ಬೆಂಗಳೂರು:ಗ್ರಾಮೀಣ ಭಾಗದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ನಳಗಳ ಮುಖಾಂತರ ನೀಡಲಾಗುತ್ತಿರುವ ಕುಡಿಯುವ ನೀರನ್ನು ಆಗಾಗ ಪರೀಕ್ಷೆಗೆ ಒಳಪಡಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಸೂಚನೆ ನೀಡಿದರು.
ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಭಾರತ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಬರುವ ಜಲ ಜೀವನ ಮಿಷನ್ ಅನುಷ್ಠಾನ ಸಮಿತಿ ಸಭೆಯನ್ನು ನಡೆಸಿದ ಅವರು, ಯೋಜನೆಯಡಿ ನಲ್ಲಿಗಳನ್ನು ಅಳವಡಿಸಿದರೆ ಕೆಲಸ ಮುಗಿಯುವುದಿಲ್ಲ. ಅಳವಡಿಸಿರುವ ನಳಗಳಲ್ಲಿ ನೀರು ಬರುತ್ತಿದೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡುವ ಜೊತೆಗೆ ನೀರಿನ ಗುಣಮಟ್ಟವನ್ನು ಆಗಾಗ ಪರೀಕ್ಷೆ ಮಾಡಿಸಬೇಕೆಂದು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನೀರು ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯವರು ಇದುವರೆವಿಗೂ 26,591 ಹಳ್ಳಿಗಳ ಪೈಕಿ 24,558 ಹಳ್ಳಿಗಳಲ್ಲಿ ಒದಗಿಸಲಾಗುತ್ತಿರುವ ನೀರಿನ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸಾರ್ವಜನಿಕರಿಗೆ ತಾವು ಕುಡಿಯುತ್ತಿರುವ ನೀರಿನ ಸುರಕ್ಷತೆಯನ್ನು ಸ್ವತಃ ಅವರೇ ಖಾತ್ರಿ ಪಡಿಸಿಕೊಳ್ಳಬಹುದಾದ ವರದಿ ನೀಡುವ ಕ್ಯೂ ಆರ್ ಕೋಡ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ, ಹಾಗೂ ನೀರಿನ ಟ್ಯಾಂಕ್‍ಗಳನ್ನು ಜನರ ಸಮ್ಮುಖದಲ್ಲಿಯೇ ಸ್ವಚ್ಛ ಮಾಡಿಸಲಾಗುತ್ತದೆ ಎಂದು ಮುಖ್ಯ ಕಾರ್ಯದರ್ಶಿಯವರಿಗೆ ಮಾಹಿತಿ ನೀಡಿದರು.
ಕುಡಿಯುವ ನೀರಿನ ಪರೀಕ್ಷೆಯು ನೂರಕ್ಕೆ ನೂರಷ್ಟು ಆಗಲೇ ಬೇಕು. ಹಾಗೆಯೇ ಮುಂದೆ ಬೇಸಿಗೆ ಬರಲಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕೂಡ ಕ್ರಮವಹಿಸಬೇಕು ಎಂದು ಸೂಚಿಸಿದರು.ಕೇಂದ್ರ ಸರ್ಕಾರದ ಜಲ ಶಕ್ತಿ ಸಚಿವಾಲಯದ ಹಿರಿಯ ಅಧಿಕಾರಿಗಳಾದ ಅಂಕಿತ ಅವರು ಆನ್ ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿ, ಕೇಂದ್ರ ಸರ್ಕಾರದಿಂದ ಜಲ ಜೀವನ ಮಿಷನ್ ಅಡಿ ಆಗಿರುವ ಕ್ರಮಗಳ ಕುರಿತು ಮುಖ್ಯ ಕಾರ್ಯದರ್ಶಿ ಅವರಿಗೆ ಮಾಹಿತಿಯನ್ನು ನೀಡಿದರು.
ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನ ಗೊಳಿಸುತ್ತಿರುವುದರಿಂದ ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನವನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಿಸಬೇಕೆಂದು ಮುಖ್ಯ ಕಾರ್ಯದರ್ಶಿ ಅವರು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ತಿಳಿಸಿದರು.ನೀರು ಸರಬರಾಜು ವ್ಯವಸ್ಥೆಗಳನ್ನು ಮೌಲ್ಯಮಾಪನ ಮಾಡುವ ಸಲುವಾಗಿ ಪರಿಚಯಿಸಿಲಾಗಿರುವ ಜಲ ಸೇವಾ ಅಂಕಲನ್ ಅನ್ನು ರಾಜ್ಯದಲ್ಲಿ ಒಟ್ಟು 870 ಗ್ರಾಮ ಪಂಚಾಯಿತಿಗಳಲ್ಲಿ ಅಳವಡಿಸಲಾಗಿದ್ದು, ಅವುಗಳಲ್ಲಿ 855 ಗ್ರಾಮ ಪಂಚಾಯಿತಿಗಳಲ್ಲಿ ಮೌಲ್ಯಮಾಪನವನ್ನು ಪೂರ್ಣಗೊಳಿಸಲಾಗಿದ್ದು, ಉಳಿದ 15 ಗ್ರಾಮ ಪಂಚಾಯಿತಿಗಳಲ್ಲಿ ಪ್ರಗತಿಯಲ್ಲಿರುವುದಕ್ಕೆ ಮುಖ್ಯ ಕಾರ್ಯದರ್ಶಿ ಅವರು ಅಭಿನಂದಿಸಿದರು.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಸಮೀರ್ ಶುಕ್ಲಾ ಸೇರಿದಂತೆ ಮತ್ತಿತರ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
