ಸಮಗ್ರ ಸುದ್ದಿ

ಕೆ.ಆರ್. ಮಾರುಕಟ್ಟೆಯಲ್ಲಿ “ಅತ್ಯಾಧುನಿಕ ಪಾರ್ಕಿಂಗ್ ತಂತ್ರಜ್ಞಾನ” ವ್ಯವಸ್ಥೆ : ಮಹೇಶ್ವರ್ ರಾವ್

Share

ಬೆಂಗಳೂರು: ಕೆ.ಆರ್. ಮಾರುಕಟ್ಟೆಯಲ್ಲಿ “ಅತ್ಯಾಧುನಿಕ ಪಾರ್ಕಿಂಗ್ ತಂತ್ರಜ್ಞಾನ” ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ಬಾಕಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಕೆ.ಆರ್. ಮಾರುಕಟ್ಟೆಗೆ ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಕೆ.ಆರ್. ಮಾರುಕಟ್ಟೆಯ ತಳಮಹಡಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಶೇ. 90 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಸಾರ್ವಜನಿಕರ ಉಪಯೋಗಕ್ಕೆ ಒದಗಿಸಲು ಸೂಚಿಸಿದರು.

ಕೆ.ಆರ್. ಮಾರುಕಟ್ಟೆ ಮುಂಭಾಗದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ನಿರಂತರವಾಗಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಿಳಿಸಿದ ಅವರು, ಮೊದಲನೇ ಮಹಡಿಯಲ್ಲಿ ಇರುವ ಶೌಚಾಲಯ ಬಳಕೆಯಲ್ಲಿಲ್ಲದಿರುವುದನ್ನು ಗಮನಿಸಿ, ದುರಸ್ತಿ ಕಾರ್ಯ ಕೈಗೊಂಡು ನಾಗರಿಕರು ಬಳಸುವಂತೆ ಮಾಡಬೇಕೆಂದು ಸೂಚಿಸಿದರು.

ತಳಮಹಡಿಯಲ್ಲಿ ಮಳೆನೀರು ನಿಲ್ಲುವುದನ್ನು ತಪ್ಪಿಸುವ ಸಲುವಾಗಿ ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಅದಲ್ಲದೆ, ವಿದ್ಯುತ್ ಸಂಪರ್ಕ, ಅಗ್ನಿಶಾಮಕ ಸುರಕ್ಷತಾ ಕ್ರಮಗಳು ಸೇರಿದಂತೆ ಇತರೆ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅತ್ಯಾಧುನಿಕ ಪಾರ್ಕಿಂಗ್ ವ್ಯವಸ್ಥೆ:

ನಗರದಲ್ಲಿರುವ ಪ್ರಸಿದ್ಧ ಕೆ.ಆರ್. ಮಾರುಕಟ್ಟೆಗೆ ಪ್ರತಿದಿನ ಸಹಸ್ರಾರು ಗ್ರಾಹಕರು ಭೇಟಿ ನೀಡುತ್ತಾರೆ. ಗ್ರಾಹಕರು ಹಾಗೂ ವ್ಯಾಪಾರಸ್ಥರಿಗೆ ಸುವ್ಯವಸ್ಥಿತ ಪಾರ್ಕಿಂಗ್ ಸ್ಥಳ ಕಲ್ಪಿಸುವ ಉದ್ದೇಶದಿಂದ ರೈಟ್ ಪಾರ್ಕಿಂಗ್ ಸಂಸ್ಥೆ ವತಿಯಿಂದ ತಳಮಹಡಿಯಲ್ಲಿ ನವೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ. ಇಲ್ಲಿ 400 ದ್ವಿಚಕ್ರ ವಾಹನಗಳು ಹಾಗೂ 200 ಕಾರುಗಳು ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ.

ಪಾರ್ಕಿಂಗ್ ಸ್ಥಳದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 67 ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಎಷ್ಟು ವಾಹನಗಳು ಪ್ರವೇಶಿಸುತ್ತವೆ ಹಾಗೂ ನಿರ್ಗಮಿಸುತ್ತವೆ ಎಂಬ ಸಂಪೂರ್ಣ ಮಾಹಿತಿ ದಾಖಲೆಯಾಗಲಿದೆ. ಇದಲ್ಲದೆ, ಸುರಕ್ಷತಾ ದೃಷ್ಟಿಯಿಂದ 12 ಅಲಾರಂ ವ್ಯವಸ್ಥೆಗಳು ಕೂಡ ಕಲ್ಪಿಸಲಾಗುತ್ತಿದೆ.

ಪ್ರತಿವಾರ ಸಮನ್ವಯ ಸಭೆ ನಡೆಸಿ: ರಾಜೇಂದ್ರ ಚೋಳನ್:

ಕೆ. ಆರ್. ಮಾರುಕಟ್ಟೆ ತ್ವರಿತವಾಗಿ ಆಗಿಂದಾಗ್ಗೆ ಸ್ವಚ್ಛತೆ, ಕೈಗೊಳ್ಳಬೇಕಾದ ಕಾಮಗಾರಿ, ಮಳಿಗೆಗಳಿಂದ ಕಂದಾಯ ವಸೂಲಾತಿ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಸುರಕ್ಷತೆ ದೃಷ್ಟಿಯಿಂದ ಇಂಜಿನಿಯರಿಂಗ್, ಪೊಲೀಸ್, ಕಂದಾಯ ವಿಭಾಗಗಳ ಅಧಿಕಾರಿಗಳು ಪ್ರತಿ ವಾರ ಸಮನ್ವಯ ಸಭೆ ನಡೆಸಿ ಕೆ. ಆರ್. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲಕರ ವಾತಾವರಣ ನಿರ್ಮಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಬೆಂ.ಘ.ತ್ಯಾ.ನಿ. ನಿಯಮಿತದ ಸಿಇಓ ಕರೀಗೌಡ, ಕೇಂದ್ರ ನಗರ ಪಾಲಿಕೆ ಆಯುಕ್ತರಾದ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್, ಜಂಟಿ ಆಯುಕ್ತರಾದ ಹೇಮಂತ್ ಶರಣ್, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್, ಡಿಜಿಎಂ, ಅಧೀಕ್ಷಕ ಅಭಿಯಂತರರು ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page