ಸಮಗ್ರ ಸುದ್ದಿ

ಮೂಲಸೌಕರ್ಯ ಅಭಿವೃದ್ದಿ ಕಾಮಗಾರಿಗಳಿಗೆ ವೇಗ ನೀಡಿ –ಡಿ.ಎಸ್. ರಮೇಶ್

Share

ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಅನುದಾನಗಳ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಆಯುಕ್ತರಾದ ಡಿ.ಎಸ್. ರಮೇಶ್ ರವರು ಪರಿಶೀಲಿಸಿ, ಅಭಿವೃದ್ದಿ ಕಾಮಗಾರಿಗಳಿಗೆ ವೇಗ ನೀಡುವ ಮೂಲಕ ನಿಗದಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಯಮಲೂರು ಜಂಕ್ಷನ್-ಹೊರ ವರ್ತುಲ ರಸ್ತೆ ಜಂಕ್ಷನ್

ದೊಡ್ಡನೆಕ್ಕುಂದಿ ಮುಖ್ಯ ರಸ್ತೆಯ ಯಮಲೂರು ಜಂಕ್ಷನ್ನಿಂದ ಹೊರ ವರ್ತುಲ ರಸ್ತೆ ಜಂಕ್ಷನ್ವರೆಗೆ ಸುಮಾರು1.8 ಕಿ.ಮೀ ರಸ್ತೆ ಅಭಿವೃದ್ಧಿ ಕಾರ್ಯವನ್ನು ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ (ಸಿಎಂಐಡಿಪಿ) ಅನುದಾನದಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಪ್ರಸ್ತುತ ಡೀಸಿಲ್ಟಿಂಗ್ ಮತ್ತು ಮಿಲ್ಲಿಂಗ್ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಗುಣಮಟ್ಟದೊಂದಿಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.

ಅಮೃತ ನಗರೋತ್ಥಾನ ಯೋಜನೆ – ವೈಟ್ ಟಾಪಿಂಗ್

ದೊಡ್ಡನೆಕ್ಕುಂದಿ ಗ್ರಾಮದಲ್ಲಿ ಅಮೃತ ನಗರೋತ್ಥಾನ ಅನುದಾನದಡಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಕಾಮಗಾರಿಯ 50% ಪೂರ್ಣಗೊಂಡಿದೆ.ಬಾಕಿ ಕಾಮಗಾರಿಯನ್ನು ಮಾರ್ಚ್ 15ರೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಗೋಪಾಲನ್ ಶಾಲೆ-ಗೋಶಾಲೆ ರಸ್ತೆ

ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ (ಸಿಎಂಐಡಿಪಿ) ಅನುದಾನದಡಿಯಲ್ಲಿ ದೊಡ್ಡನೆಕ್ಕುಂದಿ ಗ್ರಾಮದ ಗೋಪಾಲನ್ ಶಾಲೆಯಿಂದ ಗೋಶಾಲೆ ರಸ್ತೆವರೆಗೂ ಸುಮಾರು 1.2 ಕಿಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಡೀಸಿಲ್ಟಿಂಗ್ ಕಾರ್ಯ, ಕೋಪಿಂಗ್ ಕಾಂಕ್ರೀಟ್ ಅಳವಡಿಕೆ ನಡೆಯುತ್ತಿದ್ದು, ಕಾಮಗಾರಿಗೆ ವೇಗ ನೀಡಲು ಸೂಚಿಸಿದರು.

ಹೋಪ್ ಫಾರ್ಮ್ ಅಂಡರ್ಪಾಸ್ ಕಾಮಗಾರಿ ಪರಿಶೀಲನೆ

ಹೋಪ್ ಫಾರ್ಮ್ ಜಂಕ್ಷನ್ ಬಳಿ ಅಂಡರ್ಪಾಸ್ ಕಾಮಗಾರಿ ಪ್ರಗತಿಯನ್ನು ಪರಿಶೀಲಿದ ಆಯುಕ್ತರು ಅಗತ್ಯ ಅರಣ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಅನುಮತಿಗಳನ್ನು ತ್ವರಿತವಾಗಿ ಪಡೆದುಕೊಳ್ಳುವಂತೆ ಸೂಚಿಸಿದರು, ಹಾಗೂ ಇದೇ ಪ್ಯಾಕೇಜ್ ಗೆ ಸಂಬಂಧಿಸಿದ ಬಿಗ್ ಬಜಾರ್ ಮತ್ತು ಹೂಡಿ ವೃತ್ತದ ಹತ್ತಿರದ ಕಾಮಗಾರಿಗಳನ್ನು ಶೀಘ್ರದಲ್ಲಿ ಪ್ರಾರಂಭಿಸಲು ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.

ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವು

ಗರಡಾಚಾರ್ ಪಾಳ್ಯ ಮುಖ್ಯರಸ್ತೆಯಲ್ಲಿನ ಪಾದಚಾರಿ ಮಾರ್ಗದಲ್ಲಿ ಒತ್ತುವರಿಯನ್ನು ಗಮನಿಸಿದಆಯುಕ್ತರು ಕೂಡಲೇ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಅಡೆತಡೆ ರಹಿತ ಸುರಕ್ಷಿತ ಪಾದಚಾರಿ ಮಾರ್ಗವನ್ನು ಕಲ್ಪಿಸುಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಪಾಲಿಕೆ ಬದ್ಧವಾಗಿದ್ದು, ಕಾಮಗಾರಿಗಳಿಗೆ ಗಡುವು ನಿಗದಿ ಮಾಡಿ, ಯೋಜನೆಗಳ ಪ್ರಗತಿಗೆ ಆದ್ಯತೆ ನೀಡುವ ಮೂಲಕ ಎಲ್ಲಾ ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಆಯುಕ್ತರು ಈ ಸಂದರ್ಭದಲ್ಲಿ ತಿಳಿಸಿದರು.

ಆಯುಕ್ತರ ಪರಿಶೀಲನೆ ವೇಳೆಯಲ್ಲಿ ಮುಖ್ಯ ಅಭಿಯಂತರರಾದ ಎಂ.ಲೋಕೇಶ್, ಕಾರ್ಯಪಾಲಕಅಭಿಯಂತರಾದ ಟಿ.ಸಿ.ರವಿಕುಮಾರ್ ಮತ್ತು ಭೂಪ್ರದ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.


Share

You cannot copy content of this page