ಸಮಗ್ರ ಸುದ್ದಿ

ಪಿಡಿಓ ಕಾಳಜಿಯಿಂದ ಅರಿವು ಕೇಂದ್ರವಾದ ಸಮುದಾಯ ಭವನ; ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘನೆ

Share

ಬೆಂಗಳೂರು: ಹಳ್ಳಿಯಿಂದ ದಿಲ್ಲಿಯವರೆಗೂ ಆಡಳಿತದಲ್ಲಿ ಕ್ರಿಯಾಶೀಲತೆ, ಕಾಳಜಿ ಮತ್ತು ಇಚ್ಛಾಶಕ್ತಿ ಇದ್ದಲ್ಲಿ ಮಾತ್ರ ಪರಿವರ್ತನೆ ತರಬಹುದು, ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಹಾಳಾಗುವ ಹಂತ ತಲುಪಿದ್ದ ಸಮುದಾಯ ಭವನವೊಂದನ್ನು ಸ್ಥಳೀಯ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಇತರ ಅಧಿಕಾರಿಗಳ ಇಚ್ಛೆಯಿಂದ ಅರಿವು ಕೇಂದ್ರವಾಗಿ ಪರಿವರ್ತನೆ ಹೊಂದಿರುವ ಬಗ್ಗೆ ಫೋಟೋ ಸಮೇತ ಎಕ್ಸ್ ನಲ್ಲಿ ಅವರು ಬರೆದಿದ್ದಾರೆ.

ಮೈಸೂರು ಜಿಲ್ಲೆಯ, ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮ ಪಂಚಾಯತಿ ಆಡಳಿತವು ಮಾದರಿ ಎನ್ನುವಂತಹ ಕೆಲಸವನ್ನು ಮಾಡಿದೆ. ಹಾರೋಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಬಳಕೆ ಮಾಡದೆ, ನಿರ್ಲಕ್ಷ್ಯಕ್ಕೆ ಒಳಪಟ್ಟು ಹಾಳಾಗುವ ಸ್ಥಿತಿಯಲ್ಲಿದ್ದ ಅಂಬೇಡ್ಕರ್ ಸಮುದಾಯ ಭವನದ ಕಟ್ಟಡಕ್ಕೆ ಹೊಸ ಮೆರುಗನ್ನು ನೀಡಿ, ಸುಸಜ್ಜಿತ ಅರಿವು ಕೇಂದ್ರವಾಗಿ ಪರಿವರ್ತಿಸಲಾಗಿದೆ.

ರೈತರಿಗೆ ಕೃಷಿ ಸಂಬಂಧಿತ ಪುಸ್ತಕಗಳಿರುವ ಪ್ರತ್ಯೇಕ ವಿಭಾಗ, ಮಹಿಳೆಯರು ಮತ್ತು ಮಕ್ಕಳ ಚಟುವಟಿಕೆಗಳಿಗೂ ಪ್ರತ್ಯೇಕ ವಿಭಾಗ ಮಾಡಿರುವುದು ವಿಶೇಷವಾಗಿ ಗಮನ ಸೆಳೆಯುವಂತಹದ್ದು. ಗ್ರಾಮದ ಯುವ ಜನರು ಸ್ಪರ್ದಾತ್ಮಕ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಈ ಅರಿವು ಕೇಂದ್ರವನ್ನು ರೂಪಿಸಲಾಗಿದೆ.

ಪಿಡಿಒ ಕೆ.ಎಸ್ ಗಣೇಶ್, ಪಂಚಾಯತಿ ಅಧ್ಯಕ್ಷ ರೇವಣ್ಣ ಮತ್ತು ಇತರ ಸದಸ್ಯರ ಈ ಕ್ರಿಯಾಶೀಲ ಕೆಲಸವು ಶ್ಲಾಘನೀಯವಾದುದು ಎಂದು ಸಚಿವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


Share

You cannot copy content of this page