ಸಮಗ್ರ ಸುದ್ದಿ

ಸೋಂಪುರ ಕೆರೆ ಉಳಿವಿಗೆ ಐತಿಹಾಸಿಕ ಹೆಜ್ಜೆ: 11.62 ಕೋಟಿ ರೂ. ವೆಚ್ಚದ ಒಳಚರಂಡಿ ನೀರು ಪಂಪಿಂಗ್ ಘಟಕಕ್ಕೆ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಚಾಲನೆ

Share

ಬೆಂಗಳೂರು : ಜಲಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿರುವ ಎಂಟು ಎಂಎಲ್‌ಡಿ ಸಾಮರ್ಥ್ಯದ ಒಳಚರಂಡಿ ನೀರು ಪಂಪಿಂಗ್‌ ಸ್ಟೇಷನ್‌ ಕಾಮಗಾರಿ ಸೋಂಪುರ ಕೆರೆಯ ಸಂರಕ್ಷಣೆಯಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಮಾನ್ಯ ಕರ್ನಾಟಕ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ತಿಳಿಸಿದರು.

ಸೋಂಪುರ ಕೆರೆಯ ಉಳಿವು ಮತ್ತು ಅಂತರ್ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಜಲಮಂಡಳಿಯ ವತಿಯಿಂದ 8 ಎಂಎಲ್‌ಡಿ (MLD) ಸಾಮರ್ಥ್ಯದ ‘ಮಧ್ಯಂತರ ಒಳಚರಂಡಿ ನೀರು ಪಂಪಿಂಗ್ ಸ್ಟೇಷನ್’ (ISPS) ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ನೀಡಿ ಮಾತನಾಡಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಈ ಯೋಜನೆಯನ್ನು ಇಲಾಖೆಗಳ ಸಮನ್ವಯದಿಂದ ತ್ವರಿತವಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಸಾರ್ವಜನಿಕರ ಒಳಿತಿಗಾಗಿ ಸರ್ಕಾರಿ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿದರೆ ಏನನ್ನು ಸಾಧಿಸಬಹುದು ಎಂಬುದಕ್ಕೆ ಈ ಯೋಜನೆಯು ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಈ ಯೋಜನೆಯಿಂದ ಕಲುಷಿತ ನೀರನ್ನು ತಡೆದು ಸಂಸ್ಕರಣಾ ಘಟಕಕ್ಕೆ ಪಂಪ್ ಮಾಡುವ ಮೂಲಕ, ತ್ಯಾಜ್ಯ ನೀರು ಸೋಂಪುರ ಕೆರೆಗೆ ಸೇರುವುದನ್ನು ಸಂಪೂರ್ಣವಾಗಿ ತಪ್ಪಿಸಲಾಗುತ್ತದೆ. ಇದರಿಂದ ಕೆರೆಯ ಪರಿಸರ ವ್ಯವಸ್ಥೆ ಉಳಿಯಲಿದೆ. ಶುದ್ಧ ಕೆರೆಗಳಿಂದ ಅಂತರ್ಜಲ ಮಟ್ಟ ಸುಧಾರಿಸುತ್ತದೆ ಹಾಗೂ ಸುತ್ತಮುತ್ತಲಿನ ಸಮುದಾಯಗಳಿಗೆ ಸುಸ್ಥಿರ ನೀರಿನ ಮೂಲವನ್ನು ಒದಗಿಸುತ್ತದೆ. ಅತ್ಯಾಧುನಿಕ ಒಳಚರಂಡಿ ನಿರ್ವಹಣೆಯಿಂದಾಗಿ ಲಿಂಗಧೀರನಹಳ್ಳಿ ಮತ್ತು ಸೋಂಪುರ ಪ್ರದೇಶಗಳಲ್ಲಿ ಜಲಜನ್ಯ ರೋಗಗಳ ಹರಡುವಿಕೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಹೇಳಿದರು.

ಕೆರೆಯ ಉಳಿವಿಗೆ ಪೂರಕವಾಗಿ, ಐಎಸ್‌ಪಿಎಸ್ ಯೋಜನೆಗೆ ಅನುಕೂಲವಾಗುವಂತೆ ಕಂದಾಯ ಇಲಾಖೆಯು ಅಗತ್ಯ ಭೂಮಿಯನ್ನು ಹಸ್ತಾಂತರಿಸುವ ಮೂಲಕ ಮಹತ್ವದ ಪಾತ್ರವಹಿಸಿದೆ. ಅಲ್ಲದೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ‘ಠೇವಣಿ ಕೊಡುಗೆ ನಿಧಿ’ಯ (Deposit Contribution Fund) ಮೂಲಕ ಜಲಮಂಡಳಿಯು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ಯೋಜನೆಯ ಕುರಿತು ತಿಳಿಸಿದರು.

ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ಅವರು ಮಾತನಾಡಿ, ಪರಿಸರ ಸಂರಕ್ಷಣೆ ಮತ್ತು ಆಡಳಿತಾತ್ಮಕ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಾನ್ಯ ಲೋಕಾಯುಕ್ತರ ನಿರ್ದೇಶನದಂತೆ ಈ ಕಾಮಗಾರಿಗೆ ಚಾಲನೆ ದೊರೆತಿದೆ. ಲೋಕಾಯುಕ್ತರ ಪರಿಸರ ಕಾಳಜಿ ಮೆಚ್ಚುವಂಥದ್ದು, ಅವರ ಮುತುವರ್ಜಿಯಿಂದ ಯೋಜನೆಗೆ ವೇಗ ಸಿಗಲಿದೆ. ಇಂತಹ ಮಹತ್ವದ ಯೋಜನೆಗೆ ಲೋಕಾಯುಕ್ತರಿಂದ ಸಿಕ್ಕ ಸಹಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಕೆರೆಯ ಉಳಿವು ಮತ್ತು ಅಂತರ್ಜಲ ಸಂರಕ್ಷಣೆಯ ನಿಟ್ಟಿನಲ್ಲಿ ಜಲಮಂಡಳಿಯ ಸ್ಪಂದನೆಗೆ ಲೋಕಾಯುಕ್ತರು ಪ್ರಶಂಸಿದ್ದಕ್ಕಾಗಿ ಜಲಮಂಡಳಿ ಅಭಾರಿಯಾಗಿದೆ ಎಂದು ಕೃತಜ್ಞತೆಯನ್ನು ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅಭಿಯಂತರರಾದ ರಾಜೀವ್, ಉಪ ಮುಖ್ಯ ಅಭಿಯಂತರರಾದ ಸುಧೀರ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page