ಬೆಂಗಳೂರು: ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಫ್ರಾನ್ಸ್ ಜೊತೆಗಿನ ಸಹಕಾರ ಬಲಪಡಿಸಲು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಬೆಂಗಳೂರಿನಲ್ಲಿ ಫ್ರಾನ್ಸ್‌ನ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ವ್ಯವಹಾರ ಸಚಿವೆ ಆ್ಯನ್ ಲಿ ಹೆನಾಫ್ ಅವರನ್ನು ಭೇಟಿಯಾಗಿ ಚರ್ಚಿಸಿದರು.
ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್. ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕ ರಾಹುಲ್ ಶರಣಪ್ಪ ಸಂಕನೂರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಾವೀನ್ಯತೆ, ಕೌಶಲ, ಕೃತಕ ಬುದ್ಧಿಮತ್ತೆ (ಎಐ), ವೈಮಾಂತರಿಕ್ಷ ಮತ್ತು ರಕ್ಷಣಾ ಉತ್ಪಾದನೆ, ನವೋದ್ಯಮ ಮತ್ತು ಡಿಜಿಟಲ್ ಆಡಳಿತದಲ್ಲಿ ಪರಸ್ಪರ ಸಹಯೋಗ ವಿಸ್ತರಿಸುವ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.
ಫ್ರಾನ್ಸ್‌ನಲ್ಲಿ ಕುಶಲ ಎಂಜಿನಿಯರ್‌ಗಳು ಮತ್ತು ತಂತ್ರಜ್ಞಾನ ವೃತ್ತಿಪರರ ಹೆಚ್ಚುತ್ತಿರುವ ಅಗತ್ಯದ ವಿವರಗಳನ್ನು ಹಂಚಿಕೊಂಡ ಫ್ರಾನ್ಸ್ ನಿಯೋಗವು, ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳಲ್ಲಿ ಕರ್ನಾಟಕದ ಜೊತೆಗೆ ಕೆಲಸ ಮಾಡಲು ತೀವ್ರ ಆಸಕ್ತಿ ವ್ಯಕ್ತಪಡಿಸಿತು.
ಭಾರತದಲ್ಲಿ ಸೇವೆ ಹಾಗೂ ವಹಿವಾಟು ವಿಸ್ತರಿಸಲು ಉದ್ದೇಶಿಸಿರುವ ಫ್ರಾನ್ಸ್ ಕಂಪನಿಗಳಿಗೆ ಬೆಂಗಳೂರು ಮಹಾದ್ವಾರ ಆಗಲಿದೆ. ಪ್ಯಾರಿಸ್ ಕೂಡ ನಮ್ಮ ನವೋದ್ಯಮಗಳ ಪಾಲಿಗೆ ಫ್ರಾನ್ಸ್ ಮತ್ತು ಯುರೋಪ ಒಕ್ಕೂಟದ ಮಾರುಕಟ್ಟೆ ಪ್ರವೇಶಿಸಲು ಮಹಾದ್ವಾರ ಆಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಫ್ರಾನ್ಸ್ ಸರ್ಕಾರದ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ವ್ಯವಹಾರಗಳ ಸಚಿವೆ ಆ್ಯನ್ ಲಿ ಹೆನಾಫ್ ಅವರು ಮಾತನಾಡಿ, ಡಿಜಿಟಲ್ ಜಗತ್ತಿನಲ್ಲಿ ಮಕ್ಕಳ ರಕ್ಷಣೆಗೆ ಆದ್ಯತೆ ನೀಡುವುದು ಹಾಗೂ ಸುರಕ್ಷತೆ ಬಲಪಡಿಸುವುದು ಸದ್ಯದ ತುರ್ತು ಅಗತ್ಯವಾಗಿದೆ. ತಂತ್ರಜ್ಞಾನವು ಸಮಾಜಕ್ಕೆ ಪ್ರಯೋಜನ ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವೀನ್ಯತೆ, ನಿಯಂತ್ರಣ ಮತ್ತು ಸಾರ್ವಜನಿಕ ನೀತಿ ಸಂಯೋಜಿಸುವ ಮೂಲಕ ಜವಾಬ್ದಾರಿಯುತ, ವಿಶ್ವಾಸಾರ್ಹ ಮತ್ತು ಕೃತಕ ಜಾಣ್ಮೆ ಕ್ಷೇತ್ರಗಳಲ್ಲಿ ನಾವು ಕರ್ನಾಟಕದ ಜೊತೆ ಸಹಯೋಗದಿಂದ ಕೆಲಸ ಮಾಡುವ ಅವಕಾಶಗಳನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.
