ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಕಾದಂಬರಿ ಆಧಾರಿತ ಸಿನಿಮಾಗಳ ಸಂಖ್ಯೆ ತುಂಬಾ ಕಡಿಮೆಯಾಗಿವೆ. ಜನಪ್ರಿಯ ಕಾದಂಬರಿಗಳನ್ನು ತೆರೆಮೇಲೆ ತರುವ ಸಾಹಸಕ್ಕೆ ಯಾರೂ ಕೈ ಹಾಕುತ್ತಿಲ್ಲ. ಆದರೀಗ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸುಪ್ರಸಿದ್ಧ ಜುಗಾರಿ ಕ್ರಾಸ್ ತೆರೆಮೇಲೆ ಬರುತ್ತಿದೆ. ಜುಗಾರಿ ಕ್ರಾಸ್ ಕಾದಂಬರಿಗೆ ಸಿನಿಮಾ ರೂಪ ಕೊಡುವ ಸಾಹಸಕ್ಕೆ ಕೈ ಹಾಕಿದ್ದಾರೆ ನಿರ್ದೇಶಕ ಗುರುದತ್ ಗಾಣಿಗ.
ಈಗಾಗಲೇ ಕರಾವಳಿ ಸಿನಿಮಾ ಮೂಲಕ ಭಾರಿ ಸದ್ದು ಮಾಡುತ್ತಿರುವ ನಿರ್ದೇಶಕ ಗುರುದತ್ ಇದೀಗ ಜುಗಾರಿ ಕ್ರಾಸ್ ದೊಡ್ಡ ಪರದೆ ಮೇಲೆ ತರುವ ಸಾಹಸಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಜುಗಾರಿ ಕ್ರಾಸ್ ಸಿನಿಮಾ ಮಾಡುವುದಾಗಿ ಗುರುದತ್ ಅನೌನ್ಸ್ ಮಾಡಿದ್ದರು. ಇದೀಗ ಟೀಸರ್ ರಿಲೀಸ್ ಆಗಿದೆ. ಜುಗಾರಿ ಕ್ರಾಸ್ ಸಿನಿಮಾ ಅನೌನ್ಸ್ ಮಾಡಿದಾಗಿನಿಂದ ಈ ಜನಪ್ರಿಯ ಕಾದಂಬರಿಗೆ ಹೀರೋ ಯಾರು ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಆದರೀಗ ಟೀಸರ್ ಜೊತೆಗೆ ಹೀರೋ ಯಾರು ಎನ್ನುವ ಕುತೂಹಲಕ್ಕೂ ತೆರೆಬಿದ್ದಿದೆ. ಜುಗಾರಿ ಕ್ರಾಸ್‌ಗೆ ನಾಯಕನಾಗಿ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ ರಿಲೀಸ್ ಆಗಿರುವ ಟೀಸರ್ನಲ್ಲಿ ತಲೆಬುರಡೆ, ಹರಿಯುತ್ತಿರುವ ರಕ್ತ, ಕೆಂಪು ರತ್ನ ಜೊತೆಗೆ ಕುತೂಹಲ ಮತ್ತಷ್ಟು ದುಪ್ಪಟ್ಟು ಮಾಡುವಂತೆ ಇರುವ ಬ್ಯಾಗ್ರೌಂಡ್ ಮ್ಯೂಸಿಕ್.. ಪವರ್ ಪ್ಯಾಕ್ಡ್ ಟೀಸರ್ ನೋಡುತ್ತಿದ್ದರೆ ಸಿನಿಮಾ ಮೇಲಿನ ನಿರೀಕ್ಷೆ ಮತ್ತು ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದೆ.
ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿರುವ ಕರಾವಳಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಿರ್ದೇಶಕ ಗುರುದತ್ ಮತ್ತು ರಾಜ್ ಬಿ. ಶೆಟ್ಟಿ ಇದೀಗ ಜುಗಾರಿ ಕ್ರಾಸ್ ಮೂಲಕ ಮತ್ತೆ ಕೈಜೋಡಿಸಿರುವುದು ಕುತೂಹಲ ಹೆಚ್ಚಿಸಿದೆ. ಕರಾವಳಿ ಸಿನಿಮಾ ರಿಲೀಸ್‌ಗೂ ಮೊದಲೇ ರಾಜ್ ಬಿ. ಶೆಟ್ಟಿ ಮತ್ತು ನಿರ್ದೇಶಕ ಗುರುದತ್ ಜುಗಾರಿ ಕ್ರಾಸ್ನಲ್ಲಿ ಬ್ಯುಸಿಯಾಗಿದ್ದಾರೆ.
ಪಾತ್ರಗಳ ಆಯ್ಕೆಯಲ್ಲಿ ರಾಜ್ ಬಿ. ಶೆಟ್ಟಿ ಯಾವಾಗಲೂ ಚ್ಯೂಸಿ. ವಿಭಿನ್ನ, ವಿನೂತನ ಪಾತ್ರಗಳನ್ನು ಹುಡುಕುತ್ತಿರುತ್ತಾರೆ. ಸು ಫ್ರಂ ಸೋ ನಲ್ಲಿ ಗುರೂಜಿಯಾಗಿ ರಂಜಿಸಿದ್ದ ಶೆಟ್ರು ಕರಾವಳಿ ಸಿನಿಮಾದಲ್ಲಿ ಕೋಣಗಳ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಇದೀಗ ಜುಗಾರಿ ಕ್ರಾಸ್ ಅಂತ ಪವರ್ ಫುಲ್ ಕಾದಂಬರಿಗೆ ನಾಯಕನಾಗುತ್ತಿರುವುದು ವಿಶೇಷ.
ಕರಾವಳಿ ಸಿನಿಮಾದ ಕಾಂಬಿನೇಷನ್ ಮತ್ತೆ ಜುಗಾರಿ ಕ್ರಾಸ್‌ನಲ್ಲೂ ಮುಂದುವರೆದಿದೆ. ಅಂದರೆ ಗುರುದತ್ ಗಾಣಿಗ ಅವರ ಕೆಲಸ ಮತ್ತು ಅವರ ಟೀಂ ಮೇಲೆ ರಾಜ್ ಬಿ ಶೆಟ್ಟಿ ಇವರಿಗೆ ಇರುವ ನಂಬಿಕೆ ಮತ್ತು ಶ್ರದ್ಧೆ ಗೊತ್ತಾಗುತ್ತಿದೆ. ಸದ್ಯ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಕರಾವಳಿ ಸಿನಿಮಾದ ಶೂಟಿಂಗ್ ಸಂಪೂರ್ಣವಾಗಿ ಮುಗಿಸಿರುವ ಗುರುದತ್, ಆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಜೊತೆಗೆ ಜುಗಾರಿ ಕ್ರಾಸ್‌ನಲ್ಲೂ ತೊಡಗಿಕೊಳ್ಳಲಿದ್ದಾರೆ.
ಸಿನಿಮಾ ನಿರ್ದೇಶನದ ಜೊತೆಗೆ ಗುರುದತ್ತ ಗಾಣಿಗ ಫಿಲ್ಮಂಸ್ ಅಡಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕರಾವಳಿ ಸಿನಿಮಾದ ಸಿನಿಮಾಟೋಗ್ರಾಫರ್ ಅಭಿಮನ್ಯು ಸದಾನಂದನ್ ಈ ಸಿನಿಮಾಗೂ ಕೆಲಸ ಮಾಡುತ್ತಿದ್ದಾರೆ. ಇನ್ನು ಚಿತ್ರಕ್ಕೆ ಸಚಿನ್ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಉಳಿದಂತೆ ಯಾರೆಲ್ಲ ಇರಲಿದ್ದಾರೆ ಎನ್ನುವ ಮಾಹಿತಿ ಸದ್ಯದಲ್ಲೇ ರಿವೀಲ್ ಆಗಲಿದೆ.
