ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಕೃಷಿ ಉತ್ಪನ್ನಗಳು ಸೇರಿದಂತೆ ಭಾರತೀಯ ಕೃಷಿಗೆ ಜಾಗತಿಕ ಮನ್ನಣೆ ಕಲ್ಪಿಸಿಕೊಟ್ಟಿದ್ದಾರೆ. ಪರಿಣಾಮ ಇಂದು ರಾಜ್ಯದ ನಂಜನಗೂಡು ಬಾಳೆ, ಮೈಸೂರು ವೀಳ್ಯದೆಲೆ ಮತ್ತು ಇಂಡಿ ನಿಂಬೆಹಣ್ಣು ವಿದೇಶಿ ಪ್ರಸಿದ್ಧಿ ಪಡೆದಿವೆ ಎಂದು ಕೇಂದ್ರ ಆಹಾರ ಮತ್ತು ನಾಗರಿಹ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಸಂತಸ ವ್ಯಕ್ತಪಡಿಸಿದರು.
ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವಡ್ಡಿನ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಧಾನಿ ಮೋದಿ ಅವರ 131ನೇ ‘ಮನ್ ಕೀ ಬಾತ್’ ಸಂಚಿಕೆ ವೀಕ್ಷಿಸಿ ಅಭಿಪ್ರಾಯ ಹಂಚಿಕೊಂಡರು.
ಮನ್ ಕೀ ಬಾತ್ ಅಲ್ಲಿ ಪ್ರಧಾನಿ ಮೋದಿ ಅವರು ವಿಶೇಷವಾಗಿ ಕರ್ನಾಟಕದ ರೈತರ ಸಾಧನೆ ಬಗ್ಗೆ ತಿಳಿಸಿ ಶ್ಲಾಘಿಸಿದ್ದಾರೆ. ಮಾಲ್ಡೀವ್ಸ್ ಸೇರಿದಂತೆ ವಿದೇಶಗಳಲ್ಲಿ ಆಹಾರೋತ್ಪನ್ನದ ಸವಿರುಚಿ ಹೆಚ್ಚಿಸಿದ ರಾಜ್ಯದ ಅನ್ನದಾತರನ್ನು ಈ ಮೂಲಕ ಹುರಿದುಂಬಿಸುತ್ತಿದ್ದಾರೆ ಎಂದು ಜೋಶಿ ವ್ಯಾಖ್ಯಾನಿಸಿದರು.
ನಮ್ಮ ರಾಜ್ಯದ ಹೆಮ್ಮೆಯ GI ಮಾನ್ಯತೆ ಪಡೆದ ಉತ್ಪನ್ನಗಳಾದ ನಂಜನಗೂಡಿನ ಬಾಳೆಹಣ್ಣು, ಮೈಸೂರು ವೀಳ್ಯದೆಲೆ ಹಾಗೂ ಇಂಡಿಯ ನಿಂಬೆಹಣ್ಣು ವಿಶಿಷ್ಟ ರುಚಿ ಮತ್ತು ಉನ್ನತ ಗುಣಮಟ್ಟದಿಂದ ಕೂಡಿದ್ದು, ಇದೀಗ ವಾಯು ಮಾರ್ಗದ ಮೂಲಕ ಮಾಲ್ಡೀವ್ಸ್ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಿಗೆ ರಫ್ತಾಗುತ್ತಿವೆ ಎಂದರು.
ಕೇಂದ್ರ ಸರ್ಕಾರದ ರಫ್ತು ನೀತಿ, ನಿಯಮಗಳು ಹಾಗೂ ರೈತರು ಮತ್ತು ವರ್ತಕರ ಬೆಂಬಲಕ್ಕೆ ನಿಂತು ಕೈಗೊಂಡ ಯೋಜನೆಗಳಿಂದ ನಮ್ಮ ಕೃಷಿ ಉತ್ಪನ್ನಗಳಿಗೂ ಇಂದು ಮಾಲ್ಡೀವ್ಸ್ ನಂತಹ ರಾಷ್ಟ್ರದಲ್ಲಿ ಸಹ ಮಾರುಕಟ್ಟೆ ದೊರೆತು ಜಾಗತಿಕ ಮಟ್ಟದಲ್ಲಿ ಕರ್ನಾಟಕ ಸೇರಿದಂತೆ ಭಾರತೀಯ ಕೃಷಿ ಉತ್ಪನ್ನಗಳಿಗೆ ಬಹು ಬೇಡಿಕೆ ಕಂಡುಬರುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕರ್ನಾಟಕದ ರೈತರು ಕೇವಲ ಅಧಿಕ ಇಳುವರಿಗೆ ಸೀಮಿತವಾಗದೆ, ಗುಣಮಟ್ಟದ ಕೃಷಿಗೆ ಆದ್ಯತೆ ನೀಡುವ ಮೂಲಕ ಭಾರತೀಯ ಕೃಷಿ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಈ ರಾಜ್ಯದ ರೈತರನ್ನು ಸದಾ ಪ್ರೋತ್ಸಾಹಿಸುತ್ತಿದ್ದಾರೆ ಎಂಬುದಕ್ಕೆ ಇಂದಿನ ಮನ್ ಕೀ ಬಾತ್ ನಿದರ್ಶನವಾಗಿದೆ ಎಂದು ಸಚಿವ ಜೋಶಿ ಪ್ರತಿಕ್ರಿಯಿಸಿದರು.
ಭಾಷಾ ವೈವಿಧ್ಯತೆ-ಸಂಪ್ರದಾಯಗಳ ವೈಭವ, ವಿಜ್ಞಾನ ಸಾಧನೆಗಳಿಂದ ದೇಶಿ ಪರಂಪರೆ, ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ-ರೈತರ ಪರಿಶ್ರಮದ ಅನಾವರಣ, ಸ್ತ್ರೀ ಶಕ್ತಿ-ಯುವ ಶಕ್ತಿ, ಯೋಗ-ಆಯುರ್ವೇದ, ಆರೋಗ್ಯ ಸಂದೇಶ, ಸ್ವಚ್ಛತೆ, ಸ್ವಾವಲಂಬನೆಯಿಂದ ಅಭಿವೃದ್ಧಿಶೀಲತೆವರೆಗೆ ಹಾಗೂ ತ್ರಿವರ್ಣದ ಗರ್ವವರೆಗೆ ಇಡೀ ದೇಶ ಹೆಮ್ಮೆ ಪಡುವಂತೆ ಭಾರತದ ಅನೇಕ ಸಂಗತಿಗಳನ್ನು ಪ್ರಧಾನಿ ಮೋದಿ ಅವರು ಮನ್ ಕೀ ಬಾತ್ ಮೂಲಕ ಪ್ರಸಾರಿಸುತ್ತಿದ್ದಾರೆ. ಈ ಶ್ರೇಷ್ಠ, ವಿಶಿಷ್ಠ ಕಾರ್ಯಕ್ರಮ ಆಲಿಸುವುದು ಎಲ್ಲರಿಗೂ ಪ್ರೇರಣದಾಯಕ ಅನುಭವವಾಗಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ್, ಮಾಜಿ ಸಚಿವ ಮುರುಗೇಶ ನಿರಾಣಿ, ಮೇಯರ್, ಜ್ಯೋತಿ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಲ್ಲಿಗವಾಡ, ಜಿಲ್ಲಾ ಕಾರ್ಯದರ್ಶಿ ಬಸವರಾಜ ಗರಗ, ವಾರ್ಡ್‌ನ ಪ್ರಮುಖರಾದ ಪರಶುರಾಮ ಸಾಖರೆ, ಪಾಲಿಕೆ ಸದಸ್ಯರು, ಪಕ್ಷದ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
