ಸಮಗ್ರ ಸುದ್ದಿ

ಆಸಿಡ್ ದಾಳಿ ಸಂತ್ರಸ್ತರ ಪುನರ್ವಸತಿ ಮತ್ತು ಪರಿಹಾರಕ್ಕೆ ಸರ್ಕಾರ ಬದ್ಧ

Share

​ಬೆಂಗಳೂರು: ಆಸಿಡ್ ದಾಳಿಯಂತಹ ಅಮಾನವೀಯ ಕೃತ್ಯಗಳ ಸಂತ್ರಸ್ತರಿಗೆ ನ್ಯಾಯ ಒದಗಿಸಲು, ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಮತ್ತು ಅವರ ಬದುಕನ್ನು ಮತ್ತೆ ಕಟ್ಟಿಕೊಡಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನ ಮಾರ್ಗದರ್ಶನದಂತೆ ಸರ್ಕಾರವು ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ಪರಿಷತ್ ಸದಸ್ಯ ಶಿವಕುಮಾರ್ ಕೆ ಅವರ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸುವ ಗೃಹ ಸಚಿವರು, ಸುಪ್ರೀಂ ಕೋರ್ಟ್‌ನ ಆದೇಶದಂತೆ, ರಾಜ್ಯ ಸರ್ಕಾರವು ಸಂತ್ರಸ್ತರಿಗೆ ಆರ್ಥಿಕ ಪರಿಹಾರವನ್ನು ಘೋಷಿಸಿದೆ. ಘಟನೆಯ ತೀವ್ರತೆಯನ್ನು ಆಧರಿಸಿ ತಕ್ಷಣದ ನೆರವು ಮತ್ತು ಮುಂದಿನ ಚಿಕಿತ್ಸೆಗಾಗಿ ಅಗತ್ಯವಿರುವ ಪರಿಹಾರ ಮೊತ್ತವನ್ನು ಸಂತ್ರಸ್ತರ ಕುಟುಂಬಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದ ಯಾವುದೇ ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಆಸಿಡ್ ದಾಳಿಯ ಸಂತ್ರಸ್ತರಿಗೆ ಸಂಪೂರ್ಣ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಬೇಕು ಎಂಬುದು ನಿಯಮ. ಇದರಲ್ಲಿ ಶಸ್ತ್ರಚಿಕಿತ್ಸೆ, ಔಷಧಿಗಳು ಮತ್ತು ದೀರ್ಘಕಾಲೀನ ಪುನರ್ವಸತಿ ವೆಚ್ಚಗಳು ಸೇರಿವೆ.

ಸುಪ್ರೀಂ ಕೋರ್ಟ್‌ನ ಇತ್ತೀಚಿನ ನಿರ್ದೇಶನದಂತೆ, ಸಂತ್ರಸ್ತರಿಗೆ ಸರ್ಕಾರಿ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುವ ಕುರಿತು ಸರ್ಕಾರವು ನೀತಿ ರೂಪಿಸುತ್ತಿದೆ. ಒಂದು ವೇಳೆ ಉದ್ಯೋಗ ನೀಡಲು ತಾಂತ್ರಿಕ ಅಡಚಣೆಗಳಿದ್ದರೆ, ಸಂತ್ರಸ್ತರಿಗೆ ಬದುಕನ್ನು ನಿರ್ವಹಿಸಲು ಸಹಾಯವಾಗುವಂತಹ ಮಾಸಿಕ ಗೌರವಧನ (Subsistence Allowance) ಒದಗಿಸುವ ಕುರಿತಾದ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗುತ್ತಿದೆ.

ಸಂತ್ರಸ್ತರಿಗೆ ತ್ವರಿತ ನ್ಯಾಯ ಒದಗಿಸುವ ದೃಷ್ಟಿಯಿಂದ, ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಲು ಮತ್ತು ಅವರಿಗೆ ಉಚಿತ ಕಾನೂನು ನೆರವು ಒದಗಿಸಲು ನಾಲಸಾ (NALSA) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಸಂತ್ರಸ್ತರಿಗೆ ಆರ್ಥಿಕ ಸಾಮಾಜಿಕ ಭದ್ರತೆಯ ಅಡಿಯಲ್ಲಿ ಮಾಸಿಕ ಪಿಂಚಣಿ ಸೌಲಭ್ಯವನ್ನೂ ನೀಡಲಾಗುತ್ತಿದೆ. ಸದರಿ ಪಿಂಷಣಿಯನ್ನು ಐವತ್ತು ಸಾವಿರ ರೂಪಾಯಿಗಳಿಗೆ ಹೆಚ್ವಿಸಲು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

​ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಆಸಿಡ್ ದಾಳಿ ಪ್ರಕರಣಗಳ ಬಗ್ಗೆ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಜೊತೆಗೆ, ಸಂತ್ರಸ್ತರು ಆತ್ಮಸ್ಥೈರ್ಯದಿಂದ ಜೀವನ ನಡೆಸಲು ಬೇಕಾದ ಸಕಲ ನೆರವನ್ನು ನೀಡಲು ಸರ್ಕಾರ ಕಟಿಬದ್ಧವಾಗಿದೆ. ದಾಳಿಗೊಳಗಾದ ವಿದ್ಯಾರ್ಥಿನಿಯರು ಅಥವಾ ವ್ಯಕ್ತಿಗಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಬಗ್ಗೆ ಕಾಳಜಿ ವಹಿಸಿ, ಅವಶ್ಯಕತೆಗನುಗುಣವಾಗಿ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗ ನೀಡುವ ಉದಾಹರಣೆಗಳೂ ನಮ್ಮ ಮುಂದಿವೆ.

​ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ, ರಾಜ್ಯವು ಆಸಿಡ್ ದಾಳಿ ಪ್ರಕರಣಗಳ ಸಮಗ್ರ ಅಂಕಿಅಂಶ, ಬಾಕಿ ಇರುವ ವಿಚಾರಣೆಗಳು ಮತ್ತು ಸಂತ್ರಸ್ತರ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಮಾನ್ಯ ಗೃಹ ಸಚಿವರು ಪ್ರಸ್ತಾಪಿಸಿದ ವಿಷಯಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಹ ಸಹಮತ ವ್ಯಕ್ತಪಡಿಸಿದರು.

ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ್ ಲಾಡ್ ಅವರು ಕಾರ್ಮಿಕ ಇಲಾಖೆಯಿಂದ ಸಹ ಎರಡು ಲಕ್ಷ ರೂಪಾಯಿ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಸದನದಲ್ಲಿ ತಿಳಿಸಿದರು.

ಪರಿಷತ್ ಸದಸ್ಯ ಶಿವಕುಮಾರ್ ಕೆ ಅವರು ಪ್ರಸ್ತಾಪಿಸಿದ ಗಮನ ಸೆಳೆಯುವ ಸೂಚನೆಗೆ ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ ನಾರಾಯಣ ಸ್ವಾಮಿ, ಶ್ರೀಮತಿ ಭಾರತಿ ಶೆಟ್ಟಿ, ಶ್ರೀಮತಿ ಹೇಮಲತಾ ನಾಯಕ್, ಶ್ರೀಮತಿ ಉಮಾಶ್ರೀ ಸಹ ಅಸಿಡ್ ದಾಳಿಗೆ ಒಳಗಾಗಿರುವ 169 ಜನರ ನೆರವಿಗೆ ಸರ್ಕಾರ ಬರಬೇಕು, ಅವರಿಗೆ ಸೂಕ್ತ ಪರಿಹಾರ ನೀಡುವುದರೊಂದಿಗೆ, ನಿವೇಶನ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ‌ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.


Share

You cannot copy content of this page