ಬೆಂಗಳೂರು: “ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ” ಎಂಬ ನಮ್ಮ ಸರ್ಕಾರದ ಮೂಲ ಆಶಯಕ್ಕೆ ತಕ್ಕಂತೆ ಅತ್ಯುತ್ತಮ ಬಜೆಟ್ ಅನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮಂಡಿಸಿದ್ದಾರೆ ಎಂದು ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಅಂತರ್ಜಲ ವೃದ್ಧಿ ಹಾಗೂ ಕೆರೆಗಳ ಮರುಪೂರಣಕ್ಕೆ ಬಜೆಟ್‌ನಲ್ಲಿ ಸಿಂಹಪಾಲು ನೀಡಲಾಗಿದೆ. ರಾಜ್ಯಾದ್ಯಂತ ಏತ ನೀರಾವರಿ, ಚೆಕ್‌ಡ್ಯಾಂ ಹಾಗೂ ಕೆರೆಗಳ ಪುನಶ್ಚೇತನದ ಕಾಮಗಾರಿಗಳಿಗೆ ಬರೋಬ್ಬರಿ 1,793 ಕೋಟಿ ರೂ. ಮೀಸಲಿಟ್ಟಿರುವುದು ಐತಿಹಾಸಿಕ ಹೆಜ್ಜೆ. ಹೆಚ್.ಎನ್. ವ್ಯಾಲಿ ಹಾಗೂ ವೃಷಭಾವತಿ ವ್ಯಾಲಿ ಯೋಜನೆಗಳ ಮೂಲಕ ಶಿಡ್ಲಘಟ್ಟ, ಚಿಂತಾಮಣಿ, ಹೊಸಕೋಟೆ, ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಭಾಗದ ನೂರಾರು ಕೆರೆಗಳಿಗೆ 1,027 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ನೀರು ತುಂಬಿಸುವ ಮೂಲಕ ಬಯಲುಸೀಮೆಯ ನೀರಿನ ದಾಹ ತೀರಿಸಲಾಗುತ್ತಿದೆ. ಅಲ್ಲದೆ, ಕೆರೆ ಬಳಕೆದಾರರ ಸಂಘಗಳ ಬಲವರ್ಧನೆಗೂ ಸರ್ಕಾರ ಒತ್ತು ನೀಡಿದೆ,” ಎಂದು ತಿಳಿಸಿದ್ದಾರೆ.
“ಮತ್ತೊಂದೆಡೆ, ರಾಜ್ಯದ ಭವಿಷ್ಯದ ತಂತ್ರಜ್ಞಾನಕ್ಕೆ ಪೂರಕವಾಗಿ 10 ಕೋಟಿ ರೂ. ವೆಚ್ಚದಲ್ಲಿ ‘ಕರ್ನಾಟಕ ಕ್ವಾಂಟಮ್ ರೋಡ್‌ಮ್ಯಾಪ್’ ಜಾರಿಗೊಳಿಸಲಾಗುತ್ತಿದೆ. ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿಯಲ್ಲಿ 233 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ‘ವಿಜ್ಞಾನ ನಗರ’ (Science City) ಸ್ಥಾಪನೆಗೆ ಡಿಪಿಆರ್ ಸಿದ್ದಪಡಿಸುವ ಘೋಷಣೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಸೇರಿದಂತೆ 6 ಜಿಲ್ಲೆಗಳಲ್ಲಿ 24 ಕೋಟಿ ರೂ. ವೆಚ್ಚದಲ್ಲಿ ನೂತನ ತಾರಾಲಯಗಳನ್ನು ನಿರ್ಮಿಸಲಾಗುತ್ತಿದೆ. ಇದು ಗ್ರಾಮೀಣ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಮಹತ್ವದ ಮೈಲಿಗಲ್ಲಾಗಲಿದೆ. ಒಟ್ಟಾರೆಯಾಗಿ ಈ ಬಜೆಟ್ ‘ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ’ದ ಕನಸನ್ನು ನನಸು ಮಾಡುವ ಅತ್ಯುತ್ತಮ ದಿಕ್ಸೂಚಿಯಾಗಿದೆ,” ಎಂದು ಸಚಿವ ಎನ್.ಎಸ್. ಬೋಸರಾಜು ಹರ್ಷ ವ್ಯಕ್ತಪಡಿಸಿದ್ದಾರೆ.
