ಬೆಂಗಳೂರು: ಆಸ್ಪತ್ರೆಗಳಿಗೆ-ವಿದ್ಯಾರ್ಥಿನಿಲಯಗಳಿಗೆ ಆದ್ಯತೆಯ ಮೇರೆಗೆ ವಾಣಿಜ್ಯ ಬಳಕೆಯ ಅನಿಲದ ಸಿಲಿಂಡರ್ ಒದಗಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ವಿಧಾನಪರಿಷತ್‍ನ ಅಧಿವೇಶನದಲ್ಲಿಂದು ಶೂನ್ಯ ವೇಳೆಯಲ್ಲಿ ಸದಸ್ಯರಾದ ಐವನ್ ಡಿಸೋಜ ಹಾಗೂ ಎಂ.ನಾಗರಾಜ ಯಾದವ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು , ಹೋಟೆಲ್‍ನವರು ಒಂದು ವಾರ ತಾಳ್ಮೆಯಿಂದ ಇರಬೇಕಾಗುತ್ತದೆ. ಇಂದು ಸಂಬಂಧಪಟ್ಟ ತೈಲ ಕಂಪನಿಗಳು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದರು.
ವಾಣಿಜ್ಯ ಬಳಕೆಯ ಅನಿಲದ ಪೂರೈಕೆಯಲ್ಲಿ ಸಮಸ್ಯೆಯುಂಟಾಗಿದ್ದು, ಒಂದು ವಾರದೊಳಗೆ ಸಮಸ್ಯೆ ಬಗೆಹರಿಯಲಿದೆ. ಅಲ್ಲಿಯವರೆಗೆ ಹೋಟೆಲ್‍ನವರು ವಿದ್ಯುತ್ ಉಪಯೋಗಿಸುವಂತೆ ಸಲಹೆ ನೀಡಿದರು. ಈಗಾಗಲೇ ಅನಿಲವಿರುವ ಎರಡು ಹಡಗುಗಳು ಬಂದಿದ್ದು, ಇನ್ನು 10 ಹಡಗುಗಳು ಬರುತ್ತಿವೆ. ಕಾಳಸಂತೆಯಲ್ಲಿ ಅನಿಲದ ಸಿಲಿಂಡರ್ ಗಳು ಮಾರಾಟವಾಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
