ಬೆಂಗಳೂರು:ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಕಂದಾಯ ಭೂಮಿಗಳಲ್ಲಿ ನಿರ್ಮಿಸಲಾಗಿರುವ ಅನಧಿಕೃತ ಬಡಾವಣೆಗಳ ನಿವೇಶನಗಳಿಗೆ ‘ಬಿ’ ಖಾತಾ ನೀಡುವ ಮತ್ತು ತೆರಿಗೆ ವಿಧಿಸುವ ಕುರಿತು ಸರ್ಕಾರವು ಅಗತ್ಯ ಕ್ರಮ ವಹಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಹೆಚ್. ಎಸ್. ಗೋಪಿನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025ರ ಅನ್ವಯ, ಅನುಮೋದಿತವಲ್ಲದ ಲೇಔಟ್‍ಗಳಲ್ಲಿರುವ ನಿವೇಶನ ಹಾಗೂ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ.ಇಂತಹ ಅನಧಿಕೃತ ಆಸ್ತಿಗಳಿಗೆ ಮೊದಲ ವರ್ಷದ ತೆರಿಗೆಯ ಎರಡು ಪಟ್ಟು ದಂಡ ವಿಧಿಸಲಾಗುವುದು. ನಂತರದ ವರ್ಷಗಳಲ್ಲಿ ಸಾಮಾನ್ಯ ತೆರಿಗೆಯನ್ನು ಮಾತ್ರ ಸಂಗ್ರಹಿಸಲಾಗುತ್ತದೆ ಎಂದರು.
ಈ ಆಸ್ತಿಗಳನ್ನು ಪ್ರತ್ಯೇಕ ರಿಜಿಸ್ಟರ್ ನಲ್ಲಿ (ಬಿ-ಖಾತಾ ಮಾದರಿ) ದಾಖಲಿಸಲಾಗುವುದು. ಆದರೆ, ಇದು ಆಸ್ತಿಯನ್ನು ಸಂಪೂರ್ಣವಾಗಿ ಸಕ್ರಮಗೊಳಿಸಿದಂತೆ ಪರಿಗಣಿತವಾಗುವುದಿಲ್ಲ. ಲೇಔಟ್ ವಿನ್ಯಾಸ ಅನುಮೋದನೆ ಇಲ್ಲದಿದ್ದರೂ, ಮೂಲಭೂತ ಸೌಕರ್ಯಗಳನ್ನು ಪಂಚಾಯತ್‍ಗೆ ಹಸ್ತಾಂತರಿಸಿದ ನಿವೇಶನಗಳನ್ನು ಮಾಲೀಕರ ಹೆಸರಿನಲ್ಲಿ ಏಕ ನಿವೇಶನವೆಂದು ಪರಿಗಣಿಸಲು ನಿಯಮ 8(2)(iv) ರಡಿ ಅವಕಾಶ ನೀಡಲಾಗಿದೆ. ಸಾರ್ವಜನಿಕರಿಗೆ ಎದುರಾಗುತ್ತಿರುವ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, 2025ರ ಹೊಸ ನಿಯಮಗಳ ಅಡಿಯಲ್ಲಿ ತುರ್ತು ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
