿಡಿದು ಸಿದ್ದರಾಮಯ್ಯನವರವರೆಗೂ ಮಹಿಳೆಯರ ಪರ ಚಿಂತನೆ, ಯೋಜನೆಗಳನ್ನು ರೂಪಿಸಿದ್ದಾರೆ. ಇಂದಿರಾ ಗಾಂಧಿಯವರ ಪರಿಕಲ್ಪನೆಯಂತೆ ಕರ್ನಾಟಕ ರಾಜ್ಯದಲ್ಲಿ ಮೈಸೂರಿನ ಟಿ.ನರಸೀಪುರದಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲಾಯಿತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ, ಇಂದು ವಿಶ್ವದ ಹಿರಿಯಣ್ಣ ಆಗುವ ಮಟ್ಟಕ್ಕೆ ಭಾರತ ಬೆಳೆದಿದೆ, ಪಕ್ಷದ ನೀತಿ, ಸಿದ್ದಾಂತ, ಯೋಜನೆಗಳೇ ದೇಶದ ಅಭಿವೃದ್ಧಿಗೆ ಪೂರಕ. ಕಾಂಗ್ರೆಸ್ ಎಂದರೆ ಜನರ ಪರ, ಮಹಿಳೆಯರ ಪರ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2.18 ಲಕ್ಷ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದು, ಇದುವರೆಗೆ 900 ಕೋಟಿ ರೂಪಾಯಿ ಸಂದಾಯವಾಗಿದೆ ಎಂದು ಹೇಳಿದರು.

ಮಹಿಳೆಯರ ಪರ ಹಲವಾರು, ಕಾರ್ಯಕ್ರಮಗಳನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ. ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಅಂತ ಕಾನೂನು ತಂದಿದ್ದು ಕಾಂಗ್ರೆಸ್ ಪಕ್ಷ, ಕ್ಷೀರ ಭಾಗ್ಯ, ಅನ್ನ ಭಾಗ್ಯ ಸೇರಿದಂತೆ ‌ಹಲವು ಯೋಜನೆಗಳನ್ನು ತಂದಿದ್ದೇವೆ ಎಂದು ಹೇಳಿದರು.

ಮುಂದಿನ ವಾರ ಮೂರು ದೊಡ್ಡ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಒಂದು ಅಕ್ಕ ಪಡೆ, ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ, ಯುಕೆಜಿ ಆರಂಭದ ಜೊತೆಗೆ ಮಹಿಳೆಯರಿಗಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2.18 ಲಕ್ಷ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿದ್ದು, , ಯೋಜನೆಯ ಯಶಸ್ಸಿಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರೆ ಕಾರಣ. ಬ್ಯಾಂಕ್ ನಲ್ಲಿ 30 ಸಾವಿರದಿಂದ 3 ಲಕ್ಷದವರೆಗೆ ಸಾಲ ನೀಡಲಾಗುವುದು. ರಾಷ್ಟ್ರೀಕೃತ ಬ್ಯಾಂಕ್ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಸಿಗಲಿದೆ. ಖಾಸಗಿ ಫೈನಾನ್ಸ್ ಹಾವಳಿ ನಿಲ್ಲಬೇಕು. ಬ್ಯಾಂಕ್ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಮುಂದಿನ ಬಾರಿಯೂ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಯಾವುದೇ ಸರ್ಕಾರ ಬಂದರೂ ಬ್ಯಾಂಕ್ ಮುಚ್ಚಲು ಸಾಧ್ಯವಿಲ್ಲ. ಈ ಮೂರು ಯೋಜನೆಗಳು ಇಡೀ ದೇಶಕ್ಕೆ ಮಾದರಿ ಆಗುವುದರಲ್ಲಿ ಅನುಮಾನ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ‌

ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್.ಮುನಿಯಪ್ಪ, ಜಿಲ್ಲಾಧಿಕಾರಿ ಬಸವರಾಜು, ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ಎನ್.ಅನುರಾಧ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page