ಬೆಂಗಳೂರು: ಬೆಂಗಳೂರು ನಗರದಲ್ಲಿರುವ ಮೇಲ್ಸೇತುವೆಗಳ ಕೆಳಭಾಗದ ಸ್ಥಳಗಳನ್ನು ಸೌಂದರ್ಯೀಕರಣಗೊಳಿಸುವ ಸಲುವಾಗಿ ಸಮಗ್ರ ಯೋಜನೆ ರೂಪಿಸುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಮೇಲ್ಸೇತುವೆಗಳ ಕೆಳಭಾಗಗಳ ಅಭಿವೃದ್ಧಿ, ಸಸಿ ನೆಡುವುದು, ಟ್ರಾನ್ಸ್‌ಫರ್ ಸ್ಟೇಷನ್‌ಗಳ ಸ್ಥಾಪನೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕುರಿತು ಇಂದು ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಗರದ ಪ್ರಮುಖ ಮೇಲ್ಸೇತುವೆಗಳ ಕೆಳಭಾಗದ ಪ್ರದೇಶಗಳು ಅಭಿವೃದ್ಧಿ ಪಡೆಯದೆ ನಗರದ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಹಾಗೂ ಬಿಡಿಎ ವತಿಯಿಂದ ನಿರ್ಮಿಸಲಾದ ಮೇಲ್ಸೇತುವೆಗಳ ಕೆಳಭಾಗದಲ್ಲಿ ಎಲ್ಲೆಲ್ಲಿ ಸೌಂದರ್ಯೀಕರಣ ಮತ್ತು ಅಭಿವೃದ್ಧಿ ಮಾಡಬಹುದೆಂಬುದರ ಪಟ್ಟಿ ಸಿದ್ಧಪಡಿಸಿ, ಅದಕ್ಕಾಗಿ ಸಮಗ್ರ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಿದಿರು ಸಸಿಗಳನ್ನು ನೆಡುವಂತೆ ಸೂಚನೆ:
ಜಿಬಿಎ ವ್ಯಾಪ್ತಿಯಲ್ಲಿ ಪಾಲಿಕೆ, ಮೆಟ್ರೋ, ಜಲಮಂಡಳಿ ಹಾಗೂ ಬಿಡಿಎ ಇಲಾಖೆಗಳು ಸಸಿಗಳನ್ನು ನೆಟ್ಟು ಅವುಗಳ ಸಮರ್ಪಕ ಪೋಷಣೆಗೆ ಕ್ರಮವಹಿಸಬೇಕು. ಪ್ರತಿ ಇಲಾಖೆಗಳಿಗೆ ನಿಗದಿಪಡಿಸಿರುವ ಗುರಿಗಳನ್ನು ಸಾಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ಜಲಮಂಡಳಿ ತನ್ನ ಎಸ್‌ಟಿಪಿ ಘಟಕಗಳ ಸುತ್ತಲೂ ಸಸಿ ನೆಡುವ ಯೋಜನೆ ರೂಪಿಸಬೇಕು. ರಸ್ತೆ ಬದಿ ಹಾಗೂ ಕೆರೆಗಳ ಸುತ್ತಲೂ ಬಿದಿರು ಸಸಿಗಳನ್ನು ನೆಟ್ಟು ಪೋಷಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜೊತೆಗೆ ಟ್ರೀ ಫಾರ್ಕ್ ನಿರ್ಮಾಣ ಮಾಡುವ ಸಲುವಾಗಿ ಸ್ಥಳ ಗುರುತಿಸುವುದು ಹಾಗೂ ಅದಕ್ಕೆ ತಗಲುವ ವೆಚ್ಚದ ಕುರಿತು ವರದಿ ನೀಡಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾರ್ಕಿಂಗ್ ನಿಯಮಾವಳಿ ರೂಪಿಸಲು ಸೂಚನೆ:
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಸಮರ್ಪಕ ಪಾರ್ಕಿಂಗ್ ನಿಯಮಾವಳಿಯನ್ನು ರೂಪಿಸಬೇಕು. ರಸ್ತೆ ಬದಿಗಳಲ್ಲಿರುವ ಖಾಲಿ ಜಾಗಗಳು ಅಥವಾ ಖಾಸಗಿ ನಿವೇಶನಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಸಾಧ್ಯತೆ ಕುರಿತು ಪರಿಶೀಲಿಸಿ, ಜಾಗದ ಮಾಲೀಕರಿಗೆ ನೀಡಬಹುದಾದ ಸೌಲಭ್ಯಗಳು & ಇನ್ಸೆಂಟಿವ್ ನೀಡುವ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದರು.
ಐದು ನಗರ ಪಾಲಿಕೆಗಳಲ್ಲಿ ಟೋಯಿಂಗ್ ಮಾಡುವ ಸಲುವಾಗಿಯೇ ಪ್ರತ್ಯೇಕ ಅಧಿಕಾರಿಗಳನ್ನು ನಿಯೋಜಿಸಿ ಆ ವರದಿ ನೀಡಬೇಕು. ಆ ಬಳಿಕ ಟೋಯಿಂಗ್ ವಾಹನಗಳನ್ನು ಬಳಸಿಕೊಂಡು ಅನಾಥ ವಾಹನಗಳನ್ನು ತೆರವುಗೊಳಿಸಲು ನಿರ್ದೇಶನ ನೀಡಿದರು.
ಟ್ರಾನ್ಸ್‌ಫರ್ ಸ್ಟೇಷನ್‌ಗಳ ಸ್ಥಾಪನೆಗೆ ಕ್ರಮ:
ನಗರದಲ್ಲಿ ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕಗಳನ್ನು ಈಗಾಗಲೇ ಮೂರು ವಿಭಾಗಗಳಲ್ಲಿ ಸ್ಥಾಪಿಸಲಾಗಿದೆ. ಇನ್ನೂ ನಾಲ್ಕು ಕಡೆ ಕಾಮಗಾರಿ ಪ್ರಗತಿಯಲ್ಲಿದ್ದು, ಎಂಟು ಸ್ಥಳಗಳಿಗೆ ಟೆಂಡರ್ ಕರೆದು ಕಾರ್ಯಾದೇಶ ನೀಡಬೇಕಿದೆ. ಉಳಿದ ಕಡೆಗಳಿಗೆ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಸರ್ಕಾರಿ ಜಾಗವನ್ನು ಹಸ್ತಾಂತರ ಮಾಡಿಕೊಳ್ಳುವ ಕಡೆ ಜಿಲ್ಲಾಧಿಕಾರಿಗಳು ಕೂಡಲೆ ಹಸ್ತಾಂತರ ಮಾಡುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮಾತನಾಡಿ, ನಗರದಲ್ಲಿ ರಸ್ತೆ ಬದಿಗಳಲ್ಲಿ ಅನಧಿಕೃತ ಪಾರ್ಕಿಂಗ್ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿಶೇಷ ಅಭಿಯಾನ ನಡೆಸಿ ಅನಧಿಕೃತ ಪಾರ್ಕಿಂಗ್ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ನಗರದಲ್ಲಿ ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಅವುಗಳ ಸಮರ್ಪಕ ಪೋಷಣೆ ಮಾಡಬೇಕು. ನಗರದಲ್ಲಿ ದ್ವಿತೀಯ ಹಂತದ ತ್ಯಾಜ್ಯ ವರ್ಗಾವಣೆ ಘಟಕಗಳ ನಿರ್ಮಾಣಕ್ಕೆ ಜಾಗದ ಅಭಾವವಿರುವ ಪ್ರದೇಶಗಳಲ್ಲಿ ಮಿನಿ ಟ್ರಾನ್ಸ್‌ಫರ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಡಾ. ಕೆ. ಹರೀಶ್ ಕುಮಾರ್, ಆರ್. ರಾಮಚಂದ್ರನ್, ಕಾರ್ಯದರ್ಶಿ ದೀಪಾ ಚೋಳನ್, ಬಿಡಿಎ ಆಯುಕ್ತ ಮಣಿವಣ್ಣನ್, ನಗರ ಪಾಲಿಕೆಗಳ ಆಯುಕ್ತರಾದ ರಾಜೇಂದ್ರ ಚೋಳನ್, ರಮೇಶ್ ಡಿ.ಎಸ್., ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ಸಿಇಒ ಕರೀಗೌಡ, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್, ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ರವಿಶಂಕರ್, ಅಭಿವೃದ್ಧಿ ಅಪರ ಆಯುಕ್ತ ಆರ್. ಲತಾ, ಸಂಚಾರಿ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ಸೇರಿದಂತೆ ಮೆಟ್ರೋ, ಡಲ್ಟ್, ಜಲಮಂಡಳಿ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
