ಕೊಪ್ಪಳ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಹೆಣ್ಣುಮಕ್ಕಳು ಸ್ವಾಭಿಮಾನದಿಂದ ಬದುಕು ಸಾಗಿಸಲು ಸಾಧ್ಯವಾಗಿದ್ದು, ಅವರ ಜೀವನದ ಗುಣಮಟ್ಟ ಸುಧಾರಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶಿವರಾಜ್.ಎಸ್.ತಂಗಡಗಿ ಅವರು ಅಭಿಪ್ರಾಯಪಟ್ಟರು.
ನಗರದ ಮಧುಶ್ರೀ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಗ್ಯಾರಂಟಿ ಕಾರ್ಯಾಗಾರ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಪ್ರತಿಯೊಂದು ಮನೆಯಲ್ಲೂ ನೆಮ್ಮದಿ ವಾತಾವರಣ ನಿರ್ಮಾಣವಾಗಿದ್ದರೆ, ಅದು ಗ್ಯಾರಂಟಿ ಯೋಜನೆಯಿಂದ ಮಾತ್ರ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ನಮ್ಮ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಯಿಂದ ಬಿಜೆಪಿಯವರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಯೋಜನೆ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಅವರಿಗೆ ಭವಿಷ್ಯವಿಲ್ಲ ಎಂದು ಗೊತ್ತು. ಹೀಗಾಗಿ ಗ್ಯಾರಂಟಿ ಯೋಜನೆಯಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಇಲ್ಲ- ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ತಾವು ಪಡೆಯುತ್ತಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ನಿಮ್ಮ ಮನೆ ಬಾಗಿಲಿಗೆ ಬರುವ ಬಿಜೆಪಿಗರಿಗೆ, ನೀವು ಮೂರೂವರೆ ವರ್ಷ ಅಧಿಕಾರದಲ್ಲಿದ್ರಿ. ಯಾವ ಯೋಜನೆಯನ್ನು ಕೊಟ್ಟಿದ್ದೀರ ಎಂದು ಪ್ರಶ್ನೆ ಮಾಡಬೇಕು ಎಂದು ಕರೆಕೊಟ್ಟರು.
ಬಿಜೆಪಿಗೆ ವೋಟ್ ನೀಡಿದ ಮಹಿಳೆಯರಿಗೂ ಗ್ಯಾರಂಟಿ:
ನಮಗೆ ರಾಜ್ಯದ ಹೆಣ್ಣು ಮಕ್ಕಳ ಮೇಲೆ ನಂಬಿಕೆ ಮತ್ತು ವಿಶ್ವಾಸ ಹೆಚ್ಚಿದೆ. ನಾವು ಕಾಂಗ್ರೆಸ್ ಗೆ ಮತ ನೀಡಿದವರಿಗೆ ಮಾತ್ರ ಗ್ಯಾರಂಟಿ ಯೋಜನೆ ಕೊಟ್ಟಿದ್ದೆವೆಯೇ? ಬಿಜೆಪಿಗೆ ಮತ ಹಾಕಿದವರಿಗೂ ಗ್ಯಾರಂಟಿ ಯೋಜನೆ ತಲುಪಿದೆಯಲ್ಲ. ಈ ಬಗ್ಗೆ ನೀವು ಕೂಡ ನಿಮ್ಮ ನೆರೆ ಹೊರೆಯವರಿಗೆ ಜಾಗೃತಿ ಮೂಡಿಸಬೇಕು ಎಂದರು.
ಬಿಜೆಪಿಗರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ, ಬ್ಯಾಂಕ್ ನಲ್ಲಿ ಶೂನ್ಯ ಖಾತೆ ತೆಗೆಯಿರಿ, ಪ್ರತಿ ಮಹಿಳೆಯರ ಖಾತೆಗೆ ತಲಾ ಹದಿನೈದು ಲಕ್ಷ ಹಣ ಹಾಕುತ್ತೇವೆ ಎಂದು ಭರವಸೆ ನೀಡಿದ್ದರು. ಮಹಿಳೆಯರು ಮುಗಿಬಿದ್ದು, ಖಾತೆ ತೆರೆದರು. ಆದರೆ ಕೇಂದ್ರ ಸರ್ಕಾರದಿಂದ ಮಹಿಳೆಯರ ಖಾತೆಗೆ ಹಣ ಬರಲಿಲ್ಲ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಹಿಳೆಯರ ಖಾತೆಗೆ ಹಣ ಹಾಕುವ ಕೆಲಸ ಮಾಡುತ್ತಿದೆ ಎಂದರು.
ಗ್ಯಾರಂಟಿ ಯೋಜನೆಯಿಂದ ಮಹಿಳೆಯರ ಜೀವನ ಗುಣಮಟ್ಟ ಸುಧಾರಣೆ ಮಾಡಿದೆ. ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಗ್ಯಾರಂಟಿ ಯೋಜನೆಗೆ ಕುತ್ತು ಬರಲಿದೆ. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಿಮ್ಮ ಖಾತೆಗೆ ಹಣ ಬರುವುದು ಮುಂದುವರೆಯಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ್ದು ಎಲ್ಲವೂ ಹಣ ವ್ಯಯಿಸದ ಯೋಜನೆಗಳಾಗಿವೆ. ಸ್ವಚ್ಛ ಭಾರತ ಯೋಜನೆ, ಪೊರಕೆಯೂ ನಮ್ಮದೆ, ಕಸವೂ ನಮ್ಮದೆ, ಕಸ ಬಳಿಯುವವರು ಕೂಡ ನಾವೇ. ಯೋಜನೆ ಮಾತ್ರ ಕೇಂದ್ರದ್ದು. ಇನ್ನು ಬೇಟಿ ಬಚಾವೋ-ಬೇಟಿ ಪಡಾವೋ ಯೋಜನೆ ಬಗ್ಗೆ ಪ್ರತಿಕ್ರಿಯಿಸಿ, ಮಕ್ಕಳು ನಮ್ಮದ್ದು, ಯೋಜನೆ ಮಾತ್ರ ಅವರದ್ದು ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರಿಗೆ ಬಡವರು ನೆಮ್ಮದಿಯಾಗಿ ಬದುಕುವುದು ಇಷ್ಟವಿಲ್ಲ. ಹೀಗಾಗಿ ಯುಪಿಎ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯ ಯೋಜನೆಯ ಹೆಸರು ಬದಲಾಯಿಸಿ, ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಅವರು ಯೋಜನೆಗಳನ್ನು ನೀಡುವುದು ಕೇವಲ ಉಳ್ಳವರಿಗೆ ಮಾತ್ರ. ಅವರ ಕಣ್ಣಿಗೆ ಕಾಣುವುದು ಕೇವಲ ಅಂಬಾನಿ, ಅದಾನಿ ಮಾತ್ರ ಎಂದು ಛೇಡಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಮೆಹರೋಜ್ ಖಾನ್, ಸಂಸದ ರಾಜಶೇಖರ್ ಹಿಟ್ನಾಳ್, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ಉಪಾಧ್ಯಕ್ಷ
ಮಹರೋಜ್ ಖಾನ್, ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಸಿಇಓ ವರ್ಣಿತ್ ನೇಗಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
