ಸಮಗ್ರ ಸುದ್ದಿ

ಬೆಂಗಳೂರಿನಿಂದ ಬೀದರ್, ಕಲಬುರಗಿಗೆ ವಿಮಾನಸೇವೆ, 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸಚಿವ ಎಂ.ಬಿ. ಪಾಟೀಲ್ ಸೂಚನೆ

Share

ಬೆಂಗಳೂರು: ಬೆಂಗಳೂರಿನಿಂದ ಬೀದರ್ ಮತ್ತು ಕಲಬುರಗಿಗೆ ವೈಮಾನಿಕ ಸೇವೆ ಆರಂಭಿಸುವ ಬಗ್ಗೆ ವಿಮಾನಯಾನ ಸಂಸ್ಥೆಗಳು ಇದೇ 23ರೊಳಗೆ ತಮ್ಮ ಪ್ರಸ್ತಾವನೆ ಸಲ್ಲಿಸಬೇಕು. ಇದರ ಬಗ್ಗೆ ಮುಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸೋಮವಾರ ವಿವಿಧ ವಿಮಾನಯಾನ ಸಂಸ್ಥೆಗಳೊಂದಿಗೆ ಅವರು ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ರಹೀಂಖಾನ್ ಮತ್ತು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ (ಕೆ.ಕೆ.ಆರ್.ಡಿ.ಬಿ) ಅಧ್ಯಕ್ಷ ಡಾ.ಅಜೇಯ್ ಸಿಂಗ್ ಭಾಗವಹಿಸಿದ್ದರು.

ಈ ಬಗ್ಗೆ ಮಾತನಾಡಿರುವ ಸಚಿವ ಎಂ ಬಿ ಪಾಟೀಲ, `ಕಲಬುರಗಿ ವಿಮಾನ ನಿಲ್ದಾಣದಿಂದ ಈಗ ವಿಮಾನಸೇವೆ ಸ್ತಬ್ಧವಾಗಿದೆ. ಬೀದರಿನಲ್ಲಿ ಕೆ.ಕೆ.ಆರ್.ಡಿ.ಬಿ ನೆರವಿನಿಂದ ದಿನಕ್ಕೆ ಒಂದು ವಿಮಾನ ಮಾತ್ರ ಸಂಚರಿಸುತ್ತಿದೆ. ಕೇಂದ್ರ ಸರಕಾರವು ಪ್ರಾದೇಶಿಕ ಮಟ್ಟದಲ್ಲಿ ವಿಮಾನಯಾನ ಉತ್ತೇಜಿಸಲು ಉಡಾನ್ ಯೋಜನೆ ಮೂಲಕ ಮೂರು ವರ್ಷ ನೆರವು ನೀಡಿತು. ಆ ಅವಧಿ ಮುಗಿದ ನಂತರ ಹೀಗಾಗುತ್ತಿದೆ. ಕಲಬುರಗಿಯಲ್ಲಿ 742 ಎಕರೆಯಲ್ಲಿ ವಿಮಾನ ನಿಲ್ದಾಣವಿದೆ. ಇಂದಿನ ಸಭೆಯಲ್ಲಿ ವೈಮಾನಿಕ ಸೇವೆ ಎಷ್ಟರ ಮಟ್ಟಿಗೆ ಕಾರ್ಯಸಾಧು, ವಿಮಾನ ನಿಲ್ದಾಣಗಳ ಪ್ರಾಧಿಕಾರ ಎರಡೂ ಕಡೆ ಒದಗಿಸಿರುವ ಸೌಲಭ್ಯಗಳ ಕುರಿತು ಚರ್ಚಿಸಿದ್ದಾರೆ.

ಕಲಬುರಗಿಯಲ್ಲಿ ರಾತ್ರಿ ವೇಳೆ ವಿಮಾನ ನಿಲ್ಲಿಸುವ ಸೌಲಭ್ಯ ಸೇರಿದಂತೆ ಎಲ್ಲ ಬಗೆಯ ವಿಮಾನಗಳು ಬಂದಿಳಿಯಲು ಅನುಕೂಲವಿದೆ. ಅಲ್ಲಿಂದ ಬೆಂಗಳೂರು ಮತ್ತು ಉಳಿದ ಅನೇಕ ರಾಜ್ಯಗಳಿಗೆ ದಿನನಿತ್ಯದ ವಿಮಾನಸೇವೆ ಆರಂಭಿಸಬಹುದು ಎಂದು ವಿಮಾನ ಸಂಸ್ಥೆಗಳು ಹೇಳಿವೆ. ಮತ್ತೊಂದು ವಿಮಾನ ಸಂಸ್ಥೆಯು ನಿತ್ಯವೂ ಬೆಂಗಳೂರಿನಿಂದ ಬೆಳಿಗ್ಗೆ ಹೊತ್ತು ಬೀದರಿಗೆ ಮತ್ತು ಸಂಜೆ ಕಲಬುರಗಿಗೆ ವಿಮಾನಸೇವೆ ಆರಂಭಿಸಲು ಯೋಚಿಸುತ್ತಿರುವುದಾಗಿ ಹೇಳಿದೆ. ಜೊತೆಗೆ ಬೆಂಗಳೂರು-ಕಲಬುರಗಿ-ಹೈದರಾಬಾದ್-ಬೆಂಗಳೂರು ಮಾರ್ಗವಾಗಿ ಸೇವೆ ಆರಂಭಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಮುಖ್ಯವಾಗಿ, ವಿಮಾನಯಾನ ಸಂಸ್ಥೆಗಳು ವಿಮಾನಸೇವೆ ವಾಣಿಜ್ಯ ದೃಷ್ಟಿಯಿಂದ ಎಷ್ಟು ಲಾಭದಾಯಕ ಎನ್ನುವುದನ್ನು ನೋಡುತ್ತವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಮಾನಯಾನ ಸೇವೆ ಲಭ್ಯವಾದರೆ ಆರ್ಥಿಕ ಚಟುವಟಿಕೆಗಳು ಗರಿಗೆದರಬಹುದು ಎನ್ನುವ ಲೆಕ್ಕಾಚಾರವಿದೆ ಎಂದು ಪಾಟೀಲ ನುಡಿದಿದ್ದಾರೆ.

ಸಭೆಯಲ್ಲಿ ಇಂಡಿಗೋ, ಏರ್ ಇಂಡಿಯಾ, ಅಲಯನ್ಸ್ ಏರ್, ಸ್ಟಾರ್ ಏರ್, ಆಕಾಶ ಏರ್ ಸಂಸ್ಥೆಯ ಪ್ರತಿನಿಧಿಗಳು, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಆರ್.ವಿಶಾಲ್ ಹಾಗೂ ಕೆಎಸ್ ಐಐಡಿಸಿ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್ ಚೌಧರಿ ಭಾಗವಹಿಸಿದ್ದರು.


Share

You cannot copy content of this page