ಸಮಗ್ರ ಸುದ್ದಿ

ದೇಶದಲ್ಲಿರುವ ಸಂವಿಧಾನ ವಿರೋಧಿ ಮನುವಾದಿಗಳನ್ನು ಗುರುತಿಸಿ: ಸಿ.ಎಂ‌.ಸಿದ್ದರಾಮಯ್ಯ

Share

ಬೆಂಗಳೂರು ನ. 26: ದೇಶದಲ್ಲಿರುವ ಸಂವಿಧಾನ ವಿರೋಧಿ ಮನುವಾದಿಗಳನ್ನು ಗುರುತಿಸಿ. ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ “ಸಂವಿಧಾನ ದಿನಾಚರಣೆ – 2025” ಅನ್ನು ಉದ್ಘಾಟಿಸಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಿಗೆ ನಮಿಸಿ ಮಾತನಾಡಿದರು.

ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು. ಮನುಸ್ಮೃತಿಯಲ್ಲಿದ್ದ ಮನುಷ್ಯ ವಿರೋಧಿ, ಸಮಾನತೆ ವಿರೋಧಿ ನಿಯಮಗಳಿಗೆ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಅವಕಾಶ ಇಲ್ಲದಂತಾಯಿತು. ಅದಕ್ಕೇ ಮನುವಾದಿಗಳು ನಮ್ಮ ಸಂವಿಧಾನವನ್ನು ವಿರೋಧಿಸುತ್ತಾರೆ.

ಸಮ ಸಮಾಜ ನಿರ್ಮಾಣ, ಅಸಮಾನತೆ ನಿವಾರಣೆ ನಮ್ಮ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಆಶಯವಾಗಿತ್ತು.
We the people of INDIA ಎನ್ನುವುದೇ ನಮ್ಮ ಸಂವಿಧಾನದ ಮೂಲ ಮಂತ್ರ.ಈ ದೇಶದ ಜನತೆಗೆ ಎಂಥಾ ಸಂವಿಧಾನ ಬೇಕು ಎನ್ನುವ ಬಗ್ಗೆ ಒಂದು ವರ್ಷ ಕಾಲ ಸಂವಿಧಾನ ಸಭೆಯಲ್ಲಿ ಸಮಗ್ರ ಚರ್ಚೆ ಬಳಿಕ ಅಂಗೀಕರಿಸಲಾಗಿದೆ.

ಫೆಡರಲ್, ಯೂನಿಟರಿ, ರಿಟರ್ನ್, ಅನ್ ರಿಟರ್ನ್ ಸಂವಿಧಾನಗಳು ವಿಶ್ವದಲ್ಲಿವೆ. ನಮ್ಮದು ರಿಟರ್ನ್ (ಲಿಖಿತ) ಸಂವಿಧಾನ. ನಮ್ಮ ದೇಶದಲ್ಲಿರುವಷ್ಟು ಜಾತಿ, ಧರ್ಮಗಳು ಬೇರೆ ಯಾವ ದೇಶದಲ್ಲೂ ಇಲ್ಲ. ಹೀಗಾಗಿ ಈ ನೆಲಕ್ಕೆ ಒಪ್ಪಿಗೆಯಾಗುವ ಸಂವಿಧಾನವನ್ನು ಅಂಬೇಡ್ಕರ್ ಕೊಟ್ಟರು.

ಮನುವಾದಿಗಳು ಸಂವಿಧಾನ ಅಂಬೇಡ್ಕರ್ ಅವರಿಂದ ಆಗಿಲ್ಲ ಎಂದು ವಾದಿಸುತ್ತಾರೆ. ಆದರೆ ಅಂಬೇಡ್ಕರ್ ಅವರೇ ಸಂವಿಧಾನ ಶಿಲ್ಪಿ ಎನ್ನುವುದನ್ನು ಮರೆಯಬಾರದು. ಅಂಬೇಡ್ಕರ್ ಅವರಿಗೆ ಈ ದೇಶದ ಜಾತಿ ವ್ಯವಸ್ಥೆ ಮತ್ತು ಅಪಾಯಗಳು ಅಂಬೇಡ್ಕರ್ ಅವರಿಗೆ ಅರ್ಥ ಆಗಿತ್ತು. ಅದಕ್ಕೇ ನಮ್ಮ ಸಂವಿಧಾನದಲ್ಲಿ ಮೀಸಲಾತಿಯನ್ನು ಸೇರಿಸಿದರು.

ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಆಶಯ. ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ಸಂವಿಧಾನದ ಆಶಯ ಈಡೇರಿಲ್ಲ. ಬಸವಣ್ಣನವರಾದಿಯಾಗಿ ಎಲ್ಲಾ ಮಹಾತ್ಮರೂ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದರೂ ಪಟ್ಟ ಭದ್ರರು ಜಾತಿ ಹೋಗಲು ಬಿಡುತ್ತಿಲ್ಲ ಎಂದರು.

ಕೆಳ ಜಾತಿಯ ಶೂದ್ರ ವರ್ಗದವರಿಗೆ ಆರ್ಥಿಕ ಶಕ್ತಿ ಬಂದಾಗ ಮಾತ್ರ ಜಾತಿ ದುರ್ಬಲವಾಗುತ್ತದೆ.ಸಂವಿಧಾನ ಸಭೆಯಲ್ಲಿ ಅಂಬೇಡ್ಕರ್ ಮಾಡಿದ ಕೊನೆಯ ಭಾಷಣವನ್ನು, ಈ ಭಾಷಣದ ಎಚ್ಚರಿಕೆಯ ಮಾತುಗಳನ್ನು ಪ್ರತಿಯೊಬ್ಬರೂ ಮನವರಿಕೆ ಮಾಡಿಕೊಳ್ಳಬೇಕು ಎಂದರು ಹೇಳಿದರು.

ಅಸಮಾನತೆ ಇರುವ ದೇಶದಲ್ಲಿ ಸಮಾನತೆ ಸುಲಭವಾಗಿ ಬರುವುದಿಲ್ಲ. ದಲಿತರನ್ನು, ಶೂದ್ರರನ್ನು ಹಿಂದುಳಿದವರನ್ನು, ಮುಸ್ಲೀಮರನ್ನು, ಅಲ್ಪಸಂಖ್ಯಾತರನ್ನು ದ್ವೇಷಿಸಿ ಎಂದು ನಮ್ಮ ಧರ್ಮವೂ ಹೇಳುವುದಿಲ್ಲ. ಯಾವ ಧರ್ಮವೂ ಹೇಳುವುದಿಲ್ಲ.

ಸಂವಿಧಾನ ಅಂಗೀಕಾರಕ್ಕೆ 285 ಮಂದಿ ಸದಸ್ಯರಲ್ಲಿ 284 ಮಂದಿ ಪೂರ್ತಿ ಸಹಿ ಹಾಕಿದರು. ಒಬ್ಬರು ಮಾತ್ರ ಹಾಕಲಿಲ್ಲ. ಹೀಗಾಗಿ ಬಹುತೇಕ ಎಲ್ಲರಿಗೂ ಒಪ್ಪಿಗೆ ಆಗುವಂತಹ ಸಂವಿಧಾನವನ್ನು ಡಾ.ಬಿ.ಆರ್. ಅಂಬೇಡ್ಕರ್ ರವರು ರಚಿಸಿದರು.

ಸಂವಿಧಾನದ ಸಮಾನತೆಯ ಆಶಯವನ್ನು ಈಡೇರಿಸುವ ಸಲುವಾಗಿಯೇ ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಹಲವು ಭಾಗ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದೆ. ತುತ್ತು ಅನ್ನಕ್ಕಾಗಿ ಯಾರೂ ಯಾರ ಮನೆ ಮುಂದೆಯೂ ನಿಲ್ಲಬಾರದು ಎನ್ನುವ ಆಶಯದಿಂದ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಯಾರ ಮನೆ ಮಕ್ಕಳೂ ಬರಿಗಾಲಲ್ಲಿ ಶಾಲೆಗೆ ಹೋಗಬಾರದು ಎನ್ನುವ ಕಾರಣದಿಂದ ಶೂ ಭಾಗ್ಯ, ಎಲ್ಲಾ ಭಾಗ್ಯಗಳ ಹಿಂದೆ ಹಾಗೂ ಈಗ ಜಾರಿ ಮಾಡಿರುವ ಐದೂ ಗ್ಯಾರಂಟಿಗಳ ಹಿಂದೆ ಅಸಮಾನತೆ ನಿವಾರಿಸುವ ಮತ್ತು ಸರ್ವರಿಗೂ ಆರ್ಥಿಕ ಶಕ್ತಿ ಬರಲಿ ಎನ್ನುವ ಆಶಯ ಇದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರು ಮಾತನಾಡಿ, ಶ್ರೇಷ್ಠವಾದ ಸಂವಿಧಾನ ಜಾರಿಗೆ ಬಂದು 76 ವರ್ಷಗಳಾಯಿತು.  ಇಂದು 76ನೇ ಸಂವಿಧಾನ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.   ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಮತ್ತು ವಿವಿಧ ರಂಗಗಳಲ್ಲಿ ಅನೇಕ ಅಭಿವೃದ್ಧಿಗಳನ್ನು ಕಂಡಿದ್ದೇವೆ. ಆದರೂ ಸಂವಿಧಾನ ಬಯಸಿದಂತಹ ಪರಿಪೂರ್ಣ ಅಭಿವೃದ್ಧಿಯನ್ನು ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂದರು.

1949 ಜನವರಿ 25ರಂದು ಈ ಸಂವಿಧಾನವನ್ನು ಸಮರ್ಪಿಸುವ ಒಂದು ದಿನ ಮುಂಚೆ ಸಂವಿಧಾನ ಉದ್ದೇಶಿಸಿ ಮಾಡಿದ ಭಾಷಣ ಐತಿಹಾಸಿಕವಾದುದು.  ಆ ಭಾಷಣದ ತಿರುಳು ಭಾರತದ ಪ್ರತಿಯೊಬ್ಬ ಪ್ರಜೆಗೂ ಅರ್ಥವಾಗಬೇಕು. ನಮ್ಮ ದೇಶದ ಭೌಗೋಳಿಕ ಮತ್ತು ಸಾಂಸ್ಕೃತಿಕ ಜನ ಜೀವನ ವೈವಿಧ್ಯಮಯ ಜೀವನದಿಂದ ಕೂಡಿದೆ.  ಇದರ ಮಹತ್ವವೆ ಬಹುತ್ವದ ಭಾರತ. ಬಹು ಸಂಸ್ಕೃತಿ, ಭಾಷೆಯನ್ನು , ವಿವಿಧ ಸಾಂಸ್ಕೃತಿಕ ಚಟವಟಿಕೆ ಹೊಂದಿರುವ ಭಾರತ ದೇಶ. ಇಂತಹ ದೇಶದಲ್ಲಿ ನಮ್ಮ ಸಂವಿಧಾನವನ್ನು ಓದುವಾಗ ಮೊದಲನೆ ಪದವೇ  ಭಾರತೀಯ ಪ್ರಜೆಗಳಾದ ನಾವು  ಅದನ್ನು ಸಂಬೋಧನೆ ಮಾಡಿರುವುದು, ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ಸಂದೇಶ ಹೊಂದಿದೆ ಎಂದರು.

ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ಶ್ರಮವಹಿಸಿದ್ದಾರೆ.   ಸಮಾಜ ಕಲ್ಯಾಣ ಸಚಿವರು ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಆದಿ ಜಾಂಬವ ನಿಗಮದ ಅಧ್ಯಕ್ಷ ಜಿ.ಎನ್.ಮಂಜುನಾಥ್, ಬೋವಿ ನಿಗಮದ ಅಧ್ಯಕ್ಷ ರಾಮಪ್ಪ, ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಪಲ್ಲವಿ, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್ ಡಿ, ಆಯುಕ್ತರಾದ ಡಾ.ರಾಕೇಶ್ ಕುಮಾರ್ ಡಿ., ಶಾಲಾ ಮಕ್ಕಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. 


Share

You cannot copy content of this page