ಸಮಗ್ರ ಸುದ್ದಿ

ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ

Share

ಬೆಂಗಳೂರು: ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಜೀವನದಲ್ಲಿ ಶಿಸ್ತು ರೂಢಿಸಿಕೊಂಡಲ್ಲಿ, ನೀವು ನನ್ನ ರೀತಿ ಗಗನಯಾನಿ ಆಗಬಹುದು ಎಂದು ಗಗನಯಾನಿ ಶುಭಾಂಶು ಶುಕ್ಲಾ ತಿಳಿಸಿದರು.

ಕರ್ನಾಟಕ ಸರಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಜವಾಹರಲಾಲ್ ನೆಹರು ತಾರಾಲಯದಲ್ಲಿ ಆಯೋಜಿಸಿದ್ದ ಆಕ್ಸಿಯಂ ಸ್ಪೇಸ್-4 ಮಿಷನ್ ಯಶಸ್ವಿಯ ರುವಾರಿಯಾಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರಿಗೆ ಅಭಿನಂದನೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಈ ವೇಳೆ ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು. ನೀವು ಸಹ ನನ್ನಂತೆಯೇ ಗಗನಯಾನಿ ಆಗಬಹುದು. ಆದರೆ, ಇದೊಂದೇ ಆಗಬೇಕೆಂದು ಕನಸು ಕಾಣಬೇಡಿ. ಏಕೆಂದರೆ, ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಾನು ಹೀರೋ ರೀತಿ ನಿಮಗೆ ಕಾಣಬಹುದು. ಆದರೆ, ನನ್ನ ಯಾತ್ರೆಗೆ ಸಾವಿರಾರೂ ಮಂದಿ ಕೆಲಸ ಮಾಡಿದ್ದಾರೆ. ಎಂಜಿನಿಯರ್, ವೈದ್ಯರು ಹೀಗೆ ಸಾಕಷ್ಟು ಮಂದಿ ಇದ್ದಾರೆ. ಅವರಂತೆ ನೀವು ಆಗಬಹುದು’ ಎಂದರು.

ಜೀವನದಲ್ಲಿ ಗುರಿ ಮುಖ್ಯ:
ನನ್ನ ಗಗನಯಾನಕ್ಕೆ ಸಾಕಷ್ಟು ಜನರ ಸ್ಪೂರ್ತಿ ಇದೆ. ಗಗನಯಾನಿ ರಾಕೇಶ್ ಶರ್ಮಾ ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ನೀವು ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ಅದನ್ನು ಸಾಧಿಸುವ ಛಲ ಇರಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ತಾಳ್ಮೆ ಇರಬೇಕು. ಏಕೆಂದರೆ, ನಾನು 20 ದಿನಗಳ ಯಾತ್ರೆಗೆ 5 ವರ್ಷಗಳ ತರಬೇತಿ ಪಡೆದಿದ್ದೇನೆ ಎಂದರು.

ಗಗನಯಾನ ಯಾತ್ರೆ ಸುಲಭವಿಲ್ಲ:
`ಗಗನಯಾನ ನೀವು ಅಂದುಕೊಂಡಷ್ಟು ಸುಲಭವಾಗಿಲ್ಲ. ಹೊಸ ವಾತಾವರಣಕ್ಕೆ ಹೊಂದುಕೊಳ್ಳುವುದು ತೀರಾ ಕಷ್ಟ. ಬಾಹ್ಯಾಕಾಶಕ್ಕೆ ಹೋದ ಮೇಲೆ ನಾನು ಗಾಳಿಯಲ್ಲಿ ತೇಲಾಡುವುದು ಅಭ್ಯಾಸ ಮಾಡಿಕೊಂಡೆ. ಅಲ್ಲಿ ಹಲವಾರು ಸಂಶೋಧನೆಗಳನ್ನು ಕೈಗೊಳ್ಳಲಾಯಿತು. ಭೂಮಿಗೆ ಬರುವಾಗ ತುಂಬಾ ಕಷ್ಟವಾಗಿತ್ತು. ಬಂದ ಮೇಲೆ ಒಂದು ವಾರದ ವರೆಗೆ ನನಗೆ ನೇರವಾಗಿ ನಿಂತುಕೊಳ್ಳುವುದಕ್ಕೆ ಸಹ ಆಗುತ್ತಿರಲಿಲ್ಲ ಎನ್ನುವ ಮೂಲಕ ತಮ್ಮ ಅನುಭವವನ್ನು ವಿದ್ಯಾರ್ಥಿಗಳ ಎದುರು ಹಂಚಿಕೊಂಡರು.

ಜಿಫೋರ್ಸ್ ಪ್ರಭಾವ:
ನಾನು 16-17 ವರ್ಷಗಳಿಂದ ಪೈಲೆಟ್ ಆಗಿ ಕೆಲಸ ಮಾಡುತ್ತಿದ್ದೇನೆ. ಆದರೆ, ಎಂದಿಗೂ ಟಚ್‌ ಸ್ಕ್ರೀನ್ ಬಳಕೆ ಮಾಡಿ ಏರ್‌ಕ್ರಾಫ್ಟ್, ಸ್ಪೇಸ್ ಕ್ರಾಫ್ಟ್ ಹಾರಾಟ ನಡೆಸಿರಲಿಲ್ಲ. ಆದರೆ, ಆಮೆರಿಕದ ಸ್ಪೇಸ್ ಎಕ್ಸ್ ನ ಬಾಹ್ಯಾಕಾಶ ಯೋಜನೆಯು ಕ್ರೂ ಡ್ರ್ಯಾಗನ್ ಅನ್ನು ಕೇವಲ ಟಚ್ ಸ್ಕ್ರೀನ್ ನಲ್ಲಿ ನಿಯಂತ್ರಿಸಬಹುದು. ಬಾಹ್ಯಕಾಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾದರೆ, 18-20 ಜಿಪೋರ್ಸ್ ಮೈ ಮೇಲೆ ಬೀಳುತ್ತದೆ. ಅಂದರೆ, ಒಂದು ಮರಿಯಾನೆ ಎದೆಯ ಮೇಕಲೆ ಕುಳಿತಂತೆ ಭಾಸವಾಗುತ್ತದೆ ಎಂದು ಕ್ಲಿಷ್ಟಕರ ವಿಚಾರಗಳನ್ನು ತಿಳಿಸಿದರು.
ಭಾರತೀಯ ವಿಜ್ಞಾನಕ್ಕೆ ಅಪಾರ ಕೊಡುಗೆ:
ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಮಾತನಾಡಿ, ನಿಮ್ಮ ಕೆಲಸದ ಮೂಲಕ ಭಾರತೀಯ ವಿಜ್ಞಾನಕ್ಕೆ ನೀವು ಕೇವಲ ಕೊಡುಗೆ ನೀಡುವುದು ಮಾತ್ರವಲ್ಲ, ಜಾಗತಿಕ ಜ್ಞಾನವನ್ನು ನಿರೂಪಿಸಿದ್ದೀರಿ. ನೀವು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಾಲಿಟ್ಟಾಗ, ನೀವು ಕೇವಲ ರಾಷ್ಟ್ರಧ್ವಜವನ್ನೇ ಅಲ್ಲ, ಎಲ್ಲಾ ಭಾರತೀಯರ ಕನಸುಗಳನ್ನು ಕೂಡ ನಿಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದು, ನಮ್ಮ ದೇಶಕ್ಕೆ ಹೆಮ್ಮೆ ತಂದಿದೆ ಎಂದರು.

ನಿಮ್ಮ ಸಾಧನೆಗಳು ನಮಗೆ ಭಾರತದ ವೈಜ್ಞಾನಿಕ ಕಲ್ಪನೆಗೆ ಮಿತಿ ಇಲ್ಲ ಎಂಬುದನ್ನು ನೆನಪಿಸುತ್ತವೆ. ನೀವು ನಮ್ಮ ಜಾಗತಿಕ ಸ್ಥಾನಮಾನದಲ್ಲಿ ಹೊಸ ಅಧ್ಯಾಯವನ್ನು ಪ್ರತಿನಿಧಿಸುತ್ತೀರಿ. ಕರ್ನಾಟಕದ ಗ್ರಾಮೀಣ ಪ್ರದೇಶದ ಒಂದು ಮಗು ರಾತ್ರಿ ಆಕಾಶವನ್ನು ನೋಡಿದಾಗ, ಅದು ಮುಂದಿನ ಕಲ್ಪನಾ ಚಾವ್ಲಾ, ಮುಂದಿನ ಸುನಿತಾ ವಿಲಿಯಮ್ಸ್ ಅಥವಾ ಮುಂದಿನ ಶುಭಾಂಶು ಶುಕ್ಲಾ ಆಗುವ ಕನಸು ಕಾಣಬೇಕು. ಆ ಕನಸಿಗೆ ಸರಿಯಾದ ಬೆಂಬಲ ದೊರೆಯುವಂತೆ ಮಾಡುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿಯಾಗಿದೆ’ ಎಂದರು.

ನಾವು ನಿಮ್ಮ ಕನಸುಗಳನ್ನು ಪಠ್ಯಪುಸ್ತಕಗಳಲ್ಲಿ ಅಥವಾ ಕಲ್ಪನೆಗಳಲ್ಲಿ ಮಾತ್ರ ಸೀಮಿತವಾಗದಂತೆ ನೋಡಿಕೊಳ್ಳುತ್ತಿದ್ದೇವೆ. ನಾವು ಬಾಹ್ಯಾಕಾಶ ವಿಜ್ಞಾನದ ಅದ್ಭುತವನ್ನು ನೇರವಾಗಿ ತರಗತಿಗಳಿಗೆ ತರುತ್ತಿದ್ದೇವೆ. ನಮ್ಮ ಪ್ರಮುಖ ಟೆಲಿಸ್ಕೋಪ್ ಯೋಜನೆಯ ಮೂಲಕ ಗ್ರಾಮೀಣ ಭಾಗದ ಶಾಲೆಗಳಿಗೆ 833 ಟೆಲಿಸ್ಕೋಪ್‌ಗಳನ್ನು ವಿತರಣೆ ಮಾಡಲಾಗಿದೆ. ಈ ಟೆಲಿಸ್ಕೋಪ್‌ಗಳು ಕೇವಲ ಸಾಧನಗಳಲ್ಲ, ಅವು ಮಗುವಿನ ಕನಸುಗಳನ್ನು ತೆರೆಯುವ ಹೆಬ್ಗಾಗಿಲು ರೀತಿ ಕೆಲಸ ಮಾಡಲಿದೆ. ನಾವು ಶೀಘ್ರದಲ್ಲೇ ಶಿಕ್ಷಕರಿಗಾಗಿ ಖಗೋಳಶಾಸ್ತ್ರ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ, ಇದರಿಂದ ಶಿಕ್ಷಕರು ದೂರದರ್ಶಕವನ್ನು ಹೇಗೆ ಬಳಸುವುದು ಮತ್ತು ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರದಲ್ಲಿ ಮಾರ್ಗದರ್ಶನ ನೀಡುವುದು ಕಲಿಯುತ್ತಾರೆ. ನಮ್ಮ ಇಲಾಖೆ ಶೀಘ್ರದಲ್ಲೇ ಜವಾಹರಲಾಲ್ ನೆಹರು ತಾರಾಲಯ ಮತ್ತು ಭಾರತೀಯ ಖಗೋಳಶಾಸ್ತ್ರ ಸಂಸ್ಥೆಯೊಂದಿಗೆ ಸಂಯುಕ್ತವಾಗಿ ತಯಾರಿಸಲಾದ ಖಗೋಳಶಾಸ್ತ್ರೀಯ ಘಟನೆಗಳ ಶೈಕ್ಷಣಿಕ ದಿನಚರಿಯನ್ನು ಸರಕಾರಿ ಶಾಲೆಗಳಲ್ಲಿ ಜಾರಿಗೆ ತರುತ್ತದೆ ಎಂದರು.

ಈ ಪಠ್ಯಕ್ರಮವು ಖಗೋಳಶಾಸ್ತ್ರವನ್ನು ಮಕ್ಕಳಿಗೆ ಪಾಠ ಪುಸ್ತಕಗಳಿಗಿಂತ ಬಹಳ ದೂರದ ಪ್ರಾಯೋಗಿಕ ಕಲಿಕೆಯ ಪ್ರಯಾಣವನ್ನಾಗಿ ಪರಿವರ್ತಿಸುತ್ತದೆ. ನಾವು “ನೆಹರು ಸ್ಟ್ರೀಮ್ ಲ್ಯಾಬ್ಸ್’ ಅನ್ನು ಪ್ರಾರಂಭಿಸುತ್ತಿದ್ದೇವೆ, ಇದರಿಂದ ಮಕ್ಕಳಿಗೆ ಪ್ರಾಯೋಗಿಕ ಕಲಿಕೆಯ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಈ ಉಪಕ್ರಮಗಳ ಮೂಲಕ, ನಾವು ನಮ್ಮ ವಿದ್ಯಾರ್ಥಿಗಳನ್ನು ವಿಜ್ಞಾನ, ಆವಿಷ್ಕಾರ ಮತ್ತು ಬಾಹ್ಯಾಕಾಶ ಅನ್ವೇಷಣೆಯ ಭವಿಷ್ಯಕ್ಕೆ ಸಿದ್ಧಗೊಳಿಸುತ್ತಿದ್ದೇವೆ. ನಮ್ಮ ರಾಜ್ಯದ ಪ್ರತಿಯೊಂದು ಮಗುವಿಗೂ ಬ್ರಹ್ಮಾಂಡವನ್ನು ಹತ್ತಿರ ತರುವುದಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡೋಣ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಶ್ರೀಮಧು ಬಂಗಾರಪ್ಪ ಮಾತನಾಡಿ, `ನಮ್ಮ ಮಕ್ಕಳನ್ನು ನಿಮ್ಮಂತೆಯೇ ರೂಪಿಸಲು ನಾವು ಸಿದ್ಧರಾಗಿದ್ದೇವೆ. ಇದಕ್ಕಾಗಿ ನಾವು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿದ್ದೇವೆ. ಸರಕಾರಿ ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್‌ಗಳನ್ನು ನೀಡುತ್ತಿದ್ದೇವೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ. ಕನಸು ಕಾಣುವುದಕ್ಕೆ ಯಾವುದೇ ಮಿತಿ ಇಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕೆಂದರು.

ಸಮಾರಂಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುಳಾ, ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಡಾ.ಬಿ.ಆರ್.ಗುರುಪ್ರಸಾದ್ ಇತರರು ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸರಕಾರಿ, ಖಾಸಗಿ ಶಾಲಾ ಮಕ್ಕಳು ಶುಭಾಂಶು ಶುಕ್ಲಾ ಅವರೊಂದಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದ ನಡೆಸಿದರು.


Share

You cannot copy content of this page