ಸಮಗ್ರ ಸುದ್ದಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಭಾಗಿತ್ವದಲ್ಲಿ ಪರಮ್ ಸೈನ್ಸ್ ಸಿಟಿ ಪ್ರದರ್ಶನ ಕೇಂದ್ರ | ಹಸಿರಿನ ನಡುವೆ ಗಣಿತದ ರಹಸ್ಯ, ಪಾರ್ಕ್‌ನೊಳಗೆ ವಿಜ್ಞಾನದ ಸ್ಪರ್ಶ

Share

ಬೆಂಗಳೂರು : ಗಿಡ-ಮರಗಳ ನಡುವೆ ಮಕ್ಕಳಾಟಕ್ಕೆ ಸೀಮಿತವಾಗಿದ್ದ ಉದ್ಯಾನವನವೀಗ ಜ್ಞಾನದ ಭಂಡಾರವಾಗಿ ಬದಲಾಗಲಿದೆ. ಬೆಂಗಳೂರಿನ ಜೆ.ಪಿ. ನಗರದ 2ನೇ ಹಂತದಲ್ಲಿರುವ ಧನ್ವಂತರಿ ಉದ್ಯಾನವನದಲ್ಲಿ “ಪರಮ್ ಸೈನ್ಸ್ ಸಿಟಿ” (Param Science City) ಸಾರ್ವಜನಿಕರ ಪ್ರವೇಶಕ್ಕೆ ಸಿದ್ಧಗೊಳ್ಳುತ್ತಿದೆ. ಕೇವಲ ಪುಸ್ತಕಗಳಲ್ಲಿ ಓದುತ್ತಿದ್ದ ವಿಜ್ಞಾನದ ಸಂಕೀರ್ಣ ಪ್ರಯೋಗಗಳನ್ನು ಇಲ್ಲಿ ನೇರವಾಗಿ ನೋಡಿ, ಸ್ಪರ್ಶಿಸಿ ಕಲಿಯುವ ಅವಕಾಶ ಕಲ್ಪಿಸಲಾಗುತ್ತಿದೆ. ‘ಪರಮ್ ಸೈನ್ಸ್ ಸಿಟಿ’ ಕೇವಲ ಪ್ರದರ್ಶನ ಕೇಂದ್ರವಲ್ಲ, ಇದು ವಿಜ್ಞಾನವನ್ನು ಜನಸಾಮಾನ್ಯರ ಹತ್ತಿರಕ್ಕೆ ತರುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಪರಮ್ ಫೌಂಡೇಶನ್ ಸಹಭಾಗಿತ್ವ (MoU):

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಪರಮ್ ಫೌಂಡೇಶನ್ ನಡುವಿನ ಒಪ್ಪಂದದ ಫಲವಾಗಿ ಈ ಯೋಜನೆ ರೂಪುಗೊಳ್ಳುತ್ತಿದೆ. ಸೈನ್ಸ್‌ ಪಾರ್ಕ್‌ನ ಜಾಗದಲ್ಲಿ ವಿಜ್ಞಾನ ಕೇಂದ್ರವನ್ನು ಅಭಿವೃದ್ಧಿಪಡಿಸಿ, ಅದರ ಸಮಗ್ರ ನಿರ್ವಹಣೆಯನ್ನು ಪರಮ್ ಫೌಂಡೇಶನ್ ವಹಿಸಿಕೊಳ್ಳುತ್ತಿದೆ. ಸಾರ್ವಜನಿಕ ಆಸ್ತಿಯಾದ ಉದ್ಯಾನವನವನ್ನು ಸುಸ್ಥಿರ ಕಲಿಕಾ ಕೇಂದ್ರವನ್ನಾಗಿ ಮಾಡುವ ಮೂಲಕ ನಾಗರಿಕರಿಗೆ ಉಪಯುಕ್ತ ಮಾಹಿತಿ ನೀಡುವುದು ಇದರ ಮೂಲ ಉದ್ದೇಶವಾಗಿದೆ.

ಹೇಗಿರಲಿದೆ ಈ ವಿಜ್ಞಾನ ಉದ್ಯಾನವನ?
ಉದ್ಯಾನವನದೊಳಗೆ ಪ್ರವೇಶಿಸುತ್ತಿದ್ದಂತೆ ವಿಜ್ಞಾನದ ವಿಶಿಷ್ಟ ಜಗತ್ತು ಅನಾವರಣಗೊಳ್ಳುತ್ತದೆ. ಇಲ್ಲಿ ಮುಕ್ತ ಪರಿಸರದಲ್ಲಿ ವಿಜ್ಞಾನದ ಸೌಂದರ್ಯವನ್ನು ಸಾರುವ ನಾಲ್ಕು ಅದ್ಭುತ ಕಲಾಕೃತಿಗಳು (Exhibits) ಮತ್ತು ಒಂದು ಬೃಹತ್ ಗೋಡೆ (Mural) ನೋಡುಗರನ್ನು ಸ್ವಾಗತಿಸುತ್ತವೆ. ಉದಾಹರಣೆಗೆ, ಇಲ್ಲಿನ ‘ಕ್ವಾಂಟಮ್ ಆಸ್ಟ್ರೋನಾಟ್’ (The Quantum Astronaut) ಶಿಲ್ಪವು ಕ್ವಾಂಟಮ್ ವಿಜ್ಞಾನದ ಸಂಕೀರ್ಣತೆಯನ್ನು ಸರಳವಾಗಿ ವಿವರಿಸುತ್ತದೆ. ಗಣಿತ, ಭೌತಶಾಸ್ತ್ರ ಹಾಗೂ ಪರಿಸರ ಪ್ರಜ್ಞೆಯಂತಹ ವಿಷಯಗಳನ್ನು ಕಲಾತ್ಮಕವಾಗಿ ಬಿಂಬಿಸುವ ಈ ಪ್ರದರ್ಶಿಕೆಗಳು ಧನ್ವಂತರಿ ಪಾರ್ಕ್‌ನ ಶಾಂತಿಯುತ ಪರಿಸರದಲ್ಲಿ ಅನ್ವೇಷಣೆಯ ಹೊಸ ಅನುಭವವನ್ನು ನೀಡಲಿವೆ.

*ವಿಜ್ಞಾನ ಪ್ರೇಮಿಗಳ ಸೆಲ್ಫಿ ಪಾಯಿಂಟ್: ‘I Love Science
ಈ ಸೈನ್ಸ್ ಸಿಟಿಯ ಮತ್ತೊಂದು ಆಕರ್ಷಣೆಯೆಂದರೆ ಅಲ್ಲಿರುವ ಅತ್ಯಂತ ಆಕರ್ಷಕವಾದ “I Love Science” ಎಂಬ ದೊಡ್ಡ ಬೋರ್ಡ್. ಇದು ಕೇವಲ ಬೋರ್ಡ್ ಅಲ್ಲ, ಅಲ್ಲಿಗೆ ಬರುವ ಪ್ರತಿಯೊಬ್ಬರಿಗೂ ವಿಜ್ಞಾನದ ಬಗ್ಗೆ ಹೆಮ್ಮೆ ಮೂಡಿಸುವ ತಾಣವಾಗಿರಲಿದೆ. ಇಡೀ ಆವರಣದಲ್ಲಿ ವಿಜ್ಞಾನದ ಬಗೆಗಿನ ಪ್ರೀತಿಯನ್ನು ಎತ್ತಿ ಹಿಡಿಯಲಿದೆ.

ಸೈನ್‌ ಸಿಟಿ ಉದ್ಘಾಟನೆಗೆ ದಿನಗಣನೆ:
ಈಗಾಗಲೇ ಧನ್ವಂತರಿ ಉದ್ಯಾನವನದಲ್ಲಿ ಸೈನ್‌ ಸಿಟಿ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದ್ದು, ಕೊನೆ ಹಂತದಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಲಿದೆ.


Share

You cannot copy content of this page