ಬೆಂಗಳೂರು: ಕರ್ನಾಟಕ ಹಾಗೂ ಇಂಗ್ಲೆಂಡ್ ನಡುವೆ ತಂತ್ರಜ್ಞಾನ ಬಾಂಧವ್ಯ ಬಲಪಡಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಬೆಂಗಳೂರಿನಲ್ಲಿ ಬ್ರಿಟನ್ (ಯುಕೆ) ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ಗವರ್ನಮೆಂಟ್ ಸಚಿವ ಕನಿಷ್ಕ ನಾರಾಯಣ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಉಭಯ ಸಚಿವರು ಕೃತಕ ಬುದ್ಧಿಮತ್ತೆ (ಎಐ), ಆನ್‌ಲೈನ್ ಸುರಕ್ಷತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಡೇಟಾ ಆಡಳಿತ, ಕೌಶಲ, ನವೋದ್ಯಮಗಳ ಸಬಲೀಕರಣ ಮತ್ತು ಸಾಗರದಾಚೆಗಿನ ನಾವೀನ್ಯತೆ ಪಾಲುದಾರಿಕೆಗಳ ಕುರಿತು ಚರ್ಚೆ ನಡೆಸಿದರು.
ಬೆಂಗಳೂರು ಭಾರತದ ತಂತ್ರಜ್ಞಾನ ಕ್ಷೇತ್ರದ ಸ್ಪಂದಿಸುವ ಹೃದಯವಾಗಿರುವುದರಿಂದ ಕರ್ನಾಟಕದ ಜೊತೆಗಿನ ಪಾಲುದಾರಿಕೆ ಹೆಚ್ಚಿಸುವ ಸಾಧ್ಯತೆಗಳನ್ನು ಚರ್ಚಿಸಲು ನಾನು ಇಲ್ಲಿಗೆ ಬಂದಿರುವೆ. ಯುವಜನರ ಹಿತ ರಕ್ಷಿಸಲು ಮತ್ತು ಕೃತಕ ಬುದ್ದಿಮತ್ತೆಯು ಒಟ್ಟಾರೆಯಾಗಿ ಸಮಾಜಕ್ಕೆ ಪ್ರಯೋಜನ ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಆನ್‌ಲೈನ್ ಸುರಕ್ಷತಾ ಕ್ರಮಗಳ ಕುರಿತು ನಾವು ಸಮಾಲೋಚನೆ ನಡೆಸಿದ್ದೇವೆ. ಕರ್ನಾಟಕದ ಜೊತೆಗಿನ ಗಾಢವಾದ ಸಹಯೋಗವು ಜಾಗತಿಕವಾಗಿ ಪ್ರಸ್ತುತವಾದ, ವಿಶ್ವಾಸಾರ್ಹ ಕೃತಕ ಬುದ್ಧಿ ಮತ್ತೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ ಎಂದು ಬ್ರಿಟನ್‌ನ ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ಗವರ್ನಮೆಂಟ್ ಸಚಿವ ಕನಿಷ್ಕ ನಾರಾಯಣ್ ಅವರು ಹೇಳಿದರು.
ಕೃತಕ ಜಾಣೆ ಮತ್ತು ಡೀಪ್ ಟೆಕ್ ನಾವೀನ್ಯತೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿ ಇರುವುದರ ವಿವರಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ನಾರಾಯಣ್ ಅವರ ಜೊತೆ ಹಂಚಿಕೊಂಡರು.
ಆಡಳಿತದ ದಕ್ಷತೆ ಸುಧಾರಿಸಲು, ನವೋದ್ಯಮ ಸಬಲೀಕರಣಗೊಳಿಸಲು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ನಾವೀನ್ಯತೆ ವ್ಯವಸ್ಥೆ ಅಭಿವೃದ್ಧಿಪಡಿಸಲು ಕೃತಕ ಜಾಣ್ಮೆ ಮತ್ತು ಡೀಪ್ ತಂತ್ರಜ್ಞಾನಗಳನ್ನು ಬಳಸಲು ರಾಜ್ಯ ಸರ್ಕಾರವು ಆದ್ಯತೆ ನೀಡುತ್ತಿರುವುದನ್ನು ಪ್ರಸ್ತಾಪಿಸಿದರು.
ಕರ್ನಾಟಕವು ತನ್ನ ತಂತ್ರಜ್ಞಾನ ನಾಯಕತ್ವದ ಮುಂದಿನ ಹಂತವನ್ನು ಡೀಪ್‌ಟೆಕ್, ಅನ್ವಯಿಕ ಸಂಶೋಧನೆ ಮತ್ತು ಭವಿಷ್ಯಕ್ಕೆ ಸಿದ್ಧವಾದ ನಾವೀನ್ಯತೆಯ ಸುತ್ತ ನಿರ್ಮಿಸುತ್ತಿದೆ. ಕಲಿಕೆ ವೇಗಗೊಳಿಸುವ ಆಡಳಿತ ಬಲಪಡಿಸುವ ಮತ್ತು ನವೋದ್ಯಮಗಳನ್ನು ಸಬಲೀಕರಣಗೊಳಿಸುವ ನಾವೀನ್ಯತೆ ಆಧಾರಿತ ಅರ್ಥ ವ್ಯವಸ್ಥೆ ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರ್ಕಾರದ ಪ್ರಮುಖ ಅಂತರರಾಷ್ಟ್ರೀಯ ಸಂಪರ್ಕ ಕಾರ್ಯಕ್ರಮವಾಗಿರುವ ಜಾಗತಿಕ ನಾವೀನ್ಯತೆ ಮೈತ್ರಿಕೂಟದ (ಜಿಐಎ) ಮೂಲಕ ರಾಜ್ಯ ಸರ್ಕಾರವು ಜಾಗತಿಕ ತಂತ್ರಜ್ಞಾನ ಸಹಯೋಗಕ್ಕೆ ಈಗಾಗಲೇ ಗಟ್ಟಿ ಅಡಿಪಾಯ ಹಾಕಿದೆ. ನಾವೀನ್ಯತೆ, ಸಂಶೋಧನೆ ಹಾಗೂ ಅಭಿವೃದ್ಧಿ ಮತ್ತು ಉದ್ಯಮಶೀಲತೆಯಲ್ಲಿ ಜಾಗತಿಕ ಸಹಯೋಗ ಬಲಪಡಿಸುವುದರತ್ತ ‘ಜಿಐಎ’ ಗಮನಹರಿಸುತ್ತಿದೆ. 30ಕ್ಕೂ ಹೆಚ್ಚು ದೇಶಗಳಲ್ಲಿ 60ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಾಲುದಾರಿಕೆ ಮತ್ತು ಒಪ್ಪಂದಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಕರ್ನಾಟಕದ ನಾವೀನ್ಯತೆ ರಾಜತಾಂತ್ರಿಕತೆಗೆ
ಕಾರ್ಯತಂತ್ರದ ವೇದಿಕೆಯಾಗಿ ‘ಜಿಐಎ’ ಹೊರಹೊಮ್ಮಿದೆ ಎಂದರು.
ಕರ್ನಾಟಕ ಯುಕೆ ನಾವೀನ್ಯತೆ ಸೇತುವೆ:
ಕರ್ನಾಟಕ ಮತ್ತು ಬ್ರಿಟನ್ ನಡುವಣ ಖರ್ಗೆ ಅವರು ಈ ಭೇಟಿ ಸಂದರ್ಭದಲ್ಲಿ ಸಾಂಸ್ಥಿಕ ಸಹಯೋಗ ಹೆಚ್ಚಿಸಲು ಕರ್ನಾಟಕ-ಯುಕೆ ನಾವೀನ್ಯತೆ ಸೇತುವೆ ರಚಿಸುವುದನ್ನು ಪ್ರಸ್ತಾಪಿಸಿದರು.
ಸಹಯೋಗದ ಪ್ರಸ್ತಾವಿತ ಕ್ಷೇತ್ರಗಳು:
ಕೃತಕ ಬುದ್ಧಿಮತ್ತೆ ವಲಯದ ಶ್ರೇಷ್ಠತಾ ಕೇಂದ್ರಗಳ ಮಧ್ಯೆ ಸಹಯೋಗ
ನವೋದ್ಯಮಗಳ ವಾರ್ಷಿಕ ವಿನಿಮಯ ಕಾರ್ಯಕ್ರಮ
ನವೋದ್ಯಮಗಳಿಗೆ ಮಾರುಕಟ್ಟೆ ಪ್ರವೇಶಕ್ಕೆ ನೆರವು ಕಲ್ಪಿಸುವುದು ಪ್ರಮುಖವಾಗಿವೆ.
