ಸಮಗ್ರ ಸುದ್ದಿ

ಬಿಎಚ್‌ಇಎಲ್ ನಿಂದ ಕೆರೆಗಳ ಮೇಲೆ ಫ್ಲೋಟಿಂಗ್‌ ಸೋಲಾರ್‌ ವಿದ್ಯುತ್‌ ಘಟಕ ಸ್ಥಾಪನೆಯ ಕಾರ್ಯಸಾಧ್ಯತಾ ವರದಿ ಸಲ್ಲಿಕೆ – ಅನುಷ್ಠಾನಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವ ಎನ್‌ಎಸ್‌ ಭೋಸರಾಜು ಸೂಚನೆ

Share

ಬೆಂಗಳೂರು: ಬಿಎಚ್‌ಇಎಲ್‌ ಸಲ್ಲಿಸಿರುವ ಕೆರೆಗಳ ಮೇಲೆ ಫ್ಲೋಟಿಂಗ್‌ ಸೋಲಾರ್‌ ಅಳವಡಿಸುವ ಕಾರ್ಯಸಾಧ್ಯತಾ ವರದಿಯನ್ನು ಪರಿಶೀಲಿಸಿ ಅಂತಿಮ ರೂಪರೇಷೆ ಸಿದ್ದಪಡಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿಕಾಸಸೌಧದ ತಮ್ನ ಕಚೇರಿಯಲ್ಲಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಗಳು, ಬೆಸ್ಕಾಂ ಎಂಡಿ, ಕ್ರೆಡೆಲ್‌ ಎಂಡಿ ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಸೂಚನೆ ನೀಡಿದರು.

ಏತ ನೀರಾವರಿ ಯೋಜನೆಗಳಿಗೆ ತಗಲುತ್ತಿರುವ ಬೃಹತ್ ವಿದ್ಯುತ್ ವೆಚ್ಚದ ಹೊರೆ ಇಳಿಸಲು ಹಾಗೂ ಹಸಿರು ಇಂಧನ (Green Energy) ಬಳಕೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ, ರಾಜ್ಯದ ಕೆರೆಗಳ ಮೇಲೆ ‘ತೇಲುವ ಸೌರ ವಿದ್ಯುತ್ ಘಟಕ’ಗಳನ್ನು (Floating Solar Plants) ಸ್ಥಾಪಿಸುವ ಕುರಿತು ಕಾರ್ಯಸಾಧ್ಯತಾ ವರದಿಯನ್ನು ನೀಡುವಂತೆ ಬಿಎಚ್‌ಇಎಲ್‌ ಗೆ ಸೂಚನೆ ನೀಡಲಾಗಿತ್ತು.

ಬಿಎಚ್‌ಇಎಲ್‌ ಅಧಿಕಾರಿಗಳು 6 ತಿಂಗಳಿಗೂ ಹೆಚ್ಚು ಕಾಲ ಅಧ್ಯಯನ ನಡೆಸಿ, ಕೋಲಾರ ಜಿಲ್ಲೆಯ ಸೋಮಂಬುದಿ ಅಗ್ರಹಾರ ಕೆರೆಯಲ್ಲಿ ಪ್ರಾಯೋಗಿಕವಾಗಿ ತೇಲುವ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಿ 100 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ ಇರುವ ಸಾಧ್ಯತೆಗಳ ಕುರಿತು ಬಿಎಚ್‌ಇಎಲ್ (BHEL) ಈ ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯ ಬಗ್ಗೆ ಸಭೆಯಲ್ಲಿ ವಿಸ್ತ್ರತ ವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಸಚಿವ ಎನ್‌ ಎಸ್‌ ಭೋಸರಾಜು ಮಾತನಾಡಿ, ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ನೂರಾರು ಏತ ನೀರಾವರಿ ಯೋಜನೆಗಳನ್ನು ನಿರ್ವಹಿಸಲು ಭಾರಿ ಪ್ರಮಾಣದ ವಿದ್ಯುತ್ ಬಳಕೆಯಾಗುತ್ತಿದ್ದು, ಇದು ಇಲಾಖೆಯ ಬೊಕ್ಕಸದ ಮೇಲೆ ತೀವ್ರ ಆರ್ಥಿಕ ಹೊರೆ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ, ವೆಚ್ಚ ಕಡಿತಗೊಳಿಸಲು ಸುಸ್ಥಿರ ಹಾಗೂ ಪರ್ಯಾಯ ಇಂಧನ ಮೂಲಗಳ (Sustainable energy sources) ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಯೋಜನೆ ಅನುಷ್ಠಾನದ ವಿವಿಧ ಮಾದರಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಸಚಿವ ಬೋಸರಾಜು ಅವರು, ಬಿಎಚ್‌ ಇಎಲ್ ನೀಡಿರುವ ವರದಿಯನ್ನು ತಾಂತ್ರಿಕವಾಗಿ ಮರು-ಪರಿಶೀಲಿಸುವಂತೆ ಸೂಚಿಸಿದರು. ಯೋಜನೆಗೆ ಮುಂದಿನ ಹಂತದ ರೂಪುರೇಷೆಗಳನ್ನು ಸಿದ್ಧಪಡಿಸಿ, ಅಂತಿಮ ತೀರ್ಮಾನ ಹಾಗೂ ಶಿಫಾರಸುಗಳನ್ನು ನೀಡುವಂತೆ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳು, ಬೆಸ್ಕಾಂ ಮತ್ತು ಕ್ರೆಡಲ್ (KREDL) ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಈ ಉನ್ನತ ಮಟ್ಟದ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಕೆ ಪವಿತ್ರ, ಬೆಸ್ಕಾಂ ಎಂಡಿ ಶಿವಶಂಕರ್‌, ಕ್ರೆಡಲ್ ಎಂಡಿ ರುದ್ರಪ್ಪಯ್ಯ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page