ಕಾರವಾರ: ಮುಂದಿನ ಆಯವ್ಯಯದಲ್ಲಿ ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ ಜನರಿಗೆ ಭರವಸೆ ನೀಡಿದರು.
ಅವರು ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಾರವಾರ ಲೋಕೋಪಯೋಗಿ ಇಲಾಖೆ ಆಯೋಜಿಸಲಾಗಿದ್ದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸುವ ಉದ್ದೇಶದಿಂದ ನಮ್ಮ ಸರ್ಕಾರ 2016 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಲಾಗಿದ್ದು, ಇಂದು 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಇಂದು ನಿರ್ಮಿಸಲಾಗಿದೆ. ಈ ಮೊದಲು ಇಲ್ಲಿನ ಜನರು ಉನ್ನತ ಮಟ್ಟದ ಚಿಕಿತ್ಸೆಗಾಗಿ ಉಡುಪಿ, ಮಂಗಳೂರು, ಹುಬ್ಬಳ್ಳಿಗೆ ಹೋಗುತ್ತಿದ್ದರು. ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಂದಿನ ಆಯವ್ಯಯದಲ್ಲಿ ಮಂಜೂರು ಮಾಡುವುದಾಗಿ ಸಿಎಂ ಭರವಸೆ ನೀಡಿದರು.
ಪ್ರತಿ ಜಿಲ್ಲೆಗೂ ಬಡವರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ:
ಪ್ರತಿ ಜಿಲ್ಲೆಯಲ್ಲಿಯೂ ಬಡವರಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಕ್ಯಾನ್ಸರ್ ಯೂನಿಟ್ ಒಂದನ್ನು ಕಾರವಾರದಲ್ಲಿ ಸ್ಥಾಪಿಸಲಾಗುವುದು. ಜಿಲ್ಲಾ ಕೇಂದ್ರಗಳಲ್ಲಿ ಎಲ್ಲ ವೈದ್ಯಕೀಯ ವ್ಯವಸ್ಥೆಗಳನ್ನೊದುಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಕರ್ನಾಟಕದಲ್ಲಿ ಈಗಾಗಲೇ 22 ಸರ್ಕಾರಿ ಮೆಡಿಕಲ್ ಕಾಲೇಜಿದ್ದು, ಮುಂದಿನ ದಿನಗಳಲ್ಲಿ ಕೋಲಾರ, ಪುತ್ತೂರು, ಬಿಜಾಪುರಗಳಲ್ಲಿ ಕಾಲೇಜು ನಿರ್ಮಿಸಲಾಗುವುದು ಎಂದರು.
ಹಿಂದಿನ ಸರ್ಕಾರ ಕಾರವಾರದ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ:
ಗ್ಯಾರಂಟಿಗಳಿಂದ ಸರ್ಕಾರದ ಬಳಿ ಹಣವಿಲ್ಲ ಎಂದು ವಿರೋಧಪಕ್ಷದವರು ಟೀಕಿಸುತ್ತಿದ್ದಾರೆ. ಆದರೆ ನಮ್ಮ ಅಭಿವೃದ್ಧಿಯ ಪಯಣ ನಿರಂತರವಾಗಿ ಸಾಗಿದೆ. ಉತ್ತರ ಕನ್ನಡ ಜಿಲ್ಲೆಗೆ 2954 ಕೋಟಿ ರೂ.ಗಳನ್ನು ಇಲ್ಲಿವರೆಗೆ ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸಲಾಗಿದೆ. ರಾಜ್ಯದಲ್ಲಿ ಸುಮಾರು 1,18,000 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಬಿಜೆಪಿಯವರು ನಮ್ಮ ಜನಪರ ಯೋಜನೆಗಳನ್ನು ಟೀಕಿಸುತ್ತಾ, ಅಭಿವೃದ್ಧಿಯಾಗುತ್ತಿಲ್ಲವೆಂದು ದೂರುತ್ತಿದ್ದಾರೆ. ಬಿಜೆಪಿಯವರು ತಮ್ಮ ಅವಧಿಯಲ್ಲಿ ಇಲ್ಲಿನ ಸೇತುವೆ ಯೋಜನೆಗಳನ್ನು ಪೂರ್ಣಗೊಳಿಸಲಿಲ್ಲ. ನಮ್ಮ ಸರ್ಕಾರ ಉಳುಗಾ ಕೆರವಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಯೋಜನೆಯನ್ನು ಆದ್ಯತೆ ಮೇಲೆ ಪೂರ್ಣಗೊಳಿಸುತ್ತೇವೆ ಎಂದರು.
