ಸಮಗ್ರ ಸುದ್ದಿ

ರಾಜ್ಯದ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರ ಬದ್ಧ – ಸಚಿವ ಎಸ್ ಮಧು ಬಂಗಾರಪ್ಪ | 15,000 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

Share

ಬೆಂಗಳೂರು:ರಾಜ್ಯದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಕರ ಕೊರತೆ ನೀಗಿಸುವಿಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಸರ್ಕಾರವು ನಿರಂತರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್ ಮಧು ಬಂಗಾರಪ್ಪ ತಿಳಿಸಿದರು

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಹೆಚ್.ಎಸ್.ಗೋಪಿನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 1462 ಸರ್ಕಾರಿ ಶಾಲೆಗಳಿದ್ದು, ಇವುಗಳಲ್ಲಿ 2,21,145 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂಲಸೌಕರ್ಯಗಳ ಕೊರತೆಯಿಂದಾಗಿ ಯಾವುದೇ ಶಾಲೆಯು ಮುಚ್ಚುವ ಸ್ಥಿತಿಗೆ ತಲುಪಿಲ್ಲ ಎಂದು ತಿಳಿಸಿದರು.

ಶೈಕ್ಷಣಿಕ ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು, ಶಿಕ್ಷಕರ ಕೊರತೆ ಇರುವ ಕಡೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. 2025-26ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 1380 ಮತ್ತು ಪ್ರೌಢಶಾಲೆಗಳಲ್ಲಿ 180 ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ.

15,000 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ:

ದೀರ್ಘಕಾಲೀನ ಪರಿಹಾರವಾಗಿ, ಕಲ್ಯಾಣ ಕರ್ನಾಟಕ ಭಾಗದ 5267 ಹುದ್ದೆಗಳು ಮತ್ತು ರಾಜ್ಯದ ಇತರ ಭಾಗಗಳ 5000 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 2026-27ನೇ ಸಾಲಿನಲ್ಲಿ ರಾಜ್ಯದಾದ್ಯಂತ 15,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಗುಣಮಟ್ಟದ ಶಿಕ್ಷಣ ಮತ್ತು ಆಧುನಿಕರಣ:

2025-26ರವರೆಗೆ 9522 ಸರ್ಕಾರಿ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗೆ ದ್ವಿಭಾಷಾ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ‘ಕರ್ನಾಟಕ ಪಬ್ಲಿಕ್ ಶಾಲೆ’ಗಳನ್ನು (KPS) ಸ್ಥಾಪಿಸಲಾಗುತ್ತಿದೆ. 2025-26ರಲ್ಲಿ 500 ಹೊಸ ಕೆ.ಪಿ.ಎಸ್. ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

2026-27ನೇ ಸಾಲಿನಿಂದ 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ, 6ನೇ ತರಗತಿಯಿಂದ ವೃತ್ತಿಪರ ಕೌಶಲ ಆಧಾರಿತ ಶಿಕ್ಷಣ ಹಾಗೂ 8ನೇ ತರಗತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮರ್ಥ್ಯ ಅಭಿವೃದ್ಧಿ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ STEAM (Science, Technology, Engineering, Arts, Mathematics) ಶಿಕ್ಷಣ, ಎಐ (ಕೃತಕ ಬುದ್ಧಿಮತ್ತೆ) ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲಾಗುತ್ತಿದೆ.

2024-25ನೇ ಸಾಲಿನಲ್ಲಿ ಮೂಲಸೌಕರ್ಯಗಳ ಕೊರತೆ ಇರುವ ಶಾಲೆಗಳ ಅಭಿವೃದ್ಧಿಗಾಗಿ ರಾಜ್ಯ ವಲಯ ಕಾರ್ಯಕ್ರಮಗಳಡಿಯಲ್ಲಿ ರೂ. 45,563.68 ಲಕ್ಷಗಳು ಮತ್ತು ಸಮಗ್ರ ಶಿಕ್ಷಣ ಕರ್ನಾಟಕ, ಕೆ.ಎಂ.ಆರ್.ಡಿ. ಯೋಜನೆಗಳಡಿಯಲ್ಲಿ ರೂ. 12,479.89 ಲಕ್ಷಗಳನ್ನು ಮೀಸಲಿಡಲಾಗಿದೆ.

ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಮತ್ತು ಮಕ್ಕಳ ಕಲಿಕೆಯನ್ನು ಸುಧಾರಿಸಲು ತರಗತಿವಾರು, ವಿಷಯವಾರು ಮೌಲ್ಯಮಾಪನ ಮತ್ತು ಪೋಷಕರ ಸಭೆಗಳಂತಹ ಕಾರ್ಯಕ್ರಮಗಳನ್ನು ಸರ್ಕಾರ ನಿರಂತರವಾಗಿ
ನಡೆಸುತ್ತಿದೆ ಎಂದು ಸಚಿವರು ತಿಳಿಸಿದರು.


Share

You cannot copy content of this page