ಬೆಂಗಳೂರು: ಇ-ಸ್ವತ್ತು 2.0 ತಂತ್ರಾಂಶದಡಿ ಇದುವರೆಗೆ ರಾಜ್ಯದಲ್ಲಿ 1,14,907 ಅರ್ಜಿಗಳನ್ನು ಅನುಮೋದಿಸಿ ವಿಲೇವಾರಿ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಪಂಚಾಯತ್ ರಾಜ್ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಸಾರ್ವಜನಿಕರಿಂದ ಇದುವರೆಗೆ ಒಟ್ಟು 1,38,470 ಅರ್ಜಿಗಳು ಸ್ವೀಕೃತವಾಗಿದ್ದು, 23,563 ಅರ್ಜಿಗಳು ಅನುಮೋದನೆಗಾಗಿ ಬಾಕಿ ಉಳಿದಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇ-ಸ್ವತ್ತು 2.0 ತಂತ್ರಾಂಶದ ಸಿಟಿಜನ್ ಇಂಟರ್‌ಫೇಸ್ ಮೂಲಕ ಅರ್ಜಿಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಮತ್ತು ಅರ್ಜಿಗಳನ್ನು ಅನುಮೋದನೆ ಮಾಡುವ ಸಮಯದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇ-ಸ್ವತ್ತು ತಂತ್ರಾಂಶವನ್ನು ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಎನ್‌ಐಸಿ ಸಂಸ್ಥೆ ಮೂಲಕ ಉದ್ಭವಿಸಿರುವ ಇ-ಸ್ವತ್ತು 2.0 ತಂತ್ರಾಂಶದ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಮತ್ತು ಉಳಿದ ಮಾಡ್ಯುಲ್‌ಗಳನ್ನು ಆದ್ಯತೆ ಮೇರೆಗೆ ಅಭಿವೃದ್ದಿಪಡಿಸಲು ಕಳೆದ ಜನವರಿಯಲ್ಲಿ ಕೇಂದ್ರದ ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ಖಾತೆಯ ಸಚಿವರಿಗೆ ತಾವು ಬರೆದಿದ್ದ ಪತ್ರಕ್ಕೆ ಸಂಬಂಧಿಸಿದಂತೆ ಇ-ಸ್ವತ್ತು 2.0 ತಂತ್ರಾಂಶದಲ್ಲಿ ಬದಲಾವಣೆ ಮಾಡಿ ಕೆಲವು ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಹೇಳಿದ್ದಾರೆ.
ಹೊಸ ಬಡಾವಣೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ಗ್ರಾಮ ಪಂಚಾಯತಿ ಹಂತದಲ್ಲಿ ಅವಕಾಶ ನೀಡಲಾಗಿದ್ದು, ಈವರೆಗೆ 478 ಹೊಸ ಬಡಾವಣೆಗಳಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಅವುಗಳಲ್ಲಿ 54 ಹೊಸ ಬಡಾವಣೆಗಳಿಗೆ ಗ್ರಾಮ ಪಂಚಾಯತಿ ಹಂತದಲ್ಲಿ ಅನುಮೋದನೆ ನೀಡಲಾಗಿದೆ. ಹೊಸ ಬಹುಮಹಡಿ (ಅಪಾರ್ಟ್‌ಮೆಂಟ್) ಕಟ್ಟಡಗಳಿಗೆ ಅರ್ಜಿಗಳನ್ನು ಸಲ್ಲಿಸಲು ಗ್ರಾಮ ಪಂಚಾಯತಿ ಹಂತದಲ್ಲಿ ಅವಕಾಶ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸೆಂಟ್ಸ್ ಅಳತೆ ಚ.ಮೀಗೆ ಪರಿವರ್ತನೆ:
ದಕ್ಷಿಣ ಕನ್ನಡ ಜಿಲ್ಲೆಯ ನಿಯೋಗವೊಂದು ತಮ್ಮನ್ನು ಭೇಟಿಯಾಗಿ ಇ-ಸ್ವತ್ತು ತಂತ್ರಾಂಶದ ಸಿಟಿಜನ್ ಇಂಟರ್‌ಫೇಸ್ ಮೂಲಕ ಅರ್ಜಿಗಳನ್ನು ಸಲ್ಲಿಸುವಾಗ ತಮ್ಮ ಭಾಗದಲ್ಲಿ ಚಾಲ್ತಿಯಲ್ಲಿರುವ ಸೆಂಟ್ಸ್ ಪದ್ದತಿಯಂತೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಕೋರಿದ್ದರು. ಅದರಂತೆ ಗುಂಟೆ ಮತ್ತು ಸೆಂಟ್ಸ್ ಅಳತೆಯಲ್ಲಿರುವ ಭೂಮಿಯ ವಿಸ್ತೀರ್ಣವನ್ನು ಚದರ ಮೀಟರ್ ನಲ್ಲಿ ಪರಿವರ್ತಿಸಿ, ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಹೊಸದಾಗಿ ಅನುಮೋದನೆಗೊಂಡ ಆಸ್ತಿಗಳಿಗೆ ತಿದ್ದುಪಡಿ ಮಾಡುವ ಅವಕಾಶವನ್ನು ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಾರ್ಗಸೂಚಿ ದರವನ್ನು ಇ-ಸ್ವತ್ತು ತಂತ್ರಾಂಶದೊಂದಿಗೆ ಸಂಯೋಜನೆ ಮಾಡುವ ಕಾರ್ಯವನ್ನು ಮುಂದಿನ 10 ದಿನದೊಳಗೆ ಕ್ರಮವಹಿಸಲಾಗುವುದು. ಇ-ಸ್ವತ್ತು ತಂತ್ರಾಂಶದ ಬಳಕೆದಾರರು ಎದುರಿಸುತ್ತಿರುವ ಲಾಗಿನ್‌ನಲ್ಲಿ ಉಂಟಾಗುತ್ತಿರುವ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಸ್ವತ್ತು ತಂತ್ರಾಂಶದಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಮತ್ತಷ್ಟು ಸರಳಿಕರಿಸಲು ಕ್ರಮವಹಿಸಲಾಗುತ್ತಿದೆ, ಅರ್ಜಿ ಸಲ್ಲಿಸಲು ಯಾವುದೇ ಕಾಲಾವಧಿಯನ್ನು ನಿಗದಿಪಡಿಸಿಲ್ಲವಾದ್ದರಿಂದ ಸಾರ್ವಜನಿಕರು ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡದೆಯೇ ತಾವಿರುವಲ್ಲಿಯೇ ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಮೂನೆಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಪಡೆಯಬಹುದಾಗಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಸಚಿವರು ಕೋರಿದ್ದಾರೆ.
ಇ-ಸ್ವತ್ತು ಸಹಾಯವಾಣಿ 9483476000, ಜಿಲ್ಲಾ ಸಹಾಯವಾಣಿಗಳ ಸಂಖ್ಯೆಯನ್ನು https://eswathu.karnataka.gov.in/Login.aspx ರಲ್ಲಿ “ಸಂಪರ್ಕಿಸಿ” ಶೀರ್ಷಿಕೆಯಡಿ ಹಾಗೂ https://panchatantra.karnataka.gov.in ರಲ್ಲಿ ಪ್ರಕಟಿಸಲಾಗಿದೆ.
