ಸಮಗ್ರ ಸುದ್ದಿ

ಕರಡು ಮತದಾರರ ಪಟ್ಟಿ ಪ್ರಕಟಣೆ ಕುರಿತು ರಾಜಕೀಯ ಪಕ್ಷಗಳೊಂದಿಗೆ ಸಭೆ

Share

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಸಿದ್ಧತೆಗಳ ಕುರಿತು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರು ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಕೆ ಎನ್ ರಮೇಶ್ ರವರ ಅಧ್ಯಕ್ಷತೆಯಲ್ಲಿ ಇಂದು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಪ್ರಮುಖ ಸಭೆ ನಡೆಯಿತು.

ಸಭೆಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಲವಾರು ಆಕ್ಷೇಪಣೆಗಳನ್ನು ಹಾಗೂ ಸಲಹೆಗಳನ್ನು ನೀಡಿದರು.

ಸಾರ್ವಜನಿಕ ಜಾಗೃತಿ ಮತ್ತು ಆಕ್ಷೇಪಣೆ

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ತಲುಪಿಲ್ಲ ಎಂದು ರಾಜಕೀಯ ಪಕ್ಷಗಳು ಕಳವಳ ವ್ಯಕ್ತಪಡಿಸಿದವು. ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಧ್ವನಿವರ್ಧಕಗಳ ಮೂಲಕ ಪ್ರಕಟಣೆ (Auto announcement), ಮಾಧ್ಯಮ ಜಾಹೀರಾತು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾಗುವುದು ಹಾಗೂ ಮತದಾರರ ಪಟ್ಟಿಯನ್ನು ಈಗಾಗಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಅವಧಿ ವಿಸ್ತರಣೆಗೆ ಮನವಿ
ಆಕ್ಷೇಪಣೆ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕವನ್ನು ವಿಸ್ತರಿಸುವಂತೆ ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಒಕ್ಕೊರಲ ಮನವಿ ಮಾಡಿದರು.

*ಮತದಾರರ ನೊಂದಣಿ (ನಮೂನೆ-6) *

18 ವರ್ಷ ತುಂಬಿದ ಹೊಸ ಮತದಾರರಿಗೆ ನಮೂನೆ-6 ಅನ್ನು ವಿತರಿಸಲಾಗುತ್ತಿದೆ. ನಕಲಿ ಮತದಾನ ತಡೆಗಟ್ಟಲು, 25 ವರ್ಷ ಮೇಲ್ಪಟ್ಟವರು ಸಲ್ಲಿಸುವ ನಮೂನೆ-6 ಅರ್ಜಿಗಳನ್ನು ಕಟ್ಟುನಿಟ್ಟಾಗಿ ಮರುಪರಿಶೀಲನೆ (Cross-check) ನಡೆಸುವಂತೆ ಕೋರಿದರು.

ಮತಗಟ್ಟೆ ಸ್ಥಳಾಂತರಕ್ಕೆ ಪಟ್ಟು

ಆಡುಗೋಡಿ ವ್ಯಾಪ್ತಿಯಲ್ಲಿ ಮತಗಟ್ಟೆಗಳನ್ನು 2 ಕಿ.ಮೀ ಗಿಂತ ಹೆಚ್ಚು ದೂರಕ್ಕೆ ಸ್ಥಳಾಂತರಿಸಿರುವ ಬಗ್ಗೆ ಸಾರ್ವಜನಿಕರಿಂದ ಅಹವಾಲು ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದರು ಹಾಗೂ ಸನ್ ಸಿಟಿ ಅಪಾರ್ಟ್ಮೆಂಟ್ ನಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯನ್ನು ಸ್ಥಳಾಂತರ ಮಾಡುವಂತೆ ಮನವಿ ಮಾಡಿದರು.

ವಾರ್ಡ್ ಕಚೇರಿಗಳಲ್ಲಿ ಮಾಹಿತಿ:

ಮತದಾರರ ಪಟ್ಟಿಯನ್ನು ಆಯಾ ವಾರ್ಡ್ ಕಚೇರಿಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯ ಇರಿಸುವಂತೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಕೋರಿದರು.

ಮತದಾನದ ಜಾಗೃತಿ
ಅಸಿಂಧು ಮತಗಳನ್ನು ತಡೆಗಟ್ಟಲು ಬ್ಯಾಲೆಟ್ ಪೇಪರ್ ಮತದಾನದ ಕೈಪಿಡಿಗಳನ್ನು ವಿತರಿಸಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಾಕ್ ಪೋಲ್ (Mock Polls) ನಡೆಸಲು ಕೋರಿದರು.

ಅಪರ ಜಿಲ್ಲಾ ಚುನಾವಣಾಧಿಕಾರಿಗಳ ಭರವಸೆ

ಎಲ್ಲಾ ಮತಗಟ್ಟೆಗಳ ವಿವರಗಳ ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ಒದಗಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ನೀಡಿರುವಂತಹ ಆಕ್ಷೇಪಣೆಗಳು ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಹಾಗೂ ರಾಜ್ಯ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಸಾರ್ವಜನಿಕರು ತಮ್ಮ ವಾರ್ಡ್ ಕಚೇರಿ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಕೋರಿದರು.

ಈ ವೇಳೆ ಪ್ರಮುಖ ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಗೂ ಪಾಲಿಕೆಯ ಎಲ್ಲಾ ಮತದಾರರ ನೋಂದಣಾಧಿಕಾರಿಗಳು ಉಪಸ್ಥಿತರಿದ್ದರು.


Share

You cannot copy content of this page