ಬೆಂಗಳೂರು: ಈಜೀಪುರ ಮೇಲ್ಸೇತುವೆಯ ಸಂಪೂರ್ಣ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಜಿಬಿಎ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಇಂದು ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿ, ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಹೆಚ್ಚಿನ ಯಂತ್ರೋಪಕರಣಗಳು ಹಾಗೂ ಸಿಬ್ಬಂದಿಯನ್ನು ಬಳಸಿ ಎಲ್ಲಾ ಕಾರ್ಯಚಟುವಟಿಕೆಗಳನ್ನು ಸಮಾನಾಂತರವಾಗಿ ಏಕಕಾಲದಲ್ಲಿ ನಡೆಸಿ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಈಜೀಪುರ ಮೇಲ್ಸೇತುವೆಗೆ ಸೆಂಟ್ ಜಾನ್ಸ್ ಬಳಿ ಪಿಲ್ಲರ್ ಅಳವಡಿಸಲು ಇದ್ದ ತೊಡಕನ್ನು ಬಗೆಹರಿಸಿ ಪೈಲಿಂಗ್ ಕೆಲಸವನ್ನು ಪ್ರಾರಂಭವಾಗಿದ್ದು, 15 ದಿನಗಳೊಳಗೆ ಪೈಲಿಂಗ್ ಕಾರ್ಯವನ್ನು ಪೂರ್ಣಗೊಳಿಸಲು ಸೂಚಿಸಿದರು.
ಪೈಲಿಂಗ್ ಕಾಮಗಾರಿಯೊಂದಿಗೆ ಪೈಲ್ ಕ್ಯಾಪ್ ಹಾಗೂ ಪಿಲ್ಲರ್ ಗಳ ನಿರ್ಮಾಣ ಮಾಡುವಂತೆ ಮತ್ತು ಸೂಪರ್ ಸ್ಟ್ರಕ್ಚರ್ ಸೆಗ್ಮೆಂಟ್ ಕಾಸ್ಟಿಂಗ್ ಕೆಲಸಗಳನ್ನು ಸಮಾನಾಂತರವಾಗಿ ಕೈಗೊಂಡು, ತ್ವರಿತಗತಿಯಲ್ಲಿ ಕಾಸ್ಟಿಂಗ್ ಪೂರ್ಣಗೊಳಿಸಬೇಕು. ಕಾಮಗಾರಿಗೆ ವೇಗ ನೀಡುವ ಉದ್ದೇಶದಿಂದ ಎಲ್ಲಾ ರೀತಿಯ ಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡು ದಿನದ 24 ಗಂಟೆಗಳ ಕಾಲ ಕೆಲಸ ಮಾಡಿ ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.
ರ‍್ಯಾಂಪ್ ಕಾಮಗಾರಿ ಕೂಡಲೇ ಪೂರ್ಣಗೊಳಿಸಲು ಸೂಚನೆ:
ಮಡಿವಾಳ ಕಡೆಯ ಡೌನ್ ರ‍್ಯಾಂಪ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಈ ಸಂಬಂಧ ಸಂಚಾರಿ ಪೊಲೀಸ್ ವಿಭಾಗದಿಂದ ಒಂದು ಭಾಗದ ರಸ್ತೆಯಲ್ಲಿ ಸಂಚಾರ ನಿರ್ಬಂಧಕ್ಕೆ ಅನುಮತಿ ಪಡೆದು ಮಳೆನೀರು ಹರಿಯಲು ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಬೇಕು. ಜೊತೆಗೆ ಕೇಂದ್ರೀಯ ಸದನ ಹಾಗೂ ಆಸ್ಟ್ರೋ ಫಿಜಿಕ್ಸ್ ಜಾಗವನ್ನು ವಶಪಡಿಸಿಕೊಂಡು ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿ, ಈಜಿಪುರ ಸಿಗ್ನಲ್ ಹತ್ತಿರ ರ‍್ಯಾಂಪ್ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಸೂಚಿಸಿದರು.
ರಸ್ತೆ ಗುಂಡಿ ಮುಚ್ಚಲು ಸೂಚನೆ:
ಈಜೀಪುರ ಮೇಲ್ಸೇತುವೆ ಕಾಮಗಾರಿಯ ಗ್ರೇಡ್ ಮಟ್ಟದ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಗಮನಿಸಿ, ಕೂಡಲೆ ರಸ್ತೆ ಗುಂಡಿಗಳನ್ನು ಮುಚ್ಚುವುದು ಒಳಗೊಂಡಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ವೈಟ್ ಟಾಪಿಂಗ್ ಕಾಮಗಾರಿಗಳ ವೀಕ್ಷಣೆ:
ಸರ್ಜಾಪುರ ರಸ್ತೆ: ಸರ್ಜಾಪುರ ರಸ್ತೆಯಲ್ಲಿ 1.06 ಕಿ.ಮೀ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಒಂದು ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಈಗಾಗಲೇ ಅನುವು ಮಾಡಿಕೊಡಲಾಗಿದೆ. ಮತ್ತೊಂದು ಭಾಗದಲ್ಲಿ ಶೇ. 50 ರಷ್ಟು ಕಾಮಗಾರಿ ಮಾತ್ರ ಬಾಕಿಯಿದೆ. ಜೊತೆಗೆ ಪಾದಚಾರಿ ಮಾರ್ಗವನ್ನು ನಿಯಮಾನುಸಾರ ಕನಿಷ್ಠ 2.5 ಮೀಟರ್ ಅಗಲದಲ್ಲಿ ನಿರ್ಮಿಸಿ ಮಾರ್ಚ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕೋರಮಂಗಲ 80 ಅಡಿ ರಸ್ತೆ: ಕೋರಮಂಗಲ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ವೈಟ್ ಟಾಪಿಂಗ್ ಕಾರ್ಯದೊಂದಿಗೆ ಪಾದಚಾರಿ ಮಾರ್ಗ ಕಾಮಗಾರಿಯನ್ನೂ ಸಮಾನಾಂತರವಾಗಿ ಕೈಗೊಳ್ಳಲು ಸೂಚಿಸಿದರು. ಇದೇ ಸ್ಥಳದಲ್ಲಿ ರಸ್ತೆಬದಿ ಹಾಗೂ ರಾಜಕಾಲುವೆಯಲ್ಲಿ ತ್ಯಾಜ್ಯ ಬಿಸಾಡಿರುವುದನ್ನು ಗಮನಿಸಿ, ವಾರದೊಳಗೆ ಈ ಭಾಗದಲ್ಲಿ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ರಾತ್ರಿ ವೇಳೆ ಮಾರ್ಷಲ್‌ಗಳು ಗಸ್ತು ತಿರುಗಿ ಕಸ ಬಿಸಾಡುವವರ ಮೇಲೆ ದಂಡ ವಿಧಿಸಿ ಮತ್ತೆ ಕಸ ಹಾಕದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಅಲ್ಲದೇ, ಪಾದಚಾರಿ ಮಾರ್ಗಗಳಲ್ಲಿ ಪೇವರ್ ಬ್ಲಾಕ್ ಬದಲಾಗಿ ಬ್ರಶ್ಡ್ ಕಾಂಕ್ರೀಟ್/ಸ್ಟಾಂಪ್ಡ್ ಕಾಂಕ್ರೀಟ್ ಅಳವಡಿಸಲು ಕ್ರಮವಹಿಸುವಂತೆ ಸೂಚಿಸಿದರು.
ಪಾಮ್ ಗ್ರೋವ್ ರಸ್ತೆ: 700 ಮೀಟರ್ ರಸ್ತೆ ಪೈಕಿ ಒಂದು ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೊಂದು ಭಾಗದಲ್ಲಿ 300 ಮೀಟರ್ ಕಾಮಗಾರಿ ಬಾಕಿಯಿದೆ. ಪಾದಚಾರಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದ್ದು, ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚಿಸಿದರು.
ಸುಲ್ತಾನ್ ಪೇಟೆ ರಸ್ತೆ: 1.15 ಕಿ.ಮೀ ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮಾರ್ಚ್ 15ರಿಂದ ಕಾಮಗಾರಿ ಪ್ರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಜಲಮಂಡಳಿಯ ಪೈಪ್‌ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಿದರು.
ಸಿರ್ಸಿ ರಸ್ತೆ: 540 ಮೀಟರ್ ವೈಟ್ ಟಾಪಿಂಗ್ ಕಾಮಗಾರಿಯಲ್ಲಿ 240 ಮೀಟರ್ ಪೂರ್ಣಗೊಂಡಿದ್ದು, ಬಾಕಿ ಇರುವ 300 ಮೀಟರ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿ, ಕಾಮಗಾರಿಯ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕೆಲಸಗಾರಿಕೆಯಲ್ಲಿ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಲು ಸೂಚಿಸಿದರು.
ಪರಿಶೀಲನೆ ಸಂದರ್ಭದಲ್ಲಿ ನಗರ ಪಾಲಿಕೆ ಆಯುಕ್ತರಾದ ರಮೇಶ್ ಕೆ.ಎನ್., ಮುಖ್ಯ ಅಭಿಯಂತರರಾದ ರವಿ, ಡಾ. ರಾಘವೇಂದ್ರ ಪ್ರಸಾದ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
