ಬೆಂಗಳೂರು: ರಾಜ್ಯಾದ್ಯಂತ ಪ್ಲಾಸ್ಟಿಕ್ ಫ್ಲೆಕ್ಸ್, ಬಂಟಿಂಗ್ಸ್ ಮತ್ತು ಜಾಹೀರಾತು ಫಲಕಗಳನ್ನು ನಿಷೇಧಿಸಲಾಗಿದ್ದು, ಅನಧಿಕೃತ ಜಾಹೀರಾತುಗಳನ್ನು ಮುಲಾಜಿಲ್ಲದೇ ತೆರವುಗೊಳಿಸಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಮಹಾನಗರ ಪಾಲಿಕೆಗಳಲ್ಲಿ ಜಾಹೀರಾತು ಶುಲ್ಕ ನಿಗದಿಪಡಿಸಿ ಕಾನೂನನ್ನು ಅನುಷ್ಠಾನಕ್ಕೆ ತರುವ ಸಂಬಂಧ ರೂಪಿಸಲಾಗಿರುವ ಕರ್ನಾಟಕ ಪೌರನಿಗಮಗಳ ಅಧಿನಿಯಮ 1976 ಮತ್ತು ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕ್ಕೆ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಈ ವಿಷಯ ತಿಳಿಸಿದರು.
ಕಳೆದ ಹಲವಾರು ವರ್ಷಗಳಿಂದ ಮಹಾನಗರ ಪಾಲಿಕೆಗಳು ಸೇರಿದಂತೆ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿದೆ. ಆದರೆ, ಕೆಲವೇ ಕೆಲವು ಜಾಹೀರಾತು ಸಂಸ್ಥೆಗಳು ಶುಲ್ಕವನ್ನು ನೀಡುತ್ತಿದ್ದವೇ ಹೊರತು ಬಹುತೇಕ ಸಂಸ್ಥೆಗಳು ಬಿಡಿಗಾಸನ್ನೂ ನೀಡದೇ ಲಾಭ ಮಾಡಿಕೊಳ್ಳುತ್ತಿದ್ದವು. ಹೀಗಾಗಿ ಸ್ಥಳೀಯ ಸಂಸ್ಥೆಗಳಿಗೆ ನೂರಾರು ಕೋಟಿ ರೂಪಾಯಿ ಆದಾಯ ಬರದಂತಾಗಿತ್ತು. ಇದನ್ನು ತಪ್ಪಿಸಿ ಹೆಚ್ಚು ಹೆಚ್ಚು ಆದಾಯ ಬರುವಂತೆ ಮಾಡುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಸ್ಥಳಕ್ಕನುಗುಣವಾಗಿ ಶುಲ್ಕ ನಿಗದಿ
ಆಯಾ ಪ್ರದೇಶಗಳಿಗೆ ಅನುಗುಣವಾಗಿ, ಜಾಹೀರಾತಿನ ಗಾತ್ರಕ್ಕೆ ಮತ್ತು ಅವಧಿಗೆ ತಕ್ಕಂತೆ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ಈ ಮಸೂದೆಗೆ ಅನುಮೋದನೆ ದೊರೆತ ನಂತದ ಆಯಾ ಪ್ರದೇಶಗಳ ಅನುಸಾರವಾಗಿ ಶುಲ್ಕ, ತೆರಿಗೆ ಮತ್ತು ಇನ್ನಿತರೆ ನೀತಿಗಳನ್ನು ರೂಪಿಸಲಾಗುತ್ತದೆ ಎಂದು ಸಚಿವರು ಸಭೆಯ ಗಮನಕ್ಕೆ ತಂದರು.
ಸಾರ್ವಜನಿಕರಿಗೆ ಅಡ್ಡಿಯಾದರೆ ಕ್ರಮ
ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುವ ರೀತಿಯಲ್ಲಿ ಹಾಕಿರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗುತ್ತದೆ. ಫಲಕಗಳನ್ನು ಹಾಕಿದವರ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ಲಾಸ್ಟಿಕ್ ನಿಷೇಧ
ಹಸಿರು ನ್ಯಾಯಮಂಡಳಿ ಪ್ಲಾಸ್ಟಿಕ್ ಅನ್ನು ನಿಷೇಧ ಮಾಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಫ್ಲೆಕ್ಸ್, ಬ್ಯಾನರ್ ಮತ್ತು ಜಾಹೀರಾತು ಫಲಕಗಳಲ್ಲಿ ಪ್ಲಾಸ್ಟಿಕ್ ಅನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಬಳಸಿದರೆ, ಆ ಫ್ಲೆಕ್ಸ್, ಬ್ಯಾನರ್, ಫಲಕ ಹಾಕಿದವರು ಮತ್ತು ಮುದ್ರಣ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬೈರತಿ ಸುರೇಶ್ ಎಚ್ಚರಿಕೆ ನೀಡಿದರು.
ಅನಧಿಕೃತ ಜಾಹೀರಾತು ವಿರುದ್ಧ ಸಮರ
ನಗರ ಪ್ರದೇಶಗಳು ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಜಾಹೀರಾತು ಇದ್ದರೂ ಅದನ್ನು ತೆರವುಗೊಳಿಸಿ, ಅದರ ವಾರಸುದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ತಿಳಿಸಿದ ಅವರು, ಎಐ, ದ್ರೋಣ್ ಸೇರಿದಂತೆ ಲಭ್ಯವಿರುವ ತಂತ್ರಜ್ಞಾನಗಳನ್ನು ಬಳಸಿ ಎಲ್ಲೆಲ್ಲಿ ಅನಧಿಕೃತ ಜಾಹೀರಾತುಗಳಿವೆಯೇ ಎಂಬುದನ್ನು ಸಮೀಕ್ಷೆ ನಡೆಸಿ ಅವುಗಳನ್ನು ತೆರವುಗೊಳಿಸಲಾಗುತ್ತದೆ ಎಂದರು.
ಸ್ಥಳೀಯ ಸಂಸ್ಥೆಗಳಿಗೇ ಹಣ
ಈ ಹೊಸ ಮಸೂದೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಜಾಗದಲ್ಲಿ ಜಾಹೀರಾತುಗಳಿಗೆ ಸ್ಥಳೀಯ ಪ್ರದೇಶಗಳಿಗೆ ಅನುಗುಣವಾಗಿ ಶುಲ್ಕವನ್ನು ವಿಧಿಸಲಾಗುತ್ತದೆ. ಹೀಗೆ ಜಾಹೀರಾತುಗಳಿಂದ ಬಂದ ಆದಾಯವನ್ನು ಆಯಾ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಮಾತ್ರ ಬಳಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸ್ವಂತ ಜಾಗದಲ್ಲಿದ್ದರೂ ತೆರಿಗೆ
ನಾಗರಿಕರು ತಮ್ಮ ಸ್ವಂತ ಜಾಗದಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಆದರೆ, ಆ ಜಾಹೀರಾತಿಗೆ ನಿಗದಿತ ತೆರಿಗೆಯನ್ನು ವಿಧಿಸಲು ವಿಧೇಯಕದಲ್ಲಿ ಅನುವು ಮಾಡಿಕೊಡಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಎಲ್ಇಡಿ ಜಾಹೀರಾತು ಫಲಕಗಳಿಗೆ ಪ್ರತ್ಯೇಕ ದರ
ಸದಸ್ಯರು ಎಲ್ಇಡಿ ಜಾಹೀರಾತು ಫಲಕಗಳ ಬಗ್ಗೆ ಗಮನಸೆಳೆದ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ ಸಚಿವ ಬೈರತಿ ಸುರೇಶ್ ಅವರು, ಎಲ್ಇಡಿ ಫಲಕಗಳಿಗೆ ಪ್ರತ್ಯೇಕ ಶುಲ್ಕವನ್ನು ವಿಧಿಸಲಾಗುತ್ತದೆ ಎಂದರು.
