ಸಮಗ್ರ ಸುದ್ದಿ

ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು | ಪತ್ರಕರ್ತರಿಗೆ ವೃತ್ತಿಧರ್ಮ ಬಹಳ ಮುಖ್ಯ: ಸಿಎಂ ಸಿದ್ದರಾಮಯ್ಯ

Share

ಬೆಂಗಳೂರು: ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟ ಕಡೆಯ ಮನುಷ್ಯರ ಪರವಾಗಿ ಇದೆಯಾ ಎನ್ನುವ ಬಗ್ಗೆ ಗಮನ ಹರಿಸಿ, ವೃತ್ತಿಧರ್ಮವನ್ನು ಬಹಳ ಮುಖ್ಯವಾಗಿ ಕಾಪಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಕರ್ನಾಟಕ ಮಾಧ್ಯಮ‌ ಅಕಾಡೆಮಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಯ್ಕೆಯಾದ ಪತ್ರಕರ್ತರಿಗೆ “2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು” ವಿತರಿಸಿ, ಸನ್ಮಾನಿಸಿ ಮಾತನಾಡಿದರು.

ಪತ್ರಕರ್ತರೂ ಆಗಿದ್ದ ಮಹಾತ್ಮಗಾಂಧಿಯವರ ಮಾತಿನಂತೆ ಸರ್ವೋದಯ, ಅಂತ್ಯೋದಯದ ಪರವಾಗಿ ಪತ್ರಕರ್ತರು ಇರಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇನ್ನೂ ಅಸಮಾನತೆ ಕಾಣುತ್ತಿದ್ದೇವೆ. ಅಂಬೇಡ್ಕರ್ ಅವರೂ ಪತ್ರಕರ್ತರಾಗಿದ್ದರು.ಈ ಅಸಮಾನತೆ ಹೋಗದೆ ಹೋದರೆ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎನ್ನುವ ಮಾತನ್ನು ಅಂಬೇಡ್ಕರ್ ಹೇಳಿದ್ದನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು.

ನಾನು ನಿತ್ಯ ದಿನಪತ್ರಿಕೆಗಳನ್ನು ಓದಿದ ಬಳಿಕವೇ ಇತರೆ ಕಾರ್ಯಗಳಿಗೆ ಮುಂದಾಗುತ್ತೇನೆ. ಪತ್ರಿಕೆಗಳು ಇನ್ನೂ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ನಾನು ಟಿವಿ ನೋಡುವುದು ಕಡಿಮೆ ಎಂದರು.

ಈಗ ಊಹಾ ಪತ್ರಿಕೋದ್ಯಮದ ಹಾವಳಿ ಹೆಚ್ಚುತ್ತಿದೆ. ಸತ್ಯ ಬರೆಯುವ ಮತ್ತು ಸಂಶೋಧನೆ ನಡೆಸಿ ಬರೆಯುವ ಪತ್ರಕರ್ತರ ಸಂಖ್ಯೆ ಸುಳ್ಳು ಬರೆಯುವ ಪತ್ರಕರ್ತರ ಸಂಖ್ಯೆಗಿಂತ ಹೆಚ್ಚಾಗಬೇಕು ಎಂದು ಕರೆ ನೀಡಿದರು.

ಒಂದು ಗುಂಪು ಅಥವಾ ಒಂದು ಸಿದ್ಧಾಂತಕ್ಕೆ ಮಾರು ಹೋಗದೆ ವಾಸ್ತವಾಂಶಕ್ಕೆ ಕನ್ನಡಿ ಹಿಡಿಯಬೇಕು. ಹೊಸ ತಂತ್ರಜ್ಞಾನದ ಜೊತೆಗೆ ಮಾಧ್ಯಮ ರಂಗ ಮತ್ತು ಪತ್ರಕರ್ತರೂ ತಮ್ಮನ್ನು ತಾವು ಉನ್ನತೀಕರಿಸಿಕೊಳ್ಳಬೇಕು. ಹೊಸ ಸವಾಲುಗಳಿಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಂಡು ಹದಗೊಳ್ಳಬೇಕು ಎಂದರು.

ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ, ಹಿರಿಯ ಸಾಹಿತಿ ಹಂಪನಾ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನಂ, ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ನಾಟಕ ಅಕಾಡೆಮಿ ಅಧ್ಯಕ್ಷರಾದ ನಾಗರಾಜಮೂರ್ತಿ ಉಪಸ್ಥಿತರಿದ್ದರು.


Share

You cannot copy content of this page