ಬೆಂಗಳೂರು: ಅದೆಷ್ಟೋ ಕಠಿಣ ಸವಾಲುಗಳನ್ನು ಎದುರಿಸಿ ನಾವು ಜೆಡಿಎಸ್ ಪಕ್ಷವನ್ನು ಕಟ್ಟಿದ್ದೇವೆ. ಮುಂದೆಯೂ ಇಂತಹ ಸವಾಲುಗಳನ್ನು ಮೆಟ್ಟಿನಿಂತು ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತೇವೆ. ಯಾರಿಗೂ ಯಾವ ರೀತಿಯ ಅನುಮಾನ ಬೇಕಿಲ್ಲ ಎಂದು ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ಹೇಳಿದರು.
ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ನಮ್ಮ ಪಕ್ಷವನ್ನು ಬಹಳಷ್ಟು ನಾಯಕರು ಬಿಟ್ಟು ಹೋಗಿದ್ದಾರೆ. ಈಗಿನ ಕರ್ನಾಟಕದ ಮುಖ್ಯಮಂತ್ರಿ ಸೇರಿ. ನಮ್ಮ ಪಕ್ಷದಿಂದಲೇ ರಾಜಕೀಯ ಬದುಕು ಕಂಡುಕೊಂಡು ಸರ್ವ ರೀತಿಯಲ್ಲಿಯೂ ಶಕ್ತಿ ತುಂಬಿಕೊಂಡು ಬಿಟ್ಟು ಹೋದರು. ಆದರೂ ಬಹಳ ಸವಾಲಿನ ನಡುವೆ ಪಕ್ಷವನ್ನು ಕಟ್ಟಿ ಬೆಳೆಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.
ನಮ್ಮ ಪಕ್ಷದ ರಾಜ್ಯ ಮತ್ತು ರಾಜ್ಯ ಮಟ್ಟದಲ್ಲಿ ಹಲವಾರು ಸಲ ಇಬ್ಭಾಗವಾಗಿದೆ. ನಮ್ಮ ಪಕ್ಷಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗಟ್ಟಿ ನೆಲೆ ಇದೆ. ಬಲಿಷ್ಠವಾಗಿ ಕಟ್ಟಬಹುದು. ಯಾವುದೇ ಅಂಜಿಕೆ ಇಲ್ಲದೆ ನಾವು ಪಕ್ಷವನ್ನು ಕಟ್ಟುತ್ತಾ ಹೋಗುತ್ತೇವೆ ಎಂದು ಅವರು ಶಪಥ ಮಾಡಿದರು.
ನಾವು ಕೆಲವು ವರ್ಷಗಳಿಂದ ವಿವಿಧ ಪಕ್ಷಗಳ ಜತೆ ಅಧಿಕಾರ ಹಂಚಿಕೊಂಡಿದ್ದೇವೆ. ಕುಮಾರಸ್ವಾಮಿ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಜತೆ ಸೇರಿ ಕರ್ನಾಟಕದಲ್ಲಿ ಅಧಿಕಾರ ನಡೆಸಿದ್ದಾರೆ. ಅವರು ಎರಡು ಸಲ ಮುಖ್ಯಮಂತ್ರಿ ಆಗಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಅವರು ಸಾಲಮನ್ನಾ ಸೇರಿದಂತೆ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದಾರೆ.
ಕುಮಾರಸ್ವಾಮಿ ಅವರಿಗೆ ಆಡಳಿತದಲ್ಲಿ ಅಗಾಧವಾದ ಅನುಭವ ಇದೆ. ಈಗ ನರೇಂದ್ರ ಮೋದಿ ಅವರ ಕೇಂದ್ರ ಸರಕಾರದಲ್ಲಿ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
