ಸಮಗ್ರ ಸುದ್ದಿ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

Share

ಬೆಂಗಳೂರು: ವ್ಯಸನಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಚೇರಿಯಲ್ಲಿ ಸಾರ್ವಜನಿಕರಿಗಾಗಿ ಸ್ಥಾಪಿಸಲಾದ ಸಹಾಯವಾಣಿ (ಹೆಲ್ಪ್‌ಲೈನ್) ವ್ಯವಸ್ಥೆಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ಅವರು ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಸಚಿವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ರಾಜ್ಯದಾದ್ಯಂತ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.

ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆ ವ್ಯಕ್ತಿಯ ಆರೋಗ್ಯ, ಕುಟುಂಬದ ಶಾಂತಿ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವುದರ ಜೊತೆಗೆ ಯುವ ಪೀಳಿಗೆಯ ಭವಿಷ್ಯಕ್ಕೂ ದೊಡ್ಡ ಅಪಾಯವನ್ನುಂಟು ಮಾಡುತ್ತಿದೆ. ಇದಲ್ಲದೆ ಸಮಾಜದಲ್ಲಿ ಹೆಚ್ಚುತ್ತಿರುವ ಅಕ್ರಮ ಮದ್ಯ ಸೇವನೆ, ಅಕ್ರಮ ಮಾರಾಟ ಹಾಗೂ ಮಾದಕ ವಸ್ತುಗಳ ಬಳಕೆಯನ್ನು ತಡೆಯಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಿದೆ. ಈ ಸಂಬಂಧ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮಂಡಳಿಯ ಸಹಾವಾಣಿ ಸಂಖ್ಯೆ: 080-22863230ಗೆ ಕರೆ ಮಾಡಿ ದೂರು ನೀಡಬಹುದು ಎಂದು ಸಚಿವರು ತಿಳಿಸಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಶರಣಪ್ಪ ಸಲಾದಪುರ ಅವರು ಮಾತನಾಡಿ ಸಾರ್ವಜನಿಕರಿಂದ ಬರುವ ದೂರುಗಳು ಮತ್ತು ಮಾಹಿತಿಗಳನ್ನು ಗೌಪ್ಯವಾಗಿ ಪರಿಗಣಿಸಲಾಗುವುದಲ್ಲದೆ, ಸಂಬಂಧಪಟ್ಟವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮದ್ಯ ಮತ್ತು ಮಾದಕ ವಸ್ತುಗಳಿಂದ ಸಮಾಜವನ್ನು ರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ಸಾರ್ವಜನಿಕರು ಜಾಗೃತರಾಗಿದ್ದು ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಧೈರ್ಯವಾಗಿ ಮಾಹಿತಿ ನೀಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ, ಕಲ್ಬುರ್ಗಿ ಡಿ.ಸಿ.ಸಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಸೋಮಶೇಖರ್ ಗೊನಾಯಕ್, ಮಂಡಳಿ ಅಧ್ಯಕ್ಷರ ಕಾರ್ಯದರ್ಶಿ ನರಸಿಂಹಮೂರ್ತಿ, ಮಂಡಳಿ ಕಾರ್ಯದರ್ಶಿ ಎನ್.ಎಸ್. ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


Share

You cannot copy content of this page