ಬೆಂಗಳೂರು: ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಏಪ್ರಿಲ್ ಅಂತ್ಯದೊಳಗಾಗಿ ಪೂರ್ಣಗೊಳಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ವಾರ್ಡ್ ಅಭಿವೃದ್ಧಿಗಾಗಿ 1,000 ಕೋಟಿ ರೂ. ವೆಚ್ಚದಲ್ಲಿ ಹಾಗೂ ವಿಶೇಷ ಮೂಲಭೂತ ಸೌಕರ್ಯಗಳಿಗೆ ಬಂಡವಾಳ ಬೆಂಬಲ ಯೋಜನೆಯಡಿ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳಿಗೆ 1,241 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳು ಮತ್ತು ಸುರಕ್ಷಾ-75 ಜಂಕ್ಷನ್ ಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು ಇಂದು ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಗರದಲ್ಲಿ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳು ಮತ್ತು ವಾರ್ಡ್ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಎಲ್ಲಾ ನಗರ ಪಾಲಿಕೆಗಳಲ್ಲಿ ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು. (ಮಾನ್ ಸೂನ್) ಮಳೆಗಾಲ ಪ್ರಾರಂಭಕ್ಕೂ ಮುಂಚಿತವಾಗಿ ಕಾಲುವೆಗಳಲ್ಲಿ ಹೂಳೆತ್ತುವುದರ ಜೊತೆಗೆ ಡಾಂಬರೀಕರಣ ಕಾರ್ಯವನ್ನು ರಾತ್ರಿ-ಹಗಲು ಕೆಲಸ ಮಾಡಿ ಏಪ್ರಿಲ್ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ಪ್ರಾರಂಭವಾದ ಬಳಿಕ ಛಾಯಾಚಿತ್ರಗಳ ಸಮೇತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಾರದೊಳಗಾಗಿ ಜಂಕ್ಷನ್ ಕಾಮಗಾರಿ ಪ್ರಾರಂಭಿಸಿ:
ನಗರ ಪಾಲಿಕೆಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಸುರಕ್ಷಾ-75 ಯೋಜನೆಯಡಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯೋಜನೆ ಮತ್ತು ಸಮನ್ವಯ ವಿಭಾಗದ ಮುಖ್ಯ ಅಭಿಯಂತರರ ಅಧೀನದಲ್ಲಿರುವ ಅರ್ಬನ್ ಪ್ಲಾನರ್ ಹಾಗೂ ಡಬ್ಲ್ಯೂ.ಆರ್.ಐ. ಅವರೊಂದಿಗೆ ತಪಾಸಣೆ ನಡೆಸಿ, ಜಂಕ್ಷನ್ ಕಾಮಗಾರಿಗಳ ಜಿ.ಎಫ್.ಸಿ (Good For Construction) ನಕ್ಷೆಗಳನ್ನು ಹಾಗೂ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಮುಖ್ಯ ಅಭಿಯಂತರರಿಗೆ ವರದಿ ಸಲ್ಲಿಸಬೇಕು. ಆ ವರದಿಯ ಆಧಾರದ ಮೇಲೆ ಜಂಕ್ಷನ್‌ಗಳ ಉಸ್ತುವಾರಿ ವಹಿಸಿರುವ ಅಧಿಕಾರಿಗಳು ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗಮನಹರಿಸಿ, ಸಾರ್ವಜನಿಕರು ರಸ್ತೆ ದಾಟಲು ಸುರಕ್ಷತೆ ಒದಗಿಸುವಂತೆ ಹಾಗೂ ಸುಗಮವಾಗಿ ಬಳಸುವಂತೆ ಅಭಿವೃದ್ಧಿಪಡಿಸಲು ಕ್ರಮವಹಿಸಬೇಕು.
ಜಂಕ್ಷನ್ ಕಾಮಗಾರಿಗಳ ಗುಣಮಟ್ಟ ಕಾಪಾಡುವ ಕುರಿತು ನಗರ ಪಾಲಿಕೆಗಳ ಹಂತದಲ್ಲಿ ಗುಣನಿಯಂತ್ರಣ ವಿಭಾಗದಿಂದ ಜಂಕ್ಷನ್‌ಗಳ ತಪಾಸಣೆ ನಡೆಸಿ ಕಾಮಗಾರಿಗಳ ಗುಣಮಟ್ಟವನ್ನು ದೃಢೀಕರಿಸಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಮಾತನಾಡಿ, ಈಗಾಗಲೇ ಬಹುತೇಕ ಕಡೆಗಳಲ್ಲಿ ಡಾಂಬರೀಕರಣ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಉಳಿದ ಎಲ್ಲಾ ವಿಭಾಗಗಳಲ್ಲಿಯೂ ಶೀಘ್ರವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸುರಕ್ಷಾ ಜಂಕ್ಷನ್‌ಗಳ ಪೈಕಿ 2 ಕಡೆಗಳಲ್ಲಿ ಈಗಾಗಲೇ ಕೆಲಸ ಪ್ರಾರಂಭಿಸಲಾಗಿದೆ. ಉಳಿದ ಕಡೆಗಳಲ್ಲಿ ವಾರದೊಳಗಾಗಿ ಪ್ರಾರಂಭಿಸದಿದ್ದಲ್ಲಿ ಪ್ರಸ್ತುತ ಇರುವ ಗುತ್ತಿಗೆಯನ್ನು ರದ್ದುಪಡಿಸಿ, ಹೊಸದಾಗಿ ಟೆಂಡರ್ ಕರೆದೂ ಕೂಡಲೇ ಕೆಲಸ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಮಾತನಾಡಿ, ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜಂಕ್ಷನ್‌ಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೆಟ್ರೋ ಕಾಮಗಾರಿಗಳ ಪ್ರಗತಿ ಇರುವ ಕಾರಣ ಕೆಲವೆಡೆ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಉಳಿದ ಕಡೆಗಳಲ್ಲಿ ಶೀಘ್ರಗತಿಯಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಈ ವೇಳೆ ಅಭಿವೃದ್ಧಿ ಅಪರ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಲೋಖಂಡೆ ಸ್ನೇಹಲ್ ಸುಧಾಕರ್, ನವೀನ್ ಕುಮಾರ್, ರಾಜು, ಜಿಬಿಎ ಹಾಗೂ ನಗರ ಪಾಲಿಕೆಗಳ ಎಲ್ಲಾ ಮುಖ್ಯ ಅಭಿಯಂತರರು, ವಿಭಾಗಗಳ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
