ಸಮಗ್ರ ಸುದ್ದಿ

ಮೈಸೂರು ಸೀರೆಗಳ ಖರೀದಿಗೆ ಆನ್ ಲೈನ್ ವ್ಯವಸ್ಥೆ- ಸಚಿವ ಕೆ. ವೆಂಕಟೇಶ್

Share

ಬೆಂಗಳೂರು :ಮೈಸೂರು ಸಿಲ್ಕ್ ಸೀರೆಗಳನ್ನು ಖರೀದಿಸಲು ಆನ್ ಲೈನ್ ವ್ಯವಸ್ಥೆ ಮಾಡಲಾಗಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ. ವೆಂಕಟೇಶ್ ಅವರು ತಿಳಿಸಿದರು.

ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನಸಭೆ ಶಾಸಕರಾದ ಶ್ರೀವತ್ಸ್. ಟಿ. ಎಸ್ ಅವರ  ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರ್ವಜನಿಕರು ಬೆಳಗಿನ ಜಾವದಿಂದಲೇ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ಮೈಸೂರು ಸಿಲ್ಕ್ ಸೀರೆ ಕೊಂಡುಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು,  ಸೀರೆ ಮಾರಾಟನ್ನು ಸರಳಗೊಳಿಸುವ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಮೈಸೂರು ಸಿಲ್ಕ್ ಸೀರೆಗಳ ಬೇಡಿಕೆಯು ಗಣನೀಯವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೀರೆ ಮಾರಾಟವನ್ನು ಸರಳಗೊಳಿಸಲು ಮತ್ತು ಗ್ರಾಹಕರಿಗೆ ಸೀರೆಗಳನ್ನು ದೊರಕಿಸಲು ರೇಷ್ಮೆ ನೇಯ್ಗೆ ಕಾರ್ಖಾನೆಯ ಸಂಯೋಜಿತ ರೇಷ್ಮೆ ನೇಯ್ಗೆ ಘಟಕ -2 ರಲ್ಲಿ 10 ಇ-ಜಕಾರ್ಡ್ ಮಗ್ಗಗಳನ್ನು ಮತ್ತು ಚನ್ನಪಟ್ಟಣದ ರೇಷ್ಮೆ ನೇಯ್ಗೆ ಘಟಕದಲ್ಲಿ 20 ಇ-ಜಕಾರ್ಡ್ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಈ ಯಂತ್ರಗಳು ಈಗಾಗಲೇ ಚಾಲನೆಯಲ್ಲಿದೆ. ಈ ಯಂತ್ರಗಳಿಂದ ಹೆಚ್ಚುವರಿ ಉತ್ಪಾದನೆ ಅಂದರೆ ಪ್ರತಿ ತಿಂಗಳಿಗೆ 7500 ಮೀಟರ್ ನಷ್ಟು ಉತ್ಪಾದಿಸಲಾಗುತ್ತಿದೆ ಎಂದು ಮಾಹಿತಿ ತಿಳಿಸಿದರು.

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದಲ್ಲಿ ಕಳೆದ ಮೂರು ವರ್ಷಗಳಿಂದ ಒಟ್ಟು 3,10,667 ಸೀರೆಗಳು ತಯಾರಾಗಿದ್ದು, ಈ ಪೈಕಿ 3,09,659 ಸೀರೆಗಳು ಮಾರಾಟವಾಗಿದ್ದು, 2022-23, 2023-24, ಮತ್ತು 2024-25 ನೇ ಸಾಲಿನಲ್ಲಿ ಕ್ರಮವಾಗಿ ರೂ. 101.15 ಕೋಟಿ, ರೂ. 73.40 ಕೋಟಿ ಮತ್ತು ರೂ. 101.15 ಕೋಟಿ ಲಾಭ ಗಳಿಸಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.


Share

You cannot copy content of this page